ADVERTISEMENT

ಬ್ಯಾಕ್‌ಲಾಗ್ ಹುದ್ದೆ ಭರ್ತಿಗೆ ಆಗ್ರಹ

ಪರಿಶಿಷ್ಟರ ಸಮಸ್ಯೆ ಬಗೆಹರಿಸಲು ಸಚಿವ ಮಹದೇವಪ್ಪ ಅವರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 7:59 IST
Last Updated 27 ಜನವರಿ 2026, 7:59 IST
ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ದಸಂಸ ಮುಖಂಡರು ಜಿಲ್ಲಾ ಉಸ್ತವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರೊಂದಿಗೆ ಸಭೆ ನಡೆಸಿದರು
ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ದಸಂಸ ಮುಖಂಡರು ಜಿಲ್ಲಾ ಉಸ್ತವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರೊಂದಿಗೆ ಸಭೆ ನಡೆಸಿದರು   

ಮೈಸೂರು: ದಲಿತ ಸಂಘರ್ಷ ಸಮಿತಿ ಮುಖಂಡರು ಇಲ್ಲಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರೊಂದಿಗೆ ಸಭೆ ನಡೆಸಿ, ಪರಿಶಿಷ್ಟರಿಗೆ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳ ಬಗ್ಗೆ ಹಕ್ಕೊತ್ತಾಯ ಸಲ್ಲಿಸಿದರು.

ಸಂಘಟನೆಯ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್‌ ಮಾತನಾಡಿ, ‘ಸರ್ಕಾರದ ಅನುದಾನ ಪಡೆಯುವ ಎಲ್ಲಾ ಖಾಸಗಿ ಸಂಸ್ಥೆ ಮತ್ತು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಇರುವ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಒಳ ಮೀಸಲಾತಿಯ ನ್ಯೂನತೆ ಸರಿಪಡಿಸಿ ಭರ್ತಿ ಮಾಡಬೇಕು. ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸಿರುವ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಹಣ ವಾಪಸ್‌ ಪಡೆದು ಪರಿಶಿಷ್ಟರ ವೈಯಕ್ತಿಕ ಅಭಿವೃದ್ಧಿಗೆ ಮೀಸಲಿಡಬೇಕು. ಬಜೆಟ್‌ನಲ್ಲಿ ಶೇ 22.75ರಷ್ಟನ್ನು ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಡಬೇಕು’ ಎಂದು ಆಗ್ರಹಿಸಿದರು.

‘ಗ್ರಾಮ ಸಹಾಯಕರ ಹುದ್ದೆ, ಸಫಾಯಿ ಕರ್ಮಚಾರಿ ಹುದ್ದೆಗಳನ್ನು ಕಾಯಂಗೊಳಿಸಬೇಕು. ಕೆಐಡಿಬಿ, ಎಪಿಎಂಸಿ ಮುಂತಾದ ವಾಣಿಜ್ಯ ಸಂಸ್ಥೆಗಳಲ್ಲಿ ಮಳಿಗೆ, ನಿವೇಶನ ಹಂಚಿಕೆ ಮಾಡುವಾಗ ಕಡ್ಡಾಯವಾಗಿ ಮೀಸಲಾತಿ ಪಾಲಿಸಬೇಕು. ಶೇ 100 ಸಹಾಯಧನ ನೀಡಿ ದಲಿತರ ಉದ್ಯಮಶೀಲತೆಗೆ ಪ್ರೋತ್ಸಾಹಿಸಬೇಕು’ ಎಂದರು.

ADVERTISEMENT

ಮರು ರೂಪಿಸಿ: ‘ಪರಿಶಿಷ್ಟರ ಮೇಲಿನ ದೌರ್ಜನ್ಯ ಕಾಯ್ದೆಯನ್ನು ಮರು ರೂಪಿಸಬೇಕು. ಭೂ ಒಡೆತನ ಯೋಜನೆ, ಗೇಣಿದಾರರ ಸಮಸ್ಯೆ, ಪಿಟಿಸಿಎಲ್‌ ಪ್ರಕರಣ ಇತ್ಯರ್ಥಪಡಿಸಬೇಕು. ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಡೊನೇಷನ್‌ಗೆ ಕಡಿವಾಣ ಹಾಕಿ. ಪರಿಶಿಷ್ಟರಿಗೆ ಸರ್ಕಾರ ಶುಲ್ಕ ನಿಗದಿಪಡಿಸಿ ಆದೇಶಿಸಬೇಕು. ಸೌಲಭ್ಯ ಪಡೆಯುವುದಕ್ಕಾಗಿ, ಪರಿಶಿಷ್ಟರ ಆದಾಯ ಮಿತಿಯನ್ನು ₹ 15 ಲಕ್ಷಕ್ಕೆ ಮರುನಿಗದಿಗೊಳಿಸಬೇಕು. ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿ ನಿಗಮ ಖಾಸಗಿ ಬ್ಯಾಂಕ್‌ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಪರಿಶಿಷ್ಟರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಬೇಕು’ ಎಂದು ಒತ್ತಾಯಿಸಿದರು.

ಪ್ರತಿಕ್ರಿಯಿಸಿದ ಮಹದೇವಪ್ಪ, ‘ಬೇಡಿಕೆ ಈಡೇರಿಸಲು ಕ್ರಮ ವಹಿಸಲಾಗುವುದು.  ಜಿಲ್ಲೆಯ ವಿವಿಧ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿ ದಸಂಸ ಸಮಿತಿಯ ವಿವಿಧ ಬಣಗಳ ಮುಖಂಡರ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲು ದಿನಾಂಕ ನಿಗದಿಪಡಿಸುತ್ತೇನೆ’ ಎಂದು ಭರವಸೆ ನೀಡಿದರು.

ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್‌, ಶಂಭುಲಿಂಗಸ್ವಾಮಿ, ಬನ್ನಹಳ್ಳಿ ಸೋಮಣ್ಣ, ಯಾಚನಹಳ್ಳಿ ಸೋಮಶೇಖರ್‌, ಮಲಾರ ಮಹೇಶ್‌, ಕಂಚನಹಳ್ಳಿ ಪುಟ್ಟಸ್ವಾಮಿ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.