ADVERTISEMENT

ಯದುವೀರ್‌ ಅವಿರೋಧ ಆಯ್ಕೆಯಾಗಲಿ: ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 14:27 IST
Last Updated 3 ಏಪ್ರಿಲ್ 2024, 14:27 IST
   

ಮೈಸೂರು: ಬಿಜೆಪಿಯಿಂದ ಅಂತರ ಕಾಯ್ದುಕೊಂಡು ಕಾಂಗ್ರೆಸ್‌ ಜೊತೆ ಗುರುತಿಸಿಕೊಂಡಿದ್ದ ವಿಧಾನಪರಿಷತ್‌ ಸದಸ್ಯ ಎಚ್. ವಿಶ್ವನಾಥ್‌ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಬುಧವಾರ ಭೇಟಿಯಾಗಿ ಚರ್ಚಿಸಿದರು. ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸುವಂತೆ ಕೋರಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿಶ್ವನಾಥ್, ‘ರಾಜಪ್ರಭುತ್ವದ ಕುಡಿ ಪ್ರಜಾಪ್ರಭುತ್ವದ ಪ್ರತಿನಿಧಿಯಾಗಲು ಸ್ಪರ್ಧಿಸಿದ್ದಾರೆ. ಯದುವೀರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕಿದೆ. ಕಾಂಗ್ರೆಸ್‌ಗೆ ಇನ್ನೂ ಕಾಲ ಮಿಂಚಿಲ್ಲ. ಅನ್ನ, ಅಕ್ಷರ, ಆರೋಗ್ಯ ಕೊಟ್ಟ ಯದುವಂಶಕ್ಕೆ ಗೌರವ ಕೊಟ್ಟು ಯದುವೀರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕು’ ಎಂದು ಹೇಳಿದರು.

‘ಮೈಸೂರಿನ ಅರಸರು ಜಾತಿ ಮುಂದಿಟ್ಟುಕೊಂಡು ಅಭಿವೃದ್ಧಿ ಮಾಡಿಲ್ಲ. ಯದುವಂಶದವರು ಜಾತಿ ಮೀರಿದವರು’ ಎಂದರು.

ADVERTISEMENT

‘ನಾನು ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಕೇಳಿದ್ದುದು ಸತ್ಯ. ವಿಷಯಾಧಾರಿತವಾಗಿ ಬಿಜೆಪಿ ಟೀಕಿಸಿದ್ದೂ ಸತ್ಯ. ಆದರೆ, ಯದುವೀರ್‌ ಸ್ಪರ್ಧಿಸಿದ್ದರಿಂದ ಅವರನ್ನು ಬೆಂಬಲಿಸುವ ನಿರ್ಧಾರ ಕೈಗೊಂಡಿದ್ದೇನೆ. ಅವರು ಯಾವುದೇ ಪಕ್ಷದಿಂದ ಕಣಕ್ಕಿಳಿದಿದ್ದರೂ ಅವರ ವಿರುದ್ಧ ಸ್ಪರ್ಧಿಸದಿರುವ ತೀರ್ಮಾನ ಮಾಡುತ್ತಿದ್ದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.