ADVERTISEMENT

‘ನಾಲ್ವರಿಗೆ ಹೃದಯ ಕಸಿ, ಸಹಜ ಜೀವನ’

ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರ ಮಾಹಿತಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2022, 14:47 IST
Last Updated 17 ಡಿಸೆಂಬರ್ 2022, 14:47 IST
ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದಯ ಕಸಿಗೆ ಒಳಗಾದವರೊಂದಿಗೆ (ನಿಂತಿರುವವರು) ವೈದ್ಯರು ಇದ್ದಾರೆ
ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದಯ ಕಸಿಗೆ ಒಳಗಾದವರೊಂದಿಗೆ (ನಿಂತಿರುವವರು) ವೈದ್ಯರು ಇದ್ದಾರೆ   

ಮೈಸೂರು: ‘ಇಲ್ಲಿನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಿಂದನಾಲ್ವರು ಹೃದ್ರೋಗಿಗಳಿಗೆ ಹೃದಯ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಅವರು ಆರೋಗ್ಯವಾಗಿದ್ದಾರೆ ಮತ್ತು ಸಹಜವಾಗಿ ಜೀವನ ನಡೆಸುತ್ತಿದ್ದಾರೆ’ ಎಂದು ಆಸ್ಪತ್ರೆಯ ಕ್ಲಿನಿಕಲ್ ನಿರ್ದೇಶಕ ಹಾಗೂ ಹೃದ್ರೋಗ ತಜ್ಞ ಡಾ.ಎಂ.ಎನ್.ರವಿ ತಿಳಿಸಿದರು.

‘ಹೃದಯ ವೈಫಲ್ಯದ ಅಂತಿಮ ಹಂತ ತಲುಪಿದ್ದ ಅವರಿಗೆ ಸಮರ್ಪಕ ಚಿಕಿತ್ಸೆ ನೀಡಿದ್ದು ಫಲ ಕೊಟ್ಟಿದೆ. ಸರಾಸರಿ ಮೂರು ವರ್ಷಗಳ ಹಿಂದೆ ಅವರಿಗೆ ಹೃದಯದ ಕಸಿ ನಡೆಸಲಾಗಿತ್ತು. ಬಳಿಕ ಅವರಿಗೆ ಹೃದ್ರೋಗದ ಸಮಸ್ಯೆಗಳು ಕಾಣಿಸಿಕೊಂಡಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

‘ಹೃದ್ರೋಗಿಗಳ ಚಿಕಿತ್ಸೆಗಾಗಿ ನಮ್ಮಲ್ಲಿ ಪ್ರತ್ಯೇಕ ಕ್ಲಿನಿಕ್‌ ತೆರೆಯಲಾಗಿದೆ. ಅಲ್ಲಿ ರೋಗಿಗಳನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲಾಗುತ್ತದೆ. ಕಸಿಯ ಅಗತ್ಯವಿರುವವರಿಗೆ ಬೆಂಗಳೂರಿನ ಎಂ.ಎಸ್. ರಾಮಯ್ಯ ನಾರಾಯಣ ಹೃದಯ ಕೇಂದ್ರದಲ್ಲಿ ಪ್ರಕ್ರಿಯೆ ನಡೆಸಲಾಗಿದೆ’ ಎಂದರು.

ADVERTISEMENT

ಆಸ್ಪತ್ರೆಯ ಹಿರಿಯ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ.ವಿ.ಕೇಶವಮೂರ್ತಿ ಮಾತನಾಡಿ, ‘ಹೃದಯ ವೈಫಲ್ಯವಾದವರಿಗೆ ಮಾತ್ರ ಕಸಿ ಮಾಡಲಾಗುತ್ತದೆ. ಹೃದ್ರೋಗಿಗಳ ಆಯಸ್ಸು ಹೆಚ್ಚಿಸುವ ಚಿಕಿತ್ಸೆಯೇ ಹೃದಯ ಕಸಿ ಪ್ರಕ್ರಿಯೆ. ಈ ಬಗ್ಗೆ ಜನರಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಬೇಕಿದೆ. ಸರ್ಕಾರದ ಯೋಜನೆಗಳನ್ನೂ ಬಳಸಿಕೊಳ್ಳಬಹುದು. ಹೃದಯ ಸೇರಿದಂತೆ ಅಂಗಾಂಗಗಳ ದಾನಕ್ಕೂ ಮುಂದೆ ಬರಬೇಕು’ ಎಂದು ಹೇಳಿದರು.

ಬೆಂಗಳೂರಿನ ರಾಮಯ್ಯ ನಾರಾಯಣ ಹೃದಯ ಕೇಂದ್ರದ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಯು.ಎಂ.ನಾಗಮಲ್ಲೇಶ್ ಮಾತನಾಡಿ, ‘ಮಿದುಳು ನಿಷ್ಕ್ರಿಯಗೊಂಡವರಿಂದ ಹೃದಯವನ್ನು ಪಡೆಯಬಹುದಾಗಿದೆ. ಇದಕ್ಕೆ ಕುಟುಂಬದವರು ಒಪ್ಪಬೇಕಾಗುತ್ತದೆ. ಹೃದಯವನ್ನು ಪಡೆದ ಮೇಲೆ 4 ತಾಸಿನೊಳಗೆ ರೋಗಿಗೆ ಕಸಿ ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ. ಹೃದಯ ವೈಫಲ್ಯಕ್ಕೆ ಒಳಗಾಗಿ, ಇನ್ನೊಂದು ವರ್ಷವಷ್ಟೆ ಬದುಕಬಹುದು ಎನ್ನುವ ಸ್ಥಿತಿಯಲ್ಲಿರುವವರಿಗೆ ಕಸಿ ಮಾಡಲಾಗುತ್ತದೆ. ಬಿಪಿಎಲ್‌ ‍ಕಾರ್ಡ್‌ ಇರುವವರಿಗೆ ಸರ್ಕಾರವೇ ವೆಚ್ಚ ಭರಿಸುತ್ತದೆ’ ಎಂದು ಮಾಹಿತಿ ನೀಡಿದರು.

‘ರಾಜ್ಯದಲ್ಲಿ ವಾರ್ಷಿಕ ಸರಾಸರಿ 200 ಹೃದಯಗಳು ದಾನದ ರೂಪದಲ್ಲಿ ಸಿಗುತ್ತಿವೆ. ಆದರೆ, ಬೇಡಿಕೆ ಜಾಸ್ತಿ ಇದೆ’ ಎಂದು ಪ್ರತಿಕ್ರಿಯಿಸಿದರು.

‘ಹೃದಯದ ಸಮಸ್ಯೆ ಕಾಣಿಸಿಕೊಂಡಾಗ ಚಿಕಿತ್ಸೆ ಪಡೆಯಲು ಹಿಂದೇಟು ಹಾಕಬಾರದು’ ಎಂದು ಕೋರಿದರು.

‘ಮೂರು ವರ್ಷಗಳ ಹಿಂದೆ ಹೃದಯ ಕಸಿ ಮಾಡಿಸಿಕೊಂಡೆ. 20 ದಿನ ಆಸ್ಪತ್ರೆಯಲ್ಲಿದ್ದೆ. ಬಳಿಕ ಮೂರೂವರೆ ತಿಂಗಳು ನಿಯಮಿತ ತಪಾಸಣೆಗೆ ಹೋಗುತ್ತಿದ್ದೆ. ಈಗ ಆರೋಗ್ಯವಾಗಿದ್ದೇನೆ’ ಎಂದು ಬೆಳವಾಡಿಯ ಕುಮಾರ್ ತಿಳಿಸಿದರು.

ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಕೆ.ವಿ.ಕಾಮತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.