ADVERTISEMENT

ಪಾಲಿಕೆ ಬಜೆಟ್‌: ಸಂಕಷ್ಟಕ್ಕೂ ಸ್ಪಂದನೆಯಿಲ್ಲ; ಸೌಲಭ್ಯವೂ ಇಲ್ಲ

ಹಳೆಯ ಯೋಜನೆಗಳನ್ನೇ ಪುನರುಚ್ಚರಿಸಿರುವುದಕ್ಕೆ ಹಲವರ ಅಸಮಾಧಾನ

ಡಿ.ಬಿ, ನಾಗರಾಜ
Published 30 ಏಪ್ರಿಲ್ 2021, 4:02 IST
Last Updated 30 ಏಪ್ರಿಲ್ 2021, 4:02 IST

ಮೈಸೂರು: ಕೋವಿಡ್‌ನ ಎರಡನೇ ಅಲೆಗೆ ಜನರು ತತ್ತರಿಸುತ್ತಿರುವ ಈ ಹೊತ್ತಿನಲ್ಲಿ ಮಂಡನೆಯಾದ ಮೈಸೂರು ಮಹಾನಗರ ಪಾಲಿಕೆಯ ಬಜೆಟ್‌ನಲ್ಲಿ, ಬಡವರು ಮತ್ತು ಮಧ್ಯಮ ವರ್ಗದವರ ನೆರವಿಗೆ ಯಾವುದೇ ಯೋಜನೆಯ ಪ್ರಸ್ತಾವ ಇಲ್ಲದೇ ಇರುವುದಕ್ಕೆ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಿನೇ ದಿನೇ ಸಂಕಷ್ಟ ಹೆಚ್ಚುತ್ತಿದ್ದು, ಇಂಥ ಹೊತ್ತಿನಲ್ಲಿ ನೆರವಿನ ನಿರೀಕ್ಷೆ ಇತ್ತು. ಆದರೆ, ಯಥಾಪ್ರಕಾರ ಅದೇ ರಾಗ, ಅದೇ ಹಾಡು ಎಂಬಂತೆ ಹಿಂದಿನ ವರ್ಷದ ಹಲವು ಹಳೆಯ ಯೋಜನೆಗಳನ್ನೇ ಈ ಬಾರಿಯೂ ಪುನರುಚ್ಚರಿಸಲಾಗಿದೆ. ಇವುಗಳಿಗೆ ಮತ್ತದೇ ಕೋಟಿ, ಕೋಟಿ ಹಣ ಮೀಸಲಿಟ್ಟಿದೆ. ಹಿಂದಿನ ಬಜೆಟ್‌ನಲ್ಲಿ ಮೀಸಲಿಟ್ಟಿದ್ದೇ ಖರ್ಚಾಗಿಲ್ಲ. ಮತ್ತೀಗ ಒಂದಿಷ್ಟು ಹೆಚ್ಚುವರಿ ಅನುದಾನ ಒದಗಿಸಿದೆ. ಯೋಜನೆಯ ಸ್ವರೂಪದಲ್ಲಷ್ಟೇ ಕೊಂಚ ಬದಲಾವಣೆ ಮಾಡಿದೆ ಎಂದು ಹಲವರು ದೂರಿದ್ದಾರೆ.

‘ಕೋವಿಡ್‌ ಹಾಗೂ ಲಾಕ್‌ಡೌನ್‌ನಿಂದ ಸಂಕಷ್ಟದ ಸುಳಿಗೆ ಸಿಲುಕಿದವರ ನೆರವಿಗೆ ಮುಂದಾಗುವ ದೊಡ್ಡ ಅವಕಾಶವನ್ನು ಪಾಲಿಕೆ ಕೈಚೆಲ್ಲಿದೆ. ಇಂದಿಗೂ ನಿರಾಶ್ರಿತರ ಕೇಂದ್ರ ಆರಂಭಿಸಿಲ್ಲ. ತನ್ನ ಒಡೆತನದ ಸಮುದಾಯ ಭವನಗಳಲ್ಲೇ ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸಿ, ಶ್ರಮಿಕರ ನೆರವಿಗೆ ಧಾವಿಸುವ ಒಳ್ಳೆಯ ಅವಕಾಶವಿತ್ತು. ತುರ್ತಾಗಿ ಮೆರೆಯಬೇಕಿದ್ದ ಮಾನವೀಯತೆಯನ್ನೂ ಮರೆತಿದೆ’ ಎಂದು ಆನ್‌ಲೈನ್‌ ಮೂಲಕ ಪಾಲಿಕೆಯ ಬಜೆಟ್‌ ಮಂಡನೆಯನ್ನು ವೀಕ್ಷಿಸಿದ ವಕೀಲ ಎನ್‌.ಪುನೀತ್‌ ‘ಪ್ರಜಾವಾಣಿ’ ಬಳಿ ಕಿಡಿಕಾರಿದರು.

ADVERTISEMENT

‘ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದವರಿಗಾಗಿ ಬಜೆಟ್‌ನಲ್ಲೇ ಒಂದಿಷ್ಟು ಜನಪರ ಕಾರ್ಯಕ್ರಮ ರೂಪಿಸಬಹುದಿತ್ತು. ತಾತ್ಕಾಲಿಕ ಪರಿಹಾರ ಕಲ್ಪಿಸಬಹುದಿತ್ತು. ಲಸಿಕಾ ಅಭಿಯಾನಕ್ಕಾಗಿ ಕೊಡುಗೆ ನೀಡಬಹುದಿತ್ತು. ಆದರೆ ಪಾಲಿಕೆ ಆಡಳಿತ ಇಂತಹ ಯಾವುದೊಂದು ಯೋಜನೆಯನ್ನೂ ಘೋಷಿಸಿಲ್ಲ’ ಎಂದು ಅವರು ದೂರಿದರು.

ಇದೇ ಟೀಕೆ, ಆರೋಪ ಹಾಗೂ ದೂರು ಹಲವರದ್ದಾಗಿದೆ.

‘ಬಜೆಟ್‌ ಮಂಡನೆಗೂ ಮುನ್ನ, ತೆರಿಗೆ ಹೆಚ್ಚಿಸಲಿಕ್ಕಾಗಿಯೇ ಪಾಲಿಕೆ ಆಡಳಿತವು ಮಾರ್ಚ್ ಅಂತ್ಯದಲ್ಲಿ ವಿಶೇಷ ಕೌನ್ಸಿಲ್‌ ಸಭೆ ನಡೆಸಿತ್ತು. ಗರಿಷ್ಠ ಶೇ 15ರಷ್ಟು ಆಸ್ತಿ ತೆರಿಗೆ ಹೆಚ್ಚಿಸುವ ನಿರ್ಧಾರವನ್ನು ಈ ಸಭೆಯಲ್ಲಿ ತೆಗೆದುಕೊಂಡಿತ್ತು. ವರ್ಷದಿಂದಲೂ ಸಂಕಷ್ಟದಲ್ಲೇ ಮುಳುಗಿದ್ದೇವೆ. ದಿನದೂಡುವುದೇ ಕಷ್ಟವಾಗಿದೆ. ಇಂತಹ ಹೊತ್ತಲೂ ನಮ್ಮಿಂದ ವ್ಯವಸ್ಥೆಗೆ ಧಕ್ಕೆಯಾಗಬಾರದು ಎಂದು ಹೆಚ್ಚಳಗೊಂಡ ತೆರಿಗೆಯನ್ನು ಈಗಾಗಲೇ ಪಾಲಿಕೆಗೆ ಪಾವತಿಸಿದ್ದೇವೆ. ಆದರೆ, ನಾವು ಪಾವತಿಸಿದ ಹೆಚ್ಚುವರಿ ತೆರಿಗೆಯ ಪಾಲಿನ ಕಿಂಚಿತ್‌ ಹಣವನ್ನಾದರೂ ಬಡಾವಣೆಗೆ ಮೂಲ ಸೌಲಭ್ಯ ಒದಗಿಸಲು ಮೀಸಲಿಟ್ಟಿಲ್ಲ’ ಎಂದು ಖಾಸಗಿ ಸಂಸ್ಥೆಯೊಂದರ ಉದ್ಯೋಗಿ ಪ್ರದೀಪ್‌ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಹಿಂದಿನಂತೆಯೇ ಈ ಬಾರಿಯೂ ನಮ್ಮ ಕಾರ್ಪೊರೇಟರ್‌ಗೆ ಒಂದಿಷ್ಟು ಅನುದಾನ ಬಿಡುಗಡೆಯಾಗಲಿದೆ. ಅದನ್ನು ಅವರು ತಮಗೆ ತೋಚಿದ ರೀತಿ ಬಳಸುತ್ತಾರೆ. ನಮ್ಮ ಧ್ವನಿ, ಬೇಡಿಕೆಗೆ ಬೆಲೆಯೇ ಇಲ್ಲವಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಹಲವರು ಧ್ವನಿಗೂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.