ಮೈಸೂರು: ಕನ್ನಡ ಪ್ರೀತಿ ಬೆಳೆಸುವ ಹಾಗೂ ಅಭಿಮಾನವನ್ನು ಉದ್ದೀಪಿಸುವ ಉದ್ದೇಶದಿಂದ ಇಲ್ಲಿನ ಸಿದ್ಧಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯನ್ನೂ ಒಳಗೊಂಡಿರುವ ಜಿಲ್ಲಾಮಟ್ಟದ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ‘ಹಲ್ಮಿಡಿ’ ಶಾಸನದ ಪ್ರತಿಕೃತಿ ಸ್ಥಾಪಿಸಲಾಗಿದೆ. ಪ್ರಸ್ತುತ ‘ಪೀಠ’ದ (ಸ್ತಂಭ) ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ.
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿದ ಸವಿನೆನಪಿನಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಸ್ಥಾಪಿಸಲು ಸರ್ಕಾರ ಹೋದ ವರ್ಷ ಆದೇಶಿಸಿತ್ತು. ಇದರ ಅನುಷ್ಠಾನದ ಹೊಣೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಹಿಸಲಾಗಿತ್ತು. ಇದರಂತೆ, ಪ್ರತಿಕೃತಿಯನ್ನು ಸ್ಥಾಪಿಸಲಾಗಿದೆ.
ಐದನೇ ಶತಮಾನದಲ್ಲಿ ರಚಿಸಿದ ಮೂಲ ಹಲ್ಮಿಡಿ ಶಾಸನದಲ್ಲಿ ಇರುವಂತೆಯೇ ಕನ್ನಡದ 16 ಸಾಲುಗಳ ಬರಹದ ತದ್ರೂಪನ್ನು ಪ್ರತಿಕೃತಿಯಲ್ಲಿ ಸಿದ್ಧಪಡಿಸಲಾಗಿದೆ. ಸರ್ಕಾರದ ನಿರ್ದೇಶನದಂತೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಮೂಲಕ ನುರಿತ ಶಿಲ್ಪಿಗಳ ಮೂಲಕ ಪ್ರತಿಕೃತಿಯನ್ನು ಕೆತ್ತಿ ಕಳುಹಿಸಿಕೊಡಲಾಗಿದೆ.
ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಕಚೇರಿಗಳು ಇಲ್ಲಿವೆ. ಇಲ್ಲಿಗೆ ವಿವಿಧ ಕೆಲಸಗಳಿಗಾಗಿ ನೂರಾರು ಮಂದಿ ಬರುತ್ತಾರೆ. ಹೀಗೆ, ಬಂದವರ ಗಮನವನ್ನು ಸೆಳೆಯುವುದು ಹಾಗೂ ಈ ಮೂಲಕ ಹಲ್ಮಿಡಿ ಶಾಸನದ ಬಗ್ಗೆ ಹೆಚ್ಚಿನ ಜನರು ತಿಳಿದುಕೊಳ್ಳುವಂತೆ ಮಾಡಬೇಕು ಎಂಬ ಉದ್ದೇಶದಿಂದ ಸ್ಥಾಪಿಸಲಾಗಿದೆ.
‘ಮೂಲ ಶಾಸನದಲ್ಲಿ ಇರುವಂತೆಯೇ ಪ್ರತಿಕೃತಿಯನ್ನೂ ಕೆತ್ತಿಸಲಾಗಿದೆ. ಶಿಲ್ಪಕಲಾ ಅಕಾಡೆಮಿಯ ಮೂಲಕ ಒದಗಿಸಲಾದ ಅದನ್ನು ಇಲ್ಲಿಗೆ ತಂದು ಸ್ಥಾಪಿಸಲಾಗಿದೆ. ಇದನ್ನು ಜಿಲ್ಲಾ ಉಸ್ತುವಾರಿ ಸಚಿವರು ಅನಾವರಣಗೊಳಿಸಿದ್ದಾರೆ. ಇಲಾಖೆಯಿಂದ ನೀಡಲಾದ ವಿನ್ಯಾಸ ಮತ್ತು ಸ್ವರೂಪದಂತೆಯೇ ಪೀಠದ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಇದಕ್ಕಾಗಿ ₹ 50ಸಾವಿರ ಅನುದಾನವನ್ನೂ ಒದಗಿಸಲಾಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕಾಂಕ್ರೀಟ್ ತಳಹದಿಯ ಮೇಲೆ ಗ್ರಾನೈಟ್ ಉದ್ಘಾಟನಾ ಫಲಕವನ್ನು ಅಳವಡಿಸಲಾಗುವುದು. ಪ್ರತಿಕೃತಿಯು ಸುಮಾರು 2 ಅಡಿ ಅಗಲ, 4 ಅಡಿ ಉದ್ದವಿದೆ. ಒಟ್ಟಾರೆ ಪ್ರತಿಕೃತಿ ಸ್ತಂಭವು 7 ಅಡಿ ಎತ್ತರ ಮತ್ತು 4 ಅಡಿ ಅಗಲದ ವಿನ್ಯಾಸದಲ್ಲಿ ನಿರ್ಮಾಣವಾಗುತ್ತಿದೆ. ರಾಜ್ಯೋತ್ಸವದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎನ್ನುತ್ತಾರೆ ಅಧಿಕಾರಿಗಳು.
ಕನ್ನಡದ ಲಿಪಿಗೆ ಸಂಬಂಧಿಸಿದ ಲಭ್ಯವಾಗಿರುವ ಮೊಟ್ಟ ಮೊದಲ ದಾಖಲೆ ಇದಾಗಿರುವುದರಿಂದ ಅದರ ಮಹತ್ವವನ್ನು ಜನರಿಗೆ ತಿಳಿಸುವುದು ಸ್ಥಾಪನೆಯ ಉದ್ದೇಶ.ಎಂ.ಡಿ. ಸುದರ್ಶನ್, ಸಹಾಯಕ ನಿರ್ದೇಶಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
16 ಸಾಲುಗಳ ದತ್ತಿ ಶಾಸನ ಶಾಸನವು ಕದಂಬ ಲಿಪಿಯಲ್ಲಿರುವ ಅತ್ಯಂತ ಹಳೆಯ ಕನ್ನಡ ಶಾಸನವಾಗಿದೆ. ಇದನ್ನು ಹಾಸನ ಜಿಲ್ಲೆಯ ಗಡಿಯಲ್ಲಿರುವ ಹಲ್ಮಿಡಿ ಗ್ರಾಮದಲ್ಲಿ 1936ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಪುರಾತತ್ವ ನಿರ್ದೇಶಕರಾಗಿದ್ದ ಎಂ.ಎಚ್.ಕೃಷ್ಣ ಅವರು ಪತ್ತೆ ಮಾಡಿದರು. ಶಾಸನವು 16 ಸಾಲುಗಳನ್ನು ಹೊಂದಿದ್ದು ಮರಳು ಶಿಲ್ಪದ ಮೇಲೆ ಕೆತ್ತಲ್ಪಟ್ಟಿದೆ. ಇದು ಹಳಗನ್ನಡ ಹಾಗೂ ಬ್ರಾಹ್ಮೀ ಲಿಪಿಗಳನ್ನು ಹೋಲುವಂತಹ ಕನ್ನಡ ಲಿಪಿಯಲ್ಲಿದೆ. ಕದಂಬ ವಂಶದ ಕಾಕುಸ್ಥವರ್ಮ ಬರೆಸಿದ ದತ್ತಿಶಾಸನ ಇದಾಗಿದೆ. ಇದರ ಪ್ರತಿಕೃತಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ತಲೆ ಎತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.