ಮೈಸೂರು: ಕ್ಷಯರೋಗ (ಟಿಬಿ) ಮುಕ್ತ ಮೈಸೂರು ಜಿಲ್ಲೆಗಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿರುವ ‘ನೂರು ದಿನಗಳ ಜಾಗೃತಿ ಅಭಿಯಾನ’ಕ್ಕೆ ಶನಿವಾರ ಚಾಲನೆ ನೀಡಲಾಯಿತು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ‘ಆರೋಗ್ಯದ ಬಗ್ಗೆ ಇರಲಿ ಗಮನ- ಟಿಬಿ ಮುಕ್ತ ಭಾರತ ಅಭಿಯಾನ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಟಿಬಿಯ ಪರಿಣಾಮ, ತಡೆಗಟ್ಟುವುದು, ಲಭ್ಯವಿರುವ ಚಿಕಿತ್ಸೆ ಮೊದಲಾದವುಗಳನ್ನು ತಿಳಿಸಿಕೊಡಲಾಯಿತು. ಮುಂದಿನ 100 ದಿನಗಳಲ್ಲಿ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುವ ಶಪಥವನ್ನೂ ಮಾಡಲಾಯಿತು.
ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯಿತ್ರಿ ಮಾತನಾಡಿ, ‘ಜಿಲ್ಲೆಯನ್ನು ಕ್ಷಯರೋಗ ಮುಕ್ತಗೊಳಿಸಲು ಎರಡು ವರ್ಷಗಳಿಂದಲೂ ಸತತ ಪ್ರಯತ್ನ ಮಾಡುತ್ತಿದ್ದೇವೆ. ಆದರೂ ರೋಗಿಗಳು ಕಂಡು ಬರುತ್ತಿದ್ದಾರೆ. ಕೇಂದ್ರ ಸರ್ಕಾರದ ಸೂಚನೆಯಂತೆ ಮುಂದಿನ ನೂರು ದಿನಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಆರೋಗ್ಯ ಇಲಾಖೆಯೊಂದಿಗೆ ಸಂಬಂಧಿಸಿದ ಇಲಾಖೆಗಳು ಕೂಡ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು’ ಎಂದು ಸೂಚಿಸಿದರು.
ದತ್ತು ಪಡೆಯಬಹುದು: ‘ಪೂರಕ ಪೌಷ್ಟಿಕ ಆಹಾರ ಒದಗಿಸಲು ದಾನಿಗಳು ಇಂತಿಷ್ಟು ರೋಗಿಗಳನ್ನು ದತ್ತು ಪಡೆದುಕೊಳ್ಳಬಹುದು. ನಾನೂ ದತ್ತು ತೆಗೆದುಕೊಳ್ಳಲು ಸಿದ್ಧವಿದ್ದೇನೆ, ಅಧಿಕಾರಿಗಳು ಪ್ರಕ್ರಿಯೆ ನಡೆಸಬೇಕು. ಚಾಮರಾಜನಗರದಲ್ಲಿದ್ದಾಗ ದತ್ತು ಸ್ವೀಕರಿಸಿದ್ದೆ. ಪೂರಕ ಪೌಷ್ಟಿಕ ಆಹಾರಕ್ಕೆ ಬೇಕಾಗುವ ಹಣ ನೀಡಿದ್ದೆ’ ಎಂದರು.
‘ತಪಾಸಣೆಗೆ ಬೇಕಾದ ಸಾಧನಗಳ ಸಂಖ್ಯೆಯನ್ನು ಜಿಲ್ಲೆಯಲ್ಲಿ ಹೆಚ್ಚಿಸಲಾಗಿದೆ. ಇದನ್ನು ಬಳಸಿಕೊಂಡು ತ್ವರಿತವಾಗಿ ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸಬೇಕು. ರೋಗಿಗಳಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಿಬಿರಗಳನ್ನು ಆಯೋಜಿಸಿ ತಪಾಸಣೆ ನಡೆಸಬೇಕು’ ಎಂದು ತಿಳಿಸಿದರು.
