
ಗಣಪತಿ ಸಚ್ಚಿದಾನಂದ ಶ್ರೀಗಳ ನೇತೃತ್ವದಲ್ಲಿ ಹನುಮಾನ್ ಚಾಲೀಸಾ ಪಾರಾಯಣ ಯಜ್ಞ
ಮೈಸೂರು: ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಶ್ರೀಗಳ ನೇತೃತ್ವದಲ್ಲಿ ಹನುಮಾನ್ ಚಾಲೀಸಾ ಪಾರಾಯಣ ಯಜ್ಞ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ 10.50ಕ್ಕೆ ಪಾರಾಯಣಕ್ಕೆ ಶ್ರೀಗಳು ಚಾಲನೆ ನೀಡಿದರು.ನಂತರದಲ್ಲಿ ಸಾವಿರಾರು ಮಂದಿ ಸಾಮೂಹಿಕವಾಗಿ ಹನುಮಾನ್ ಚಾಲೀಸಾ ಪಠಣ ಮಾಡಿದರು. ಎಲ್ಲೆಡೆ ಕೇಸರಿ ಧ್ವಜಗಳು ಹಾರಿದವು.
ಆಶೀರ್ವಚನ ನೀಡಿದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ' ಸುಂದರಕಾಂಡ ಅಧ್ಯಾಯದ ಕುರಿತು ತುಳಸಿದಾಸರು 40 ಶ್ಲೋಕಗಳನ್ನು ರಚಿಸಿದ್ದು, ಅದರ ಪಾರಾಯಣದಿಂದ ಪುಣ್ಯ ಲಭಿಸುತ್ತದೆ. ಹನುಮನನ್ನು ಭಜಿಸಿದರೆ ಭಯ ದೂರವಾಗಿ ಶಕ್ತಿ ಸಿಗುತ್ತದೆ' ಎಂದರು.
ಅವಧೂತ ದತ್ತ ಪೀಠದ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ಸ್ವಾಮೀಜಿ ಮಾತನಾಡಿ '
ಸುಂದರಕಾಂಡದಲ್ಲಿ ಹನುಮಂತನೇ ಹೇಳುವಂತೆ ಸ್ವಾಮಿಯ ದರ್ಶನದಿಂದ ಎಲ್ಲ ಕಷ್ಟಗಳು ದೂರ ಆಗುತ್ತವೆ. ಭಕ್ತರನ್ನು ಧರ್ಮ ಮಾರ್ಗದಲ್ಲಿ ಕೊಂಡೊಯ್ಯಲು ಗಣಪತಿ ಸಚ್ಚಿದಾನಂದ ಶ್ರೀಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿದೆ' ಎಂದರು.
ಎಲ್ಲ ಭಕ್ತರಿಗೆ ಹನುಮ ರಕ್ಷೆಯನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಆಂಜನೇಯಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಬೆಳಿಗ್ಗೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.