
ಮೈಸೂರು: ‘ತಿ.ನರಸೀಪುರದಲ್ಲಿರುವ ಮೈಸೂರು ರೇಷ್ಮೆ ಕಾರ್ಖಾನೆಯನ್ನು ಮುಚ್ಚುವ ಪ್ರಶ್ನೆಯೇ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಈ ವಿಷಯದಲ್ಲಿ ಕೆಲವರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ರೇಷ್ಮೆ ಮಾರುಕಟ್ಟೆಗೆಂದು ಮೀಸಲಿಟ್ಟಿದ್ದ ಹಾಗೂ ಇದುವರೆಗೂ ಬಳಸಿಲ್ಲದಿದ್ದ ಒಂದೂವರೆ ಎಕರೆ ಜಾಗವನ್ನು ಮಾತ್ರವೇ ಕ್ರೀಡಾಂಗಣಕ್ಕೆ ಬಳಸಲು ತೀರ್ಮಾನಿಸಿದ್ದೇವೆ. ಈಗ, ಆ ಆದೇಶವನ್ನೂ ಮರು ಪರಿಶೀಲಿಸುತ್ತೇವೆ’ ಎಂದು ತಿಳಿಸಿದರು.
‘ರೇಷ್ಮೆ ಕಾರ್ಖಾನೆಗೆ ತೊಂದರೆ ಆದಲ್ಲಿ, ಆ ಜಾಗದಲ್ಲಿ ಕ್ರೀಡಾಂಗಣ ಮಾಡುವುದಿಲ್ಲ. ನಮಗೆ ರೇಷ್ಮೆ ಕಾರ್ಖಾನೆ ಮುಖ್ಯ. ಸರ್ಕಾರಕ್ಕೆ ಈ ವಿಚಾರದಲ್ಲಿ ಯಾವ ಪ್ರತಿಷ್ಠೆಯೂ ಇಲ್ಲ. ಕೆಲವರು ಈ ವಿಚಾರದಲ್ಲಿ ಹುಡುಗಾಟ ಆಡುತ್ತಿದ್ದಾರೆ. ಕಾರ್ಖಾನೆಯ ಕಾರ್ಮಿಕರು ಆತಂಕಪಡುವುದು ಬೇಡ. ಸಾರ್ವಜನಿಕರಿಗೂ ಆತಂಕ ಬೇಡ’ ಎಂದರು.
‘ರೇಷ್ಮೆ ಕಾರ್ಖಾನೆ ಬೆಳವಣಿಗೆಗೆ ನಮ್ಮ ಸರ್ಕಾರ ಹೆಚ್ಚು ಒತ್ತು ಕೊಟ್ಟಿದೆ. ವಿಚಾರ ಗೊತ್ತಿಲ್ಲದವರು ಬಾಯಿಗೆ ಬಂದಂತೆ ಮಾತನಾಡಿದರೆ ಏನು ಮಾಡುವುದು? ರೇಷ್ಮೆ ಕಾರ್ಖಾನೆಗೆ ಕುಂದು ಬಾರದಂತೆ ಕಾಪಾಡುವುದು ನಮ್ಮ ಜವಾಬ್ದಾರಿ. ಇದರಲ್ಲಿ ಯಾವುದೇ ಅನುಮಾನ ಬೇಡ’ ಎಂದು ಹೇಳಿದರು.
‘ಬಿಜೆಪಿಯವರು ರಾಜಕೀಯಕ್ಕಾಗಿ ಗೊಂದಲ ಸೃಷ್ಟಿಸಿದ್ದಾರೆ’ ಎಂದು ದೂರಿದರು.
‘ಅಧಿಕಾರ ಹಂಚಿಕೆ ವಿಚಾರ’ ಕುರಿತ ಪ್ರಶ್ನೆಗೆ, ‘ನಾನು ಯಾರ ಅಥವಾ ಯಾವುದರ ಬಗ್ಗೆಯೂ ಮಾತನಾಡುವುದಿಲ್ಲ. ನನ್ನ ಬಗ್ಗೆ ಯಾರೇ ಏನೇ ಹೇಳಿಕೆ ನೀಡಿದರೂ ಪ್ರತಿಕ್ರಿಯಿಸುವುದಿಲ್ಲ. ಪಕ್ಷದ ವಿಚಾರವನ್ನು ಹೈಕಮಾಂಡ್ ತೀರ್ಮಾನಿಸುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.