ADVERTISEMENT

ಸಂಶೋಧನೆಗಳ ಗುಣಮಟ್ಟ ಹೆಚ್ಚಲಿ: ಪ್ರೊ.ಎಸ್.ಆರ್.ನಿರಂಜನ

ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 1:52 IST
Last Updated 11 ನವೆಂಬರ್ 2025, 1:52 IST
ಮೈಸೂರಿನ ಕೆಎಸ್‌ಒಯುನಲ್ಲಿ ‘ಸಂಶೋಧನೆ ಮತ್ತು ಪ್ರಕಟಣೆ ಮೌಲ್ಯ’ ಕುರಿತ 6 ದಿನಗಳ ಕಾರ್ಯಾಗಾರವನ್ನು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ ಉದ್ಘಾಟಿಸಿದರು ಪ್ರಜಾವಾಣಿ ಚಿತ್ರ   
ಮೈಸೂರಿನ ಕೆಎಸ್‌ಒಯುನಲ್ಲಿ ‘ಸಂಶೋಧನೆ ಮತ್ತು ಪ್ರಕಟಣೆ ಮೌಲ್ಯ’ ಕುರಿತ 6 ದಿನಗಳ ಕಾರ್ಯಾಗಾರವನ್ನು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ ಉದ್ಘಾಟಿಸಿದರು ಪ್ರಜಾವಾಣಿ ಚಿತ್ರ      

ಮೈಸೂರು: ‘ಸಂಶೋಧನೆ ಎಂದರೆ ಈಗಾಗಲೇ ಮಾಡಿರುವುದನ್ನೇ ಯಥಾವತ್ತಾಗಿ ನಕಲಿಸುವುದಲ್ಲ. ಸ್ವಂತಿಕೆ ತೋರುವ, ವಿಸ್ತರಿಸುವ, ವಿಶ್ಲೇಷಿಸುವ ಹಾಗೂ ಹೊಸ ಚಿಂತನೆಗಳನ್ನು ಬೆಳೆಸುವುದಾಗಿದೆ’ ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ ಪ್ರತಿಪಾದಿಸಿದರು. 

ನಗರದ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಸಂಶೋಧನೆ ಮತ್ತು ಪ್ರಕಟಣೆ ಮೌಲ್ಯಗಳು’ ಕುರಿತ 6 ದಿನಗಳ ಕಾರ್ಯಾಗಾರಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿ, ‘ಗುಣಮಟ್ಟದ ಸಂಶೋಧನೆಯು ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ’ ಎಂದರು. 

‘ನಾವು ಪಿಎಚ್‌ಡಿ ಸಂಶೋಧನೆಗಳನ್ನು ಮಾಡುವಾಗ ಬರೆದದ್ದು ಸರಿಯಿಲ್ಲದಿದ್ದರೆ, ಕಾಗದಗಳನ್ನು ಮಾರ್ಗದರ್ಶಕರು ತೂರುತ್ತಿದ್ದರು. ಈಗಿನ ಸಂಶೋಧನಾ ವಿದ್ಯಾರ್ಥಿಗಳು ಗೈಡ್‌ಗಳ ಮೇಲೆ ಬೀಳುತ್ತಿದ್ದಾರೆ. ಅಗತ್ಯ ಸಮಯ, ತಾಳ್ಮೆಯನ್ನು ಗೈಡ್‌ಗಳಿಗೂ ಕೊಡಬೇಕು. ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಸಲಹೆ ನೀಡಿದರು.  

ADVERTISEMENT

‘ಸಂಶೋಧನೆ ಮಾಡುತ್ತೇವೆಂದು ತೊಡಗಿಸಿಕೊಂಡ ಮೇಲೆ ಗೈಡ್‌ ಮಾತನ್ನು ಕೇಳುತ್ತೇವೆಂಬ ಬದ್ಧತೆ ಪ್ರದರ್ಶಿಸಬೇಕು. ಗಂಭೀರತೆ ಇರಬೇಕು. ಗುಣಮಟ್ಟತೆ ಬರಬೇಕೆಂದರೆ ಸಾಕಷ್ಟು ತಿದ್ದುಪಡಿಗಳು ಆಗಲೇಬೇಕು. ಪ್ರಯತ್ನ ನಿಲ್ಲಿಸಬಾರದು’ ಎಂದರು. 

‘ಬಹುಶಿಸ್ತೀಯ ಅಧ್ಯಯನ ಕ್ರಮವೀಗ ಬಂದಿದೆ. ಮೊದಲೆಲ್ಲ ಒಂದೇ ವಿಷಯದ ಬಗ್ಗೆ ಮೂರ್ನಾಲ್ಕು ಪತ್ರಿಕೆಗಳು ಇರುತ್ತಿದ್ದವು. ಕಷ್ಟದ ಪಾಠಗಳನ್ನು ತೆಗೆದು ಬಿಡುವ ಕೆಲಸವನ್ನು ಬೋಧಕರಾದವರು ಮಾಡಬಾರದು. ಸಾಮರ್ಥ್ಯ ಹೆಚ್ಚಿಸುವ ಪಠ್ಯಕ್ರಮವನ್ನು ಬದ್ಧತೆಯಿಂದ ಪಾಲಿಸಬೇಕು’ ಎಂದು ಕಿವಿಮಾತು ಹೇಳಿದರು. 

‘ಜ್ಞಾನ, ಅರಿವಿನ ಪರಿಷ್ಕರಣೆಯು ನಿರಂತರವಾಗಿ ನಡೆಯುತ್ತದೆ. ತರಗತಿಗಳನ್ನು ತಪ್ಪಿಸಿಕೊಳ್ಳಬಾರದು. ಉತ್ತಮ ಅಧ್ಯಾಪಕರಾಗದೇ ಹೋದರೆ, ಕಲಿಸಿದ ಮಾರ್ಗದರ್ಶಕರನ್ನೇ ಬಯ್ಯುತ್ತಾರೆ. ಕಲಿಕೆ, ಬೋಧನೆಗೆ ನ್ಯಾಯ ಕೊಡಿಸುವ ಕೆಲಸವನ್ನು ಮಾಡಬೇಕು’ ಎಂದರು. 

‘ಭಾಷಾ ಪ್ರೌಢಿಮೆ ಬೆಳೆಸಿಕೊಳ್ಳುವತ್ತ ಎಲ್ಲ ಮಾನವಿಕ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಶ್ರಮಿಸಬೇಕು. ಸಂವಹನ ಕೌಶಲ ಬೆಳೆಸಿಕೊಳ್ಳಬೇಕು. ಹೊಸ ತಂತ್ರಜ್ಞಾನಗಳ ಅರಿವು ಪಡೆಯಬೇಕು’ ಎಂದು ಸಲಹೆ ನೀಡಿದರು. 

ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕುಲಸಚಿವ ಪ್ರೊ.ಎಸ್‌.ಕೆ.ರವಿಕುಮಾರ್, ಪರೀಕ್ಷಾಂಗ ಕುಲಸಚಿವ ಡಾ.ಸಿ.ಎಸ್‌.ಆನಂದಕುಮಾರ್, ಅಧ್ಯಯನ ಕೇಂದ್ರಗಳ ಡೀನ್ ಪ್ರೊ.ಎನ್‌.ಆರ್.ಚಂದ್ರೇಗೌಡ, ಶೈಕ್ಷಣಿಕ ಡೀನ್ ಪ್ರೊ.ರಾಮನಾಥಂ ನಾಯ್ಡು, ಪಿಎಚ್‌ಡಿ ಕೋಶದ ವಿಶೇಷಾಧಿಕಾರಿ ಪ್ರೊ.ಟಿ.ಎಸ್‌.ಹರ್ಷ, ಸಂಯೋಜನಾಧಿಕಾರಿ ಎಚ್‌.ರಾಜೇಶ್ವರಿ ಪಾಲ್ಗೊಂಡಿದ್ದರು.  

ಸಂವಹನ ಕೌಶಲ ಬೆಳೆಸಿಕೊಳ್ಳಿ | ಹೊಸ ತಂತ್ರಜ್ಞಾನ ಅರಿವು ಪಡೆಯಿರಿ | ಬೋಧನೆ, ಕಲಿಕೆಗೆ ನ್ಯಾಯ ಕೊಡಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.