ADVERTISEMENT

ಮೈಸೂರು: ಮಂಗೋಲಿಯಾಕ್ಕೆ ಮರಳದ ಅತಿಥಿ

ಹದಿನಾರು ಕೆರೆ: ಮುಂದುವರಿದ ಪಟ್ಟೆತಲೆ ಹೆಬ್ಬಾತುಗಳ ಕಲರವ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2025, 7:35 IST
Last Updated 28 ಫೆಬ್ರುವರಿ 2025, 7:35 IST
ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದ ಕೆರೆಯಲ್ಲಿ ಮಧ್ಯ ಏಷ್ಯಾದಿಂದ ಬಂದಿರುವ ‍ಪಟ್ಟೆತಲೆ ಹೆಬ್ಬಾತುಗಳು ಪಕ್ಷಿಪ್ರಿಯರನ್ನು ಆಕರ್ಷಿಸುತ್ತಿವೆ –ಪ್ರಜಾವಾಣಿ ಚಿತ್ರಗಳು: ಅನೂಪ್‌ ರಾಘ ಟಿ.
ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದ ಕೆರೆಯಲ್ಲಿ ಮಧ್ಯ ಏಷ್ಯಾದಿಂದ ಬಂದಿರುವ ‍ಪಟ್ಟೆತಲೆ ಹೆಬ್ಬಾತುಗಳು ಪಕ್ಷಿಪ್ರಿಯರನ್ನು ಆಕರ್ಷಿಸುತ್ತಿವೆ –ಪ್ರಜಾವಾಣಿ ಚಿತ್ರಗಳು: ಅನೂಪ್‌ ರಾಘ ಟಿ.   

ಮೈಸೂರು: ನಂಜನಗೂಡು ತಾಲ್ಲೂಕಿನ ಹದಿನಾರು ಕೆರೆಯಲ್ಲಿ ‘ಪಟ್ಟೆತಲೆ ಹೆಬ್ಬಾತು’ಗಳ ಕಲರವ ಚಳಿಗಾಲ ಮುಗಿದರೂ ಮುಂದುವರಿದಿದೆ.

ಮಂಗೋಲಿಯಾ ಹಾಗೂ ರಷ್ಯಾದ ಬೈಕಲ್‌ ಸರೋವರದ ದಕ್ಷಿಣದ ಭಾಗ ಅವುಗಳ ಮೂಲ ನೆಲೆ. ಸೆಪ್ಟೆಂಬರ್‌ನಿಂದಲೇ ಅಲ್ಲಿ ಚಳಿ ಆರಂಭವಾಗಿ ಹಿಮ ಆವರಿಸುತ್ತಿದ್ದಂತೆ ಕ್ರಮೇಣ ಆಹಾರ ಲಭ್ಯತೆಯು ಕಡಿಮೆಯಾಗುತ್ತದೆ. ಅದಕ್ಕಾಗಿ ಶತಮಾನಗಳಿಂದಲೂ ಈ ಹಕ್ಕಿಗಳು ಭಾರತಕ್ಕೆ ಬರುತ್ತಿವೆ. ಹೀಗೆ, ಇಲ್ಲಿಗೆ ಬಂದಿರುವ ಅವು ಮಾರ್ಚ್‌ 15ರೊಳಗೆ ಮರಳಲಿವೆ ಎನ್ನಲಾಗಿದೆ. 

‘ನವೆಂಬರ್‌ 3ನೇ ವಾರದಲ್ಲಿ ಇಲ್ಲಿಗೆ ಬಂದು, ಫೆಬ್ರುವರಿ 3ನೇ ವಾರದಲ್ಲಿ ಬೇಸಿಗೆ ಆರಂಭವಾಗುತ್ತಿದ್ದಂತೆ ಹೆಬ್ಬಾತುಗಳು ವಾಪಸಾಗುವುದು ವಾಡಿಕೆ. ಆದರೆ, 4ರಿಂದ 5 ಕಿ.ಮೀ ವಿಸ್ತಾರವಾಗಿರುವ ಹದಿನಾರು ಕೆರೆಯಲ್ಲಿ ಎರಡೂವರೆ ಸಾವಿರ ಪಟ್ಟೆತಲೆ ಹೆಬ್ಬಾತುಗಳು ಇನ್ನೂ ಕಾಣಸಿಗುತ್ತಿವೆ’ ಎಂದು ಪಕ್ಷಿತಜ್ಞ ಎ.ಶಿವ‍ಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಸಸ್ಯಹಾರಿಗಳು: ಹಿಮಾಲಯ ದಾಟಿ ಬಂದ ಈ ಹಕ್ಕಿಗಳ ಆಹಾರ ಮೀನಲ್ಲ. ಉತ್ತರ ಭಾರತದಲ್ಲಿ ಗೋಧಿ ಹಾಗೂ ದಕ್ಷಿಣದಲ್ಲಿ ಭತ್ತವನ್ನು ತಿನ್ನುತ್ತವೆ. ಕೆರೆಗಳಲ್ಲಿನ ಜಲಸಸ್ಯಗಳೂ ಅವುಗಳ ಆಹಾರವಾಗಿದೆ. ಮೈಸೂರು ಸೀಮೆಯಲ್ಲಿ ಭತ್ತದ ಕಟಾವು ಜನವರಿಯಲ್ಲೇ ಮುಗಿದಿದೆ. ಗದ್ದೆಯಲ್ಲಿ ಚೆಲ್ಲಿದ ಭತ್ತವನ್ನು ತಿನ್ನುತ್ತಿದ್ದ ಅವು, ಇದೀಗ ಭತ್ತದ ಗದ್ದೆಯ ಕೂಳೆಗಳನ್ನು ತಿನ್ನುತ್ತಿವೆ.

ಕಪ್ಪು ಪಟ್ಟೆ: ಬಿಳಿ ತಲೆಯ ಮೇಲೆರಡು ಕಪ್ಪು ಪಟ್ಟೆ, ಹಳದಿ ಕೊಕ್ಕು, ಬೂದು ಬಣ್ಣದ ಕೊರಳು– ರೆಕ್ಕೆಗಳನ್ನು ಹೊಂದಿರುವ ಈ ಪಟ್ಟೆತಲೆ ಹೆಬ್ಬಾತುಗಳು ಇತರ ವಲಸೆ ಹಕ್ಕಿಗಳು ಹಾಗೂ ಬಾತುಗಳಲ್ಲಿಯೇ ದೊಡ್ಡವು. ವಲಸೆ ಹಾದಿಯಲ್ಲಿ ನಿರ್ದಿಷ್ಟ ಕೆರೆ ಆಯ್ದುಕೊಂಡು ಹಗಲಿನ ವೇಳೆ ಕೆರೆಗಳ ಮಧ್ಯೆ ಈಜುವ ಅವು, ಸಂಜೆ ವೇಳೆ ಆಹಾರ ಹುಡುಕಿ ಹೊರಡುತ್ತವೆ.

ಸಂತಾನೋತ್ಪತ್ತಿ ಮಾಡುವುದಿಲ್ಲ: ‘ಪಟ್ಟೆತಲೆ ಹೆಬ್ಬಾತುಗಳು ಇಲ್ಲಿ ಸಂತಾನೋತ್ಪತ್ತಿ ನಡೆಸುವುದಿಲ್ಲ. ಮಂಗೋಲಿಯಾ ಭಾಗ ಹಿಮದಿಂದ ಮುಚ್ಚುವುದರಿಂದ ಭಾರತಕ್ಕೆ ಆಗಮಿಸುತ್ತವೆ. ಫೆಬ್ರುವರಿ ವೇಳೆಗೆ ವಾಪಸಾಗುವ ಅವು ಮೂಲ ಆವಾಸ ಸ್ಥಳದಲ್ಲಿಯೇ ಮೊಟ್ಟೆಗಳನ್ನು ಇಡುತ್ತವೆ’ ಎಂದು ಪರಿಸರ ತಜ್ಞ ಕೆ.ಮನು ಹೇಳಿದರು.

ಎತ್ತರದಲ್ಲಿ ಹಾರುವ ಹಕ್ಕಿ: ‘ಸಮುದ್ರಮಟ್ಟದಿಂದ ಸರಾಸರಿ 6 ಸಾವಿರ ಮೀಟರ್‌ ಎತ್ತರವಿರುವ ಹಿಮಾಲಯ ದಾಟಿ ಬರುವ ಪಟ್ಟೆತಲೆ ಹೆಬ್ಬಾತುಗಳು, ಪರ್ವತದ ಇಳಿಜಾರು ಹಾಗೂ ಎತ್ತರಕ್ಕನುಗುಣವಾಗಿ ಅನುಸರಿಸಿ ಹಾರುತ್ತವೆ. ಭಾರತದಲ್ಲಿ ನಿರ್ದಿಷ್ಟ ಕೆರೆಗಳನ್ನು ಗುರುತು ಮಾಡಿಕೊಂಡಿರುವ ಇವು ವರ್ಷದಲ್ಲೊಮ್ಮೆ ತಪ್ಪದೇ ತಮ್ಮ ನೆಚ್ಚಿನ ಕೆರೆಗಳಿಗೆ ಬರುತ್ತವೆ’ ಎಂದು ಮನು ಹೇಳಿದರು.

ಕೆರೆಯಲ್ಲಿ ವಿಹರಿಸುತ್ತಿರುವ ಹೆಬ್ಬಾತುಗಳು
‘ಎಫ್‌– 88’ ಪಟ್ಟೆತಲೆ ಹೆಬ್ಬಾತು
ಹಿಮಾಲಯ ದಾಟಿ ಬಂದ ಹಕ್ಕಿಗಳು ಬೇಸಿಗೆ ಆರಂಭಕ್ಕೂ ಮೊದಲು ವಾಪಸು ಮಾರ್ಚ್‌ 2ನೇ ವಾರದೊಳಗೆ ಆವಾಸಸ್ಥಾನಕ್ಕೆ 
5ನೇ ಬಾರಿಗೆ ಬಂದ ‘ಎಫ್‌–88’
‘ಹದಿನಾರು ಕೆರೆಗೆ 5ನೇ ಬಾರಿಗೆ ‘ಎಫ್– 88’ ಹೆಸರಿನ ಹೆಬ್ಬಾತು ಬಂದಿದ್ದು ಇದು ದಾಖಲೆಯಾಗಿದೆ’ ಎಂದು ಪಕ್ಷಿತಜ್ಞ ಎ.ಶಿವಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು. ‘ಜುಲೈ 13 2019ರಲ್ಲಿ ಮಂಗೋಲಿಯಾದ ಅರ್ಕಾನ್‌ಗಾಯ್ ಪ್ರಾಂತ್ಯದ ಉಪ್ಪು ನೀರಿನ ಸರೋವರದಲ್ಲಿ ಹಸಿರು ಟ್ಯಾಗ್‌ ಅನ್ನು ಅಲ್ಲಿನ ‘ವನ್ಯಜೀವಿ ಸಂರಕ್ಷಣೆ ಮತ್ತು ವಿಜ್ಞಾನ ಕೇಂದ್ರ’ದ ವಿಜ್ಞಾನಿಗಳು ಹಾಕಿದ್ದರು. 2021ರಿಂದ ಹದಿನಾರು ಕೆರೆಗೆ ಬರುತ್ತಿದೆ’ ಎಂದು ಅವರು ತಿಳಿಸಿದರು. ‘15 ಸಾವಿರ ಕಿ.ಮೀ ದಾಟಿದ್ದು ಕಳಲೆ ಹಾಗೂ ಹದಿನಾರು ಕೆರೆಗಳಲ್ಲಿ ಕಾಣಸಿಕ್ಕಿದೆ. ಕಳೆದ ವರ್ಷ ಜನವರಿಯಂದು 1500 ಹೆಬ್ಬಾತುಗಳು ಬಂದಿದ್ದವು. ಈ ಬಾರಿ ಅವುಗಳ ಸಂಖ್ಯೆ 2500 ದಾಟಿದೆ’ ಎಂದರು.
ಬ್ರಿಟಿಷರ ಅವಧಿಯಲ್ಲಿ ನಿಶಾಚರಿಗಳಾದವು
‘ಯೂರೋಪಿಯನ್ನರಿಗೆ ಬಾತುಗಳು ಬೇಟೆ ಹಕ್ಕಿಗಳಾಗಿದ್ದವು. ಹೆಬ್ಬಾತುಗಳ ಪ್ರಭೇದಕ್ಕೆ ಸೇರಿದ ಬೂದು ತಲೆಯ ಹೆಬ್ಬಾತು (ಗ್ರೇ ಹೆಡ್ಡೆಡ್‌ ಗೂಸ್‌) ಬೇಟೆಯನ್ನು ಈಗಲೂ ನಡೆಸುತ್ತಾರೆ. ಭಾರತದಲ್ಲಿ ಬ್ರಿಟಿಷರ ಅವಧಿಯಲ್ಲಿ ಪಟ್ಟೆ ತಲೆ ಹೆಬ್ಬಾತುಗಳ ಬೇಟೆ ನಡೆಯುತ್ತಿತ್ತು. ಆದ್ದರಿಂದ ಅವು ನಿಶಾಚರಿಗಳಾಗಿ ಬದಲಾದವು. ಹಗಲಿನ ವೇಳೆ ಕೆರೆಗಳ ಮಧ್ಯೆ ಈಜುವ ಅವು ರಾತ್ರಿ ವೇಳೆ ಆಹಾರ ಹುಡುಕಿ ಹೊರಡುತ್ತವೆ‌’ ಎಂದು ಪರಿಸರ ತಜ್ಞ ಕೆ.ಮನು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.