‘ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆ ಇದಾಗಿರುವುದರಿಂದ ಚಿಕಿತ್ಸೆ ನೀಡಿ ಹರಡದಂತೆ ನೋಡಿಕೊಳ್ಳ್ಳಬೇಕು. 3–4 ವಾರಗಳಿಗೂ ಹೆಚ್ಚು ಕಾಲದಿಂದ ಕೆಮ್ಮು ಇದ್ದರೆ ಅದು ಕ್ಷಯ ಆಗಿರಬಹುದು. ಆದ್ದರಿಂದ ಆರಂಭಿಕ ಹಂತದಲ್ಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕಾಯಿಲೆ ಇದ್ದವರಿಗೆ ಸರ್ಕಾರದಿಂದ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಪರೀಕ್ಷೆಯೂ ಉಚಿತವಿದೆ. ರೋಗ ಪತ್ತೆ ಹಚ್ಚುವ ಖಾಸಗಿ ವೈದ್ಯರಿಗೆ ₹500 ಪ್ರೋತ್ಸಾಹ ಧನ ನೀಡಲಾಗುವುದು. ಚಿಕಿತ್ಸೆಯ ಅವಧಿಯಲ್ಲಿ ಪೌಷ್ಟಿಕ ಆಹಾರಕ್ಕಾಗಿ ತಿಂಗಳಿಗೆ ₹500 ಕೊಡಲಾಗುವುದು’ ಎಂದು ಹೇಳಿದರು.
ಸಂಪೂರ್ಣ ತಲುಪಲಿ: ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ‘ಸರ್ಕಾರ ನೀಡುವ ಸೌಲಭ್ಯಗಳು ಫಲಾನುಭವಿಗಳಿಗೆ ಸಂಪೂರ್ಣವಾಗಿ ತಲುಪಬೇಕು. ಸರ್ಕಾರದ ಯೋಜನೆಗಳ ಬಗ್ಗೆ ಹೆಚ್ಚಿನ ಪ್ರಚಾರ ಮಾಡಬೇಕು. ಇದಕ್ಕಾಗಿ ಮಾಧ್ಯಮವನ್ನು ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಡಿಎಚ್‌ಒ ಡಾ.ಪಿ.ಸಿ.ಕುಮಾರಸ್ವಾಮಿ ಮಾತನಾಡಿ, ‘2005-06ರಿಂದ ಒಂದು ಲಕ್ಷಕ್ಕೆ 204 ಕ್ಷಯ ರೋಗದ ಪ್ರಕರಣ ಪತ್ತೆ ಹಚ್ಚುತ್ತಿದ್ದೆವು. ಈಗ ಅಂತಹ ರೋಗಿಗಳ ಪ್ರಮಾಣವನ್ನು 50ಕ್ಕಿಂತ ಕಡಿಮೆಗೆ ತರಬೇಕು, ಶೂನ್ಯಕ್ಕೆ ತಂದು ದೇಶವನ್ನು ಟಿಬಿ ಮುಕ್ತ ಮಾಡಬೇಕೆಂಬ ಗುರಿ ಹೊಂದಲಾಗಿದೆ. ಈ ನೂರು ದಿನಗಳ ಅಭಿಯಾನದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು’ ಎಂದು ಹೇಳಿದರು.
‘ಎರಡು ವರ್ಷಗಳಲ್ಲಿ ಒಂದೂ ಪ್ರಕರಣ ವರದಿ ಆಗದಿದ್ದರೆ ಆ ಗ್ರಾಮ ಪಂಚಾಯಿತಿಯನ್ನು ಟಿಬಿ ಮುಕ್ತ ಎಂದು ಘೋಷಿಸಲಾಗುವುದು. ಈಗಾಗಲೇ ಪತ್ತೆಯಾದ ಪ್ರದೇಶಗಳಲ್ಲಿ ಚಿಕಿತ್ಸೆ ಪಡೆದವರನ್ನು ಟಿಬಿ ಚಾಂಪಿಯನ್ಸ್ ಎಂದು ಮಾಡಿ ಮಾಡಿ ಜಾಗೃತಿ ಮೂಡಿಸಬೇಕು. ಬಿಟ್ಟು ಹೋದವರನ್ನು ಚಿಕಿತ್ಸೆಯ ವ್ಯಾಪ್ತಿಗೆ ತರಬೇಕು’ ಎಂದು ತಿಳಿಸಿದರು.
‘ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ 4,200 ಪ್ರಕರಣ ಪತ್ತೆ ಹಚ್ಚಬೇಕು ಎಂದು ಗುರಿ ನೀಡಲಾಗಿತ್ತು. ಇದರಲ್ಲಿ ಶೇ 83ರಷ್ಟು ಸಾಧನೆ ಮಾಡಲಾಗಿದೆ. ಉಳಿದದ್ದನ್ನು ಈ 100 ದಿನಗಳಲ್ಲಿ ಮಾಡಬೇಕು. ಎಲ್ಲ 204 ಹಾಡಿಗಳಿಗೂ ಕಡ್ಡಾಯವಾಗಿ ಭೇಟಿ ನೀಡಬೇಕು. ರೋಗಿಗಳನ್ನು ಪತ್ತೆ ಹಚ್ಚಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ತಲುಪಿಸಬೇಕು’ ಎಂದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಎಂ.ಎಸ್. ಜಯಂತ್, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಬೃಂದಾ ಪಾಲ್ಗೊಂಡಿದ್ದರು.
ಒಬ್ಬರಿಂದ 40 ಮಂದಿಗೆ ಹರಡುತ್ತದೆ: ಪ್ರಸಾದ್
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೈಸೂರು ವಿಭಾಗೀಯ ಸಹ ನಿರ್ದೇಶಕ ಡಾ.ಕೆ.ಎಚ್. ಪ್ರಸಾದ್ ಮಾತನಾಡಿ, ‘ಜಾಗತಿಕವಾಗಿ ಹೊರೆಯಾಗುತ್ತಿರುವ ಹಾಗೂ ಜನರನ್ನು ನಲುಗಿಸುವ ಕಾಯಿಲೆಗಳಲ್ಲಿ ಕ್ಷಯ ಮೊದಲ ಸ್ಥಾನದಲ್ಲಿದೆ. ಇದನ್ನು ಹೋಗಲಾಡಿಸಲು ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಪ್ರಯತ್ನ ನಡೆಯುತ್ತಲೇ ಇದೆ. ನರಳಿಸುವ ಹಾಗೂ ರೋಗಿಯೊಬ್ಬರಿಂದ ಸುತ್ತಮುತ್ತಲಿನ 40 ಮಂದಿಗೆ ಹರಡುವ ರೋಗ ಇದಾಗಿದೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಹೇಳಿದರು.
‘ಕೆಲವರು ಸ್ವಲ್ಪ ದಿನ ಮಾತ್ರೆ ತೆಗೆದುಕೊಂಡು ಸುಮ್ಮನಾಗುತ್ತಾರೆ. ಇದು ಸರಿಯಲ್ಲ. ಇದರಿಂದ ರೋಗಿ ಗುಣಮುಖವಾಗುವುದಿಲ್ಲ. ಬಹಳ ಸಮಸ್ಯೆಗೆ ಅವರು ಸಿಲುಕಬೇಕಾಗುತ್ತದೆ. ನಿಯಮಿತವಾಗಿ ಮಾತ್ರೆ ಸೇವಿಸುವಂತೆ ಮಾಡುವ ಸವಾಲೂ ನಮ್ಮ ಮುಂದಿದೆ. ಕ್ಷೇತ್ರ ಮಟ್ಟದ ಸಿಬ್ಬಂದಿ ಈ ಕೆಲಸವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು’ ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.