
ಎಚ್.ಡಿ.ಕೋಟೆ ತಾಲ್ಲೂಕು ಕಚೇರಿ ಮುಂದೆ ರೈತರು, ದಲಿತ ಮತ್ತು ಕನ್ನಡಪರ ಸಂಘಟನೆಗಳು ಹಾಗೂ ಪರಿಸರವಾದಿಗಳು ಅರಣ್ಯ ಸಂರಕ್ಷಣೆಗಾಗಿ ‘ಕಬಿನಿ ಉಳಿಸಿ’ ಹೆಸರಿನಲ್ಲಿ ಮಂಗಳವಾರ ಆರಂಭಿಸಿದ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ರೈತ ಮುಖಂಡ ಮಂಜುಕಿರಣ್ ಮಾತನಾಡಿದರು
ಎಚ್.ಡಿ.ಕೋಟೆ: ರೈತರು, ದಲಿತ ಮತ್ತು ಕನ್ನಡಪರ ಸಂಘಟನೆಗಳು ಹಾಗೂ ಪರಿಸರವಾದಿಗಳು ಅರಣ್ಯ ಸಂರಕ್ಷಣೆಗಾಗಿ ‘ಕಬಿನಿ ಉಳಿಸಿ’ ಹೆಸರಿನಲ್ಲಿ ತಾಲ್ಲೂಕು ಕಚೇರಿ ಮುಂದೆ ಮಂಗಳವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.
ರೈತ ಮುಖಂಡ ಹೊನ್ನಹಳ್ಳಿ ಪ್ರಕಾಶ್ ಮಾತನಾಡಿ, ‘ಕಬಿನಿ ಹಿನ್ನೀರು, ನಾಗರಹೊಳೆ-ಬಂಡೀಪುರ ಅರಣ್ಯ ಬಫರ್ ವಲಯ ಮತ್ತು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ ಬರುವ ಸ್ಥಳಗಳಲ್ಲಿ ಅಕ್ರಮ ರೆಸಾರ್ಟ್‌ಗಳು, ಹೋಟೆಲ್‌ಗಳು ಮತ್ತು ವಾಣಿಜ್ಯ ಕಟ್ಟಡಗಳು ತಲೆ ಎತ್ತಿವೆ’ ಎಂದು ಆರೋಪಿಸಿದರು.
‘ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿರುವ ಎಲ್ಲಾ ರೆಸಾರ್ಟ್‌ಗಳು, ಬಾರ್, ಕ್ಲಬ್, ಹೋಟೆಲ್ ಹಾಗೂ ಇತರೆ ವಾಣಿಜ್ಯ ಚಟುವಟಿಕೆ ಕೇಂದ್ರಗಳನ್ನು ತಕ್ಷಣ ತೆರವುಗೊಳಿಸಬೇಕು. ಕೈಗೊಳ್ಳಲಾದ ಕ್ರಮಗಳ ಬಗ್ಗೆ ಪಾರದರ್ಶಕವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು’ ಎಂದು ಒತ್ತಾಯಿಸಿದರು.
‘ಅಕ್ರಮ ಕಟ್ಟಡಗಳು ಅರಣ್ಯ ಕಾಯ್ದೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸುತ್ತಿದ್ದು, ವನ್ಯಜೀವಿಗಳ ಮೇಲೆ ಪರಿಣಾಮ ಬೀರುತ್ತಿವೆ. ಸಾರ್ವಜನಿಕರು ಮತ್ತು ಸಂಘಟನೆಗಳು ತಾಲ್ಲೂಕು ಮತ್ತು ಜಿಲ್ಲಾಡಳಿತಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿವೆ. ಆದರೆ ಇಲ್ಲಿಯವರೆಗೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ, ಕಬಿನಿ ಹಿನ್ನೀರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಅಕ್ರಮ ಕಟ್ಟಡಗಳು ಮತ್ತು ರೆಸಾರ್ಟ್‌ಗಳನ್ನು ತೆರವುಗೊಳಿಸಬೇಕು’
ಎಂದರು.
‘ಪರಿಸರ ಸೂಕ್ಷ್ಮ ವಲಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಅರಣ್ಯ, ವನ್ಯಜೀವಿಗಳು ಮತ್ತು ಪರಿಸರವನ್ನು ರಕ್ಷಿಸಲು ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಲಾಗಿದೆ’ ಎಂದರು.
‘ನಮ್ಮ ಹೋರಾಟ ಅಕ್ರಮ ರೆಸಾರ್ಟ್‌ಗಳ ವಿರುದ್ಧ ಮಾತ್ರ, ಈ ಹೋರಾಟ ಸಂವಿಧಾನಬದ್ಧ, ಶಾಂತಿಯುತ ಹಾಗೂ ಕಾನೂನು ಬದ್ಧವಾಗಿದ್ದು, ಸಾರ್ವಜನಿರಿಗೆ, ಸರ್ಕಾರಿ ಆಸ್ತಿಗೆ ಯಾವುದೇ ರೀತಿ ಧಕ್ಕೆ ಉಂಟಾಗದಂತೆ ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದರು.
ವಕೀಲ ರವಿ ಕುಮಾರ್ ಮಾತನಾಡಿ, ‘ಅಕ್ರಮವಾಗಿ ನಿರ್ಮಾಣಗೊಂಡಿರುವ ಹೋಟೆಲ್‌ಗಳು, ಕ್ಲಬ್‌ಗಳು ಮತ್ತು ಇತರೆ ವಾಣಿಜ್ಯ ಕಟ್ಟಡಗಳು ಇಂದು ಕಬಿನಿ ಪರಿಸರ ವ್ಯವಸ್ಥೆಗೆ ಬಾರಿ ಅಪಾಯವನ್ನುಂಟು ಮಾಡುತ್ತಿವೆ, ಈ ಅಕ್ರಮ ಚಟುವಟಿಕೆಗಳಿಂದ ವನ್ಯಜೀವಿಗಳ ಸಂಚಾರಕ್ಕೆ ತೀವ್ರ ಅಡ್ಡಿ ಉಂಟಾಗುತ್ತಿದೆ’ ಎಂದರು.
ರೈತ ಮುಖಂಡ ಮಂಜುಕಿರಣ್, ಕುಮಾರಸ್ವಾಮಿ, ದಾಸೆಗೌಡ ಹಾಗೂ ಮುಖಂಡರು ಭಾಗವಹಿಸಿದ್ದರು.
ಜಿಲ್ಲಾಡಳಿತಕ್ಕೆ ಹಲವಾರು ಬಾರಿ ಮನವಿ
ನಿಯಮ ಕಟ್ಟುನಿಟ್ಟಾಗಿ ಪಾಲಿಸಿ
ಸಾರ್ವಜನಿರಿಗೆ ತೊಂದರೆಯಾಗದಂತೆ ಪ್ರತಿಭಟನೆ