ADVERTISEMENT

ಸಾಲಿಗ್ರಾಮ; ಹುಣಸಮ್ಮ ದೇವಿ ಅದ್ಧೂರಿ ಬ್ರಹ್ಮರಥೋತ್ಸವ: ಸಾವಿರಾರು ಭಕ್ತರು ಸಾಕ್ಷಿ

ಸಾಲಿಗ್ರಾಮ ಯಶವಂತ್
Published 13 ಏಪ್ರಿಲ್ 2025, 7:32 IST
Last Updated 13 ಏಪ್ರಿಲ್ 2025, 7:32 IST
ಸಾಲಿಗ್ರಾಮ ಸಮೀಪ ಗಂಧನಹಳ್ಳಿ ಗ್ರಾಮದ ಗ್ರಾಮ ದೇವತೆ ಹುಣಸಮ್ಮ ದೇವಿ ಬ್ರಹ್ಮರಥೋತ್ಸವ ಶುಕ್ರವಾರ ತಡರಾತ್ರಿ ಸಾವಿರಾರು ಭಕ್ತರ ಜಯಘೋಷಣೆಯೊಂದಿಗೆ ಅದ್ದೂರಿಯಾಗಿ ನಡೆಯಿತು
ಸಾಲಿಗ್ರಾಮ ಸಮೀಪ ಗಂಧನಹಳ್ಳಿ ಗ್ರಾಮದ ಗ್ರಾಮ ದೇವತೆ ಹುಣಸಮ್ಮ ದೇವಿ ಬ್ರಹ್ಮರಥೋತ್ಸವ ಶುಕ್ರವಾರ ತಡರಾತ್ರಿ ಸಾವಿರಾರು ಭಕ್ತರ ಜಯಘೋಷಣೆಯೊಂದಿಗೆ ಅದ್ದೂರಿಯಾಗಿ ನಡೆಯಿತು   

ಸಾಲಿಗ್ರಾಮ: ಗಂಧನಹಳ್ಳಿ ಗ್ರಾಮದ ಗ್ರಾಮ ದೇವತೆ ಹುಣಸಮ್ಮ ದೇವಿ ಬ್ರಹ್ಮರಥೋತ್ಸವ ಶುಕ್ರವಾರ ತಡರಾತ್ರಿ ಸಾವಿರಾರು ಭಕ್ತರ ಜಯ ಘೋಷಣೆ ಹಾಗೂ ತುಂಬಿಟ್ಟಿನ ಆರತಿಯೊಂದಿಗೆ ಶ್ರದ್ಧಾ–ಭಕ್ತಿಯಿಂದ ನಡೆಯಿತು.

ಮೂರು ದಿನಗಳ ಕಾಲ ನಡೆಯುವ ರಥೋತ್ಸವಕ್ಕೆ ಶುಕ್ರವಾರ ಮುಂಜಾನೆಯಿಂದಲ್ಲೇ ಹುಣಸಮ್ಮ ದೇವಿಗೆ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು.

ಮಹಿಳೆಯರು ಮತ್ತು ಮಕ್ಕಳು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಪುನೀತರಾದರು. ಸಂಜೆ ಹುಣಸಮ್ಮ ದೇವಿಯ ಉತ್ಸವ ಮೂರ್ತಿಯನ್ನು ಭಕ್ತರು ದೇವಾಲಯದಿಂದ ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರಣಿಗೆ ಬರುವ ವೇಳೆ ಮಹಿಳೆಯರು ಮನೆ ಮುಂದೆ ನೀರು ಹಾಕಿ ರಂಗೋಲಿ ಬಿಟ್ಟು ದೇವಿಯ ಪೂಜೆಗೆ ಸಿದ್ಧತೆ ಮಾಡಿಕೊಂಡಿದ್ದರು.

ADVERTISEMENT

ಗಂಧನಹಳ್ಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯ ಮೆರಣಿಗೆ ನಂತರ, ರಾತ್ರಿ ದೇವಾಲಯ ಪ್ರಾಂಗಣದಲ್ಲಿ ಹೂವಿನಿಂದ ಅಲಂಕೃತ ಗೊಂಡಿದ್ದ ರಥಕ್ಕೆ ಅರ್ಚಕ ಸುರೇಶ್ ಅವರ ಮಾರ್ಗದರ್ಶನದಂತೆ ಉತ್ಸವ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಲಾಯಿತು. ಮಹಿಳೆಯರು ತುಂಬಿಟ್ಟಿನ ಆರತಿ ಮಾಡುವ ಮೂಲಕ ದೇವಿಗೆ ಪೂಜೆ ಸಲ್ಲಿಸಿದರು.

ನೂರಾರು ಭಕ್ತರು ಹುಣಸಮ್ಮ ದೇವಿಗೆ ಜಯಘೋಷಣೆ ಕೂಗುತ್ತಾ ಬ್ರಹ್ಮರಥವನ್ನು ಎಳೆಯಲು ಮುಂದಾಗುತ್ತಿದ್ದಂತೆ ಸಾವಿರಾರು ಭಕ್ತರು ದೇವಿಯ ರಥಕ್ಕೆ ಹಣ್ಣು ಮತ್ತು ಜವನವನ್ನು ಭಕ್ತಿಯಿಂದ ಎಸೆದು ಭಕ್ತಿ ಮೆರೆದರು. ತಡರಾತ್ರಿ ಸಮಯದಲ್ಲೂ ಸಾವಿರಾರು ಮಹಿಳೆಯರು ತುಂಬಿಟ್ಟಿನ ಆರತಿಯೊಂದಿಗೆ ಬ್ರಹ್ಮ ರಥದ ಹಿಂದೆಯೇ ದೇವಾಲಯದ ಸುತ್ತಾ ಪ್ರದಕ್ಷಣೆ ಹಾಕುವ ಮೂಲಕ ಭಕ್ತಿ ಮೆರೆದರು.

ಹುಣಸಮ್ಮ ದೇವಿಯ ರಥವನ್ನು ಭಕ್ತರು ತಡರಾತ್ರಿ 11.40ಕ್ಕೆ ದೇವಾಲಯ ಪ್ರಾಂಗಣದಲ್ಲಿ ನಿಲ್ಲಿಸಿದರು. ನಂತರ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಹರಿಕೆ ಹೊತ್ತು ಕೊಂಡು ಮನೆಗೆ ತೆರಳುತ್ತಿದ್ದರು. ಹುಣಸಮ್ಮ ದೇವಿಯ ಬ್ರಹ್ಮರಥಕ್ಕೆ ಹಾಸನ, ಮಡಿಕೇರಿ, ಬೆಂಗಳೂರು, ಮಂಡ್ಯ, ತುಮಕೂರು, ಕನಕಪುರ, ಹಾವೇರಿ ಜಿಲ್ಲೆಗಳಿಂದ ನೂರಾರು ಮಂದಿ ಭಕ್ತರು ಆಗಮಿಸಿದ್ದರು.

ಸಾಲಿಗ್ರಾಮ ಸಮೀಪ ಗಂಧನಹಳ್ಳಿ ಗ್ರಾಮ ದೇವತೆ ಹುಣಸಮ್ಮ ದೇವಿ ಉತ್ಸವ ಮೂರ್ತಿಯನ್ನು ಭಕ್ತರು ಸಾಗಿದರು

ಗಮನ ಸೆಳೆದ ತುಂಬಿಟ್ಟಿನ ಆರತಿ; ಹುಣಸಮ್ಮ ದೇವಿಯ ಬ್ರಹ್ಮರಥಕ್ಕೆ ಮಹಿಳೆಯರು ಧಾರ್ಮಿಕ ವಿಧಿ ವಿಧಾನದಂತೆ ಶುಕ್ರವಾರ ತಡರಾತ್ರಿ ತಟ್ಟೆಯಲ್ಲಿ ತುಂಬಿಟ್ಟು ಆರತಿ ಹಿಡಿದು ದೇವಿಗೆ ಆರತಿ ಬೆಳಗಲು ಮುಂದಾಗುತ್ತಿದ್ದಂತೆ ನಕ್ಷತ್ರಗಳು ಕಳಚಿ ಇಳೆಗೆ ಬಿದ್ದಿರುವಂತೆ ಕಾಣುತ್ತಿತು. ರಥೋತ್ಸವ ಯಶಸ್ವಿಯಾಗಿ ನಡೆಯಲು ಗ್ರಾಮದ ವಿವಿಧ ಕೋಮಿನ ಯಜಮಾನರು, ಯುವ ಮುಖಂಡರು ಶ್ರಮಿಸಿದ್ದರು.

ಸಾಲಿಗ್ರಾಮ ಸಮೀಪ ಗಂಧನಹಳ್ಳಿ ಗ್ರಾಮದ ಗ್ರಾಮ ದೇವತೆ ಹುಣಸಮ್ಮದೇವಿಯ ರಥೋತ್ಸವದಲ್ಲಿ ಭಾಗವಹಿಸಿದ್ದ ಮುತ್ತೈದೆಯರು ತುಂಬಿಟ್ಟಿನ ಆರತಿಯೊಂದಿಗೆ ಪೂಜೆಗೆ ಆಗಮಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.