ADVERTISEMENT

ಮಕ್ಕಳ ಜತೆ ಮಗುವಾದ ನಾದಬ್ರಹ್ಮ

ಕುವೆಂಪುನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಂವಾದ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2018, 13:33 IST
Last Updated 9 ಆಗಸ್ಟ್ 2018, 13:33 IST
ಕುವೆಂಪುನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳೊಂದಿಗೆ ಹಂಸಲೇಖ ಸಂವಾದ ನಡೆಸಿದರು
ಕುವೆಂಪುನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳೊಂದಿಗೆ ಹಂಸಲೇಖ ಸಂವಾದ ನಡೆಸಿದರು   

ಮೈಸೂರು: ಆ ಶಾಲೆಯಲ್ಲಿ ಸಂಗೀತ ನಿನಾದ ಕೇಳದಿದ್ದರೂ ಮಕ್ಕಳ ಕಲರವ, ಸಂತಸಕ್ಕೆ ಪಾರವೇ ಇರಲಿಲ್ಲ. ‘ನಾದಬ್ರಹ್ಮ’ ಎಂಬ ಬಿರುದಾಂಕಿತ ವ್ಯಕ್ತಿಯ ಬರುವಿಕೆಗಾಗಿ ಮಕ್ಕಳು ಕಾತರಿಸುತ್ತಿದ್ದರು. ಅವರು ಬರುತ್ತಿದ್ದಂತೆ ಬ್ಯಾಂಡ್‌ಸೆಟ್‌ನ ಸದ್ದು ಮೊಳಗಿತು. ಅವರನ್ನು ಪ್ರೀತಿಯಿಂದ ಬರಮಾಡಿಕೊಂಡರು. ಮಕ್ಕಳ ಜತೆ ಮಗುವಾದ ಅವರು ‘ಮನೆಯಲಿ ಇಲಿ’ ಎಂಬ ಪುಟ್ಟ ಕಥೆಯನ್ನು ಹಾಡುಗಾರಿಕೆ ಶೈಲಿಯಲ್ಲಿ ಪ್ರಸ್ತುತ ಪಡಿಸಿದರು. ಮಕ್ಕಳು ತಮ್ಮದೇ ಶೈಲಿಯಲ್ಲಿ ಪ್ರಶ್ನೆಗಳನ್ನು ಆ ವ್ಯಕ್ತಿಗೆ ಕೇಳಿ, ಉತ್ತರ ಪಡೆದುಕೊಂಡರು.

ಕುವೆಂಪುನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಕಂಡುಬಂದ ಚಿತ್ರಣವಿದು. ಕಲಿಸು ಫೌಂಡೇಷನ್‌ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಂಸಲೇಖ ಅವರು ಮಕ್ಕಳೊಂದಿಗೆ ಸಂವಾದ ನಡೆಸಿದರು.

‘ಸಂಗೀತ ಕ್ಷೇತ್ರಕ್ಕೆ ಬರಲು ನಿಮಗೆ ಸ್ಫೂರ್ತಿ ಯಾರು’ ಎಂದು 7ನೇ ತರಗತಿ ವಿದ್ಯಾರ್ಥಿನಿ ಲಕ್ಷ್ಮಿ ಪ್ರಶ್ನಿಸಿದಳು.

ADVERTISEMENT

ಅದಕ್ಕೆ ಉತ್ತರಿಸಿದ ಹಂಸಲೇಖ, ‘ನೀನೇ! ನೀನು ಎಷ್ಟು ಚೆನ್ನಾಗಿ ನಗುತ್ತಿದ್ದೀಯಲ್ಲಾ? ಅದನ್ನು ನೋಡಿ ನನಗೆ ಹಾಡು ಬರುತ್ತದೆ ಅಷ್ಟೇ. ನೀನೇ ಅದಕ್ಕೆ ಸ್ಫೂರ್ತಿ’ ಎಂದರು.

‘ನಿಮ್ಮ ಬಾಲ್ಯದ ಬಗ್ಗೆ ಹೇಳಿ’ ಎಂದು ವಿದ್ಯಾರ್ಥಿ ಮಣಿಕಂಠ ಕೋರಿದ.

‘ನನಗೆ 66 ವರ್ಷ. ಬಾಲ್ಯದಲ್ಲಿ 10 ವರ್ಷಗಳ ಕಥೆ ಇದೆ. ಬಾಲ್ಯದಲ್ಲಿ ನಾನು ನಿಮ್ಮ ರೀತಿ ಚಡ್ಡಿ ಹಾಕಿಕೊಳ್ಳುತ್ತಿರಲಿಲ್ಲ. ಪುಟಗೋಸಿ ಹಾಕಿಕೊಳ್ಳುತ್ತಿದ್ದೆ. ಆ ಮೇಲೆ ಗೋಲಿ ಆಡುತ್ತಿದ್ದೆವು. ಅವುಗಳನ್ನು ಇಟ್ಟುಕೊಳ್ಳಲು ಜೇಬು ಇಲ್ಲದೆ ಕೈಯಲ್ಲೇ ಇಟ್ಟುಕೊಳ್ಳುತ್ತಿದ್ದೆ. ರಾತ್ರಿ ಹೊತ್ತು ತಲೆದಿಂಬದ ಕೆಳಗೆ ಬಚ್ಚಿಡುತ್ತಿದ್ದೆವು. ಆ ಮೇಲೆ ಗೋಲಿಗಳನ್ನು ಬೇರೆಯವರಿಗೆ ಕೊಟ್ಟು ಕಾಪಾಡುತ್ತಿದ್ದೆವು. ಏಕೆಂದರೆ ನಮ್ಮ ಬಳಿ ಚಡ್ಡಿ ಇರಲಿಲ್ಲ!

‘ನೀವು ವಿರಾಮದ ವೇಳೆಯಲ್ಲಿ ಏನು ಮಾಡುತ್ತೀರಿ’ ಎಂದು ದೀಪಿಕಾ ಪ್ರಶ್ನಿಸಿದಳು.

ವಿರಾಮದ ವೇಳೆಯಲ್ಲಿ ಏನಾದರೂ ಯೋಚನೆ ಮಾಡುತ್ತಿರುತ್ತೇನೆ. ಓದುತ್ತೇನೆ, ಬರೆಯುತ್ತೇನೆ, ಪಿಯಾನೋ ನುಡಿಸುತ್ತೇನೆ. ನಾನು ನನ್ನ ಫ್ರೀ ಟೈಂ ಅನ್ನು ಯಾವತ್ತೂ ಫ್ರೀಯಾಗಿ ಬಿಡೋದಿಲ್ಲ.

‘ನೀವು ತುಂಬಾ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದೀರಿ. ಅದರಲ್ಲಿ ನಿಮಗೆ ಇಷ್ಟವಾದ ಹಾಡು ಯಾವುದು’ ವಿದ್ಯಾಶ್ರೀ ಕೇಳಿದಳು.

‘ಯಾವ ಹಾಡು ಹಿಟ್ ಆಗಿಲ್ಲವೋ ಆ ಹಾಡು ನನಗೆ ಬಹಳ ಇಷ್ಟ. ಬಹಳ ಹಾಡುಗಳು ಇಷ್ಟವಾಗಿದೆ. ಕರುನಾಡ ತಾಯಿ ಸದಾ ಚಿನ್ಮಯಿ ಹಾಡು ತುಂಬಾ ಇಷ್ಟ.’

‘ರಜೆಯಲ್ಲಿ ನೀವು ಇಷ್ಟಪಟ್ಟು ಹೋಗುವ ಸ್ಥಳಗಳು ಯಾವುವು’ ಎಂದು ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದ.

‘ನಾನು ರಜೆಯಲ್ಲಿ ಬಾಲ್ಯದ ಗೆಳೆಯನ ಮನೆಗೇ ಹೋಗುತ್ತೇನೆ.’

‘ನಿಮ್ಮ ದಿನಚರಿ ಏನು’ ಎಂದು ಗಿರೀಶ್ ಕೇಳಿದ.

‘ಬೆಳಿಗ್ಗೆ 5ರಿಂದ 7 ಗಂಟೆವರೆಗೂ ಒಂದೇ ದಿನಚರಿ. ಏಳುವುದು, ನಿತ್ಯ ಕರ್ಮ ಮುಗಿಸುವುದು, ಸ್ನಾನ ಮಾಡುವುದು, ಪೂಜೆ ಮಾಡುವುದು, ಕೆಲಸಕ್ಕೆ ಹೋಗುವುದು. 40 ವರ್ಷದಿಂದಲೂ ಈ ಕೆಲಸ ಮಾಡುತ್ತಿದ್ದೇನೆ. 9 ಗಂಟೆ ಮೇಲೆ ನನ್ನ ಪಾಲಿನ ಕೆಲಸ ಏನು ಬರುತ್ತದೆಯೋ ಅದನ್ನು ಗಮನಿಸುತ್ತೇನೆ. ಅರ್ಥ ಮಾಡಿಕೊಳ್ಳುತ್ತೇನೆ. ಮಾಡಬೇಕೋ ಬೇಡವೋ ಎಂದು ನಿರ್ಧರಿಸುತ್ತೇನೆ. ಇಷ್ಟ ಆಯ್ತು ಅಂದರೆ ಮಾಡೇ ಮಾಡುತ್ತೇನೆ. ಹಾರ್ಡ್‌ವರ್ಕ್ ಅತ್ಯುತ್ತಮ ಕೆಲಸ ಎಂದು ತಿಳಿದುಕೊಂಡಿದ್ದೇನೆ. ನಿಮಗೆ ತುಂಬಾ ದುಃಖ ಆದಾಗ ಕೆಲಸ ಮಾಡಿ, ಮನಸ್ಸನ್ನು ಸಮತೋಲನದಲ್ಲಿ ಇಡಬೇಕು.’

‘ಮುಂದಿನ ಚಿತ್ರ ಯಾವುದು’ ಎಂದು 8ನೇ ತರಗತಿ ವಿದ್ಯಾರ್ಥಿನಿ ಸೋನು ಪ್ರಶ್ನಿಸಿದಳು.

‘ಶಕುಂತ್ಲೆ ಚಿತ್ರವನ್ನು ನಿರ್ದೇಶಿಸಿದ್ದೇನೆ. ಅದಾದ ಮೇಲೆ ಬಿಚ್ಚುಗತ್ತಿ ಎಂಬ ದೊಡ್ಡ ಸಿನಿಮಾ ಮಾಡುತ್ತಿದ್ದೇನೆ. ಅದು ಚಿತ್ರದುರ್ಗದ ನಾಯಕರ ಕಥೆ. ಅದಕ್ಕೂ ನಾನೇ ನಿರ್ದೇಶಕ. ಎರಡೂ ಚಿತ್ರಗಳ 12 ಹಾಡುಗಳು ಸದ್ಯದಲ್ಲೇ ಬಿಡುಗಡೆ ಆಗಲಿವೆ.’

‘ನಿಮಗೆ ಮೈಸೂರಿನಲ್ಲಿ ಯಾವ ಸ್ಥಳ ಇಷ್ಟ’ ಎಂದು ನಿರ್ಮಲಾ ಕೇಳಿದಳು.

‘ಮೈಸೂರೇ ನನಗೆ ಇಷ್ಟ. ಮೈಸೂರಿನಲ್ಲಿ ಚಿಕ್ಕ ವಯಸ್ಸಿನಿಂದ ದಸರಾ ನೋಡಲು ಬರುತ್ತಿದ್ದೆ. ತಂದೆ ಹೆಗಲ ಮೇಲೆ ಕೂರಿಸಿಕೊಂಡು ಬರುತ್ತಿದ್ದರು. ಅದಾದ ಮೇಲೆ ಹೆಂಡತಿಯನ್ನು ಲವ್ ಮಾಡಿದ ಮೇಲೆ ಮೈಸೂರಿನಲ್ಲಿ ಸುತ್ತದೇ ಇರೋ ಜಾಗ ಇಲ್ಲ. ತಿನ್ನದೇ ಇರೋ ತಿಂಡಿ ಇಲ್ಲ.’

‘ನೀವು ಓದಿದ ಶಾಲೆ ಬಗ್ಗೆ ಹೇಳಿ’ ಎಂದು ವಿ.ಚಂದನ್ ಕೇಳಿದ.
‘ಬೆಂಗಳೂರಿನ ಪೂರ್ಣಯ್ಯ ಛತ್ರದಲ್ಲಿ ನನ್ನ ಪ್ರಾಥಮಿಕ ಶಿಕ್ಷಣ ಮುಗಿಸಿದೆ.. ಕಲಬುರ್ಗಿ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದಿದೆ. ಆಗ ಎರಡು ವಿಷಯಗಳಲ್ಲಿ ಫೇಲ್ ಆಗಿದ್ದೆ.’

‘ನಿಮಗೆ ಇಷ್ಟವಾದ ಕ್ರೀಡೆ ಯಾವುದು’ ಎಂಬ ಅಂಬಿಕಾಳ ಪ್ರಶ್ನೆಗೆ, ‘ಹಾಕಿ’ ಎಂದು ಹಂಸಲೇಖ ಉತ್ತರಿಸಿದರು.

‘ಕಾರ್ಪೆಂಟರ್‌ ಕೆಲಸ ನನಗಿಷ್ಟ’: ‘ನೀವು ಸಂಗೀತ ನಿರ್ದೇಶಕರು ಆಗದೇ ಇದ್ದಿದ್ದರೆ ಬೇರೆ ಏನು ಆಗಿರುತ್ತಿದ್ದೀರಿ’ ಎಂದು ವಿದ್ಯಾರ್ಥಿ ಅರುಣ್ ಪ್ರಶ್ನಿಸಿದ.
ಅದಕ್ಕೆ ಉತ್ತರಿಸಿದ ಹಂಸಲೇಖ, ‘ನಾನು ಪ್ರಿಂಟಿಂಗ್ ಪ್ರೆಸ್‌ನಲ್ಲಿ ಪ್ರಿಂಟ್ ಮಾಡುತ್ತಿದ್ದೆ. ಆ ಮೇಲೆ ಪುಸ್ತಕಗಳನ್ನು ಬೈಂಡ್ ಮಾಡುತ್ತಿದ್ದೆ. ಕಾರ್ಪೆಂಟರ್ ಕೆಲಸ ನನಗೆ ಬಹಳ ಇಷ್ಟ. ಕಾರ್ಪೆಂಟರ್ ಆಗಿರುತ್ತಿದ್ದೆ. ಮೆಕ್ಯಾನಿಕಲ್ ಆಪರೇಟರ್ ಆಗಿರುತ್ತಿದ್ದೆ. ಅದು ಬಿಟ್ಟರೆ ನಾನು ಕಬಡ್ಡಿ ಆಟಗಾರನಾಗಿರುತ್ತಿದ್ದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.