ADVERTISEMENT

ಮೈಸೂರು: ಹಣ ಕೊಟ್ರೆ ಸಿಗುತ್ತೆ ಗೌರವ ಡಾಕ್ಟರೇಟ್, 153 ಮಂದಿಗೆ ಪ್ರದಾನ

ಮೈಸೂರಿನ ಕಲಾಮಂದಿರದಲ್ಲಿ ಶನಿವಾರ ರಹಸ್ಯವಾಗಿ ನಡೆದ ಕಾರ್ಯಕ್ರಮ

ಎಂ.ಎನ್.ಯೋಗೇಶ್‌
Published 24 ಆಗಸ್ಟ್ 2019, 19:45 IST
Last Updated 24 ಆಗಸ್ಟ್ 2019, 19:45 IST
ಗೌರವ ಡಾಕ್ಟರೇಟ್‌ ಪಡೆದ ಸ್ಥಳೀಯ ಕಲಾವಿದರೊಬ್ಬರ ಅಭಿಮಾನಿಗಳು ಮಂಡ್ಯ ವಿವಿ ರಸ್ತೆಯಲ್ಲಿ ಫ್ಲೆಕ್ಸ್‌ ಹಾಕಿರುವುದು(ಹೆಸರು ಹಾಗೂ ಮುಖವನ್ನು ಬ್ಲರ್‌ ಮಾಡಿ ಪ್ರಕಟಿಸುವುದು)
ಗೌರವ ಡಾಕ್ಟರೇಟ್‌ ಪಡೆದ ಸ್ಥಳೀಯ ಕಲಾವಿದರೊಬ್ಬರ ಅಭಿಮಾನಿಗಳು ಮಂಡ್ಯ ವಿವಿ ರಸ್ತೆಯಲ್ಲಿ ಫ್ಲೆಕ್ಸ್‌ ಹಾಕಿರುವುದು(ಹೆಸರು ಹಾಗೂ ಮುಖವನ್ನು ಬ್ಲರ್‌ ಮಾಡಿ ಪ್ರಕಟಿಸುವುದು)   

ಮಂಡ್ಯ: ಚೆನ್ನೈ ಮೂಲದ ಖಾಸಗಿ ವಿಶ್ವವಿದ್ಯಾಲಯದಿಂದ ಹಣ ಕೊಟ್ಟು ಗೌರವ ಡಾಕ್ಟರೇಟ್‌ (ಗೌಡಾ) ಪದವಿ ಖರೀದಿಸುವ ಪ್ರಕ್ರಿಯೆ ಮುಂದುವರಿದಿದೆ. ಮೈಸೂರಿನ ಕಲಾಮಂದಿರದಲ್ಲಿ ಶನಿವಾರ 153 ಮಂದಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗಿದೆ.

ಮೈಸೂರಿನ 60ಕ್ಕೂ ಹೆಚ್ಚು ಜನರು ‘ಗೌಡಾ’ ಖರೀದಿದ್ದಾರೆ ಎಂಬ ವಿಷಯ ಕುತೂಹಲಕ್ಕೆ ಕಾರಣವಾಗಿದೆ. ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಕಲಾವಿದರು ಪದವಿ ಪಡೆದಿದ್ದಾರೆ. ಮಂಡ್ಯದಿಂದ ಮತ್ತೆ 25 ಮಂದಿ ಪದವಿ ಪಡೆದಿದ್ದಾರೆ. ‘ಗೌಡಾ’ ಜೊತೆಗೆ ಹಲವರು ಡಾ.ಅಬ್ದುಲ್‌ ಕಲಾಂ ಅಂತರ ರಾಷ್ಟ್ರೀಯ ಸೇವಾ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಶನಿವಾರ ನಗರದ ಹಲವು ಬೀದಿಗಳಲ್ಲಿ ಪದವಿ ಪಡೆದವರ ಫ್ಲೆಕ್ಸ್‌ ಹಾಕಲಾಗಿದ್ದು ಅಭಿನಂದನೆಗಳ ಮಹಾಪೂರ ಹರಿಸಲಾಗಿದೆ. ಅಭಿನಂದನಾ ಕಾರ್ಯಕ್ರಮಗಳೂ ಸಿದ್ಧಗೊಳ್ಳುತ್ತಿವೆ.

ADVERTISEMENT

ಅಂತರ್ಜಾಲದಲ್ಲಿ ಅರ್ಜಿ: ‘ಗೌರವ ಡಾಕ್ಟರೇಟ್‌ ಪದವಿ ಕೊಡಿಸುವಲ್ಲಿ ಏಜೆಂಟರು ಅವ್ಯವಹಾರ ನಡೆಸಿರುವ ಹಿನ್ನೆಲೆಯಲ್ಲಿ ಖಾಸಗಿ ವಿಶ್ವವಿದ್ಯಾಲಯ ಪದವಿ ಪ್ರದಾನಕ್ಕೆ ಹೊಸ ಮಾರ್ಗ ಹುಡುಕಿಕೊಂಡಿದೆ. ಅದಕ್ಕಾಗಿ ವೆಬ್‌ ತಾಣವೊಂದನ್ನು ರೂಪಿಸಿದ್ದು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದವರಿಗೆ ಪದವಿ ನೀಡಲಾಗುತ್ತಿದೆ’ ಎಂದು ‘ಗೌಡಾ’ ಏಜೆಂಟರೊಬ್ಬರು ತಿಳಿಸಿದರು. ವೆಬ್‌ ತಾಣದ ವಿಳಾಸ ನೀಡಲು ಅವರು ನಿರಾಕರಿಸಿದರು.

ರಹಸ್ಯ ಕಾರ್ಯಕ್ರಮ ಆಯೋಜನೆ: ಹಣ ಕೊಟ್ಟು ‘ಗೌಡಾ’ ಖರೀದಿ ಕುರಿತು ‘ಪ್ರಜಾವಾಣಿ’ಯಲ್ಲಿ ಸರಣಿ ವರದಿಗಳು ಪ್ರಕಟಗೊಂಡ ನಂತರ ಕಾರ್ಯಕ್ರಮ ಆಯೋಜಕರು ಶನಿವಾರ ರಹಸ್ಯವಾಗಿ ಪದವಿ ಪ್ರದಾನ ಸಮಾರಂಭ ಆಯೋಜಿಸಿದ್ದರು. ಎರಡು ಬಾರಿ ಕಾರ್ಯಕ್ರಮ ಮುಂದೂಡಿ ತರಾತುರಿಯಲ್ಲಿ ದಿನಾಂಕ ನಿಗದಿ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಕೆಎಂಎಫ್‌ನಲ್ಲಿ ಉದ್ಯೋಗಿಯಾಗಿರುವ ಸಂತೋಷ್‌ ಎನ್ನುವವರು ‘ಉಪನ್ಯಾಸ ಮತ್ತು ಪ್ರಶಸ್ತಿ ಪ್ರದಾನ’ ಉದ್ದೇಶಕ್ಕೆ ಶನಿವಾರ ಕಲಾಮಂದಿರ ಕಾಯ್ದಿರಿಸಿದ್ದರು ಎಂದು ಮೈಸೂರು ಕಲಾಮಂದಿರದ ಸಿಬ್ಬಂದಿಯೊಬ್ಬರು ತಿಳಿಸಿದರು.

‘ಕೇವಲ 40 ನಿಮಿಷಯದಲ್ಲಿ ಕಾರ್ಯಕ್ರಮ ಮುಗಿಯಿತು. ವೇದಿಕೆಯ ಮೇಲೆ ಪದವಿ ಪುರಸ್ಕೃತರ ಹೆಸರುಗಳನ್ನು ಕೂಗಲಾಯಿತು. ಗ್ರೀನ್‌ರೂಂನಲ್ಲಿ ಸಾಲಾಗಿ ಇಟ್ಟಿದ್ದ ಪ್ರಮಾಣ ಪತ್ರಗಳನ್ನು ನಾಮುಂದು, ತಾಮುಂದು ಎಂಬಂತೆ ಕಿತ್ತಾಡಿಕೊಂಡರು. ತಕ್ಷಣ ಎಲ್ಲರೂ ಕಲಾಮಂದಿರ ಖಾಲಿ ಮಾಡಿದರು’ ಎಂದು ಹೆಸರು ಹೇಳಲಿಚ್ಛಿಸದ ಕಲಾವಿದರೊಬ್ಬರು ತಿಳಿಸಿದರು.

‘ಪ್ರಜಾವಾಣಿಯಲ್ಲಿ ವರದಿ ಪ್ರಕಟಗೊಂಡ ನಂತರವೂ ಈ ಅಕ್ರಮ ‘ಗೌಡಾ’ ಪದವಿ ಪಡೆಯುತ್ತಿರುವ ಜನರಿಗೆ ನಾಚಿಕೆ ಆಗಬೇಕು. ಸಮಾಜ ಅಧೋಗತಿಗಿಳಿಯುತ್ತಿದೆ ಎಂದು ನನಗೆ ಅನ್ನಿಸುತ್ತಿದೆ. ಮುಂದೆ ಸರ್ಕಾರವೇ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ರೈತ ನಾಯಕಿ ಸುನಂದಾ ಜಯರಾಂ ಹೇಳಿದರು.

ಸುದ್ದಿ ಪ್ರಕಟ ಇಲ್ಲ

ಸಮಾಜ ಸೇವೆ ಹೆಸರಿನಲ್ಲಿ ಶನಿವಾರ ಗೌರವ ಡಾಕ್ಟರೇಟ್‌ ಪಡೆದಿರುವ ಮುಖಂಡನ ಬೆಂಬಲಿಗರೊಬ್ಬರು ಪತ್ರಿಕಾ ಪ್ರಕಟಣೆ ಸಮೇತ ‘ಪ್ರಜಾವಾಣಿ’ ಮಂಡ್ಯ ಕಚೇರಿಗೆ ಬಂದು ವರದಿ ಪ್ರಕಟಿಸುವಂತೆ ಕೋರಿದರು. ಅನಧಿಕೃತ ವಿಶ್ವವಿದ್ಯಾಲಯದಿಂದ ‘ಗೌಡ’ ಪಡೆದಿರುವ ಸುದ್ದಿಯನ್ನು ‘ಪ್ರಜಾವಾಣಿ’ ಪ್ರಕಟಿಸುವುದಿಲ್ಲ ಎಂದು ಹೇಳಿ ವಾಪಸ್‌ ಕಳುಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.