ADVERTISEMENT

ಚುನಾವಣೆ: ಹುಣಸೂರು ನಗರಸಭೆ ಅತಂತ್ರ

ಫಲಿತಾಂಶ ಪ್ರಕಟ, ಹೊಸ ಮುಖಗಳಿಗ ಮಣೆ ಹಾಕಿದ ಮತದಾರ, ದೊಡ್ಡ ಪಕ್ಷವಾಗಿ ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 9:30 IST
Last Updated 12 ಫೆಬ್ರುವರಿ 2020, 9:30 IST
ಹುಣಸೂರು ನಗರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೆಡಿಎಸ್ ಅಭ್ಯರ್ಥಿ ರಾಧಾ ವಿಜಯದ ನಗೆ ಬೀರಿದರು 2. ಹುಣಸೂರು ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಣೇಶ್‌ ಗೆಲುವು ಸಾಧಿಸಿ ಪ್ರಮಾಣ ಪತ್ರ ಸ್ವೀಕರಿಸಿದರು 3. ಎಸ್‌ಡಿಪಿಐ ಅಭ್ಯರ್ಥಿ ಸೈಯದ್ ಯೂನಿಸ್ ಗೆಲ್ಲುವು ಸಾಧಿಸಿದ್ದಾರೆ
ಹುಣಸೂರು ನಗರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೆಡಿಎಸ್ ಅಭ್ಯರ್ಥಿ ರಾಧಾ ವಿಜಯದ ನಗೆ ಬೀರಿದರು 2. ಹುಣಸೂರು ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಣೇಶ್‌ ಗೆಲುವು ಸಾಧಿಸಿ ಪ್ರಮಾಣ ಪತ್ರ ಸ್ವೀಕರಿಸಿದರು 3. ಎಸ್‌ಡಿಪಿಐ ಅಭ್ಯರ್ಥಿ ಸೈಯದ್ ಯೂನಿಸ್ ಗೆಲ್ಲುವು ಸಾಧಿಸಿದ್ದಾರೆ   

ಹುಣಸೂರು: ಹುಣಸೂರು ನಗರಸಭೆಗೆ ನಡೆದ ಪ್ರಥಮ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಪೂರ್ಣ ಬಹುಮತ ಸಿಗದೆ ಅತಂತ್ರ ಸ್ಥಿತಿ ಸೃಷ್ಟಿಯಾಗಿದೆ.

ನಗರಸಭೆಯಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮತ ಎಣಿಕೆ ಕಾರ್ಯ 9.30ಕ್ಕೆ ಅಂತ್ಯಗೊಂಡಿತು. 31 ವಾರ್ಡ್‌ಗಳಲ್ಲಿ ಕಾಂಗ್ರೆಸ್ 14 ಅತಿ ಹೆಚ್ಚು ಸ್ಥಾನ ಪಡೆದರೂ ಅಧಿಕಾರದ ಗದ್ದುಗೆ ಹಿಡಿಯಲು ಶ್ರಮಿಸಬೇಕಾಗಿದೆ. ಜೆಡಿಎಸ್‌ 7 ಸ್ಥಾನಗಳಿಗೆ ತೃಪ್ತಿ ಪಟ್ಟರೆ, ಬಿಜೆಪಿಯ ಮೂವರು ಸದಸ್ಯರು ಗೆಲುವಿನ ನಗೆ ಬೀರಿದ್ದಾರೆ. ಎಸ್‌ಡಿಪಿಐ 2 ಸ್ಥಾನ ಗೆಲ್ಲುವ ಮೂಲಕ ಹೊಸ ಅಲೆ ಸೃಷ್ಟಿಸಿದೆ. ಪಕ್ಷೇತರರು 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಅತಂತ್ರ: ಹುಣಸೂರು ನಗರಸಭೆ ಅಧಿಕಾರದ ಗದ್ದುಗೆ ಹಿಡಿಯಲು 17 ಸ್ಥಾನಗಳು ಬೇಕಿದ್ದು, ಈ ಸಂಖ್ಯೆ ಯಾವುದೇ ಪಕ್ಷಕ್ಕೂ ಸಿಕ್ಕಿಲ್ಲ. ಕಾಂಗ್ರೆಸ್– ಜೆಡಿಎಸ್ ಹೊಂದಾಣಿಕೆ ಅಥವಾ ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರಕ್ಕೆ ಏರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಹೊಸ ಮುಖಗಳಿಗೆ ಮಣೆ: ಪ್ರಥಮ ನಗರಸಭೆ ಚುನಾವಣೆಯಲ್ಲಿ 31 ಸ್ಥಾನಗಳ ಪೈಕಿ 27 ಸ್ಥಾನಗಳಿಗೆ ಹೊಸಬರು ಆಯ್ಕೆಯಾಗಿದ್ದಾರೆ. ನಾಲ್ವರು ಸದಸ್ಯರು ಮರು ಆಯ್ಕೆಗೊಂಡಿದ್ದಾರೆ. ಕಣದಲ್ಲಿ ಐವರು ಮಾಜಿ ಅಧ್ಯಕ್ಷರು ಸ್ಪರ್ಧಿಸಿದ್ದು, ಇವರೆಲ್ಲರೂ ಸೋಲಿನ ರುಚಿ ಅನುಭವಿಸಿದ್ದಾರೆ.

ಫಲಿತಾಂಶದ ವಿಶೇಷ: ಪ್ರಥಮ ನಗರಸಭೆ ಚುನಾವಣೆಯಲ್ಲಿ ಆಯ್ಕೆ ಬಯಸಿ ಸ್ಪರ್ಧಿಸಿದ್ದ 118 ಸದಸ್ಯರಲ್ಲಿ ಹಲವು ಪ್ರಮುಖ ಅಭ್ಯರ್ಥಿಗಳು ಸೋಲುಂಡಿದ್ದಾರೆ. ವಾರ್ಡ್ 1ರಲ್ಲಿ ಕಟ್ಟಡ ಕಾರ್ಮಿಕ ಸಿ.ದೇವರಾಜು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಎದುರಾಳಿ, ಮಾಜಿ ಅಧ್ಯಕ್ಷೆ ಮಂಜುಳಾ ಚೆನ್ನಬಸಪ್ಪ ಅವರನ್ನು ಸೋಲಿಸಿದ್ದಾರೆ.

ವಾರ್ಡ್ 3ರಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ರಘು ಅವರ ಪತ್ನಿ ಅನುಷಾ ಗೆಲುವು ಸಾಧಿಸಿದ್ದು, ವಾರ್ಡ್ 4ರಲ್ಲಿ ಮಾಜಿ ಉಪಾಧ್ಯಕ್ಷೆ ಧನಲಕ್ಷ್ಮಿ, ವಾರ್ಡ್ 5ರಲ್ಲಿ ಮಾಜಿ ಸದಸ್ಯ ಶಿವರಾಜ್, ವಾರ್ಡ್ 10ರಲ್ಲಿ ಮಾಜಿ ಅಧ್ಯಕ್ಷ ಶಿವಕುಮಾರ್, ವಾರ್ಡ್ 13ರಲ್ಲಿ 10ನೇ ಬಾರಿ ಆಯ್ಕೆ ಬಯಸಿದ್ದ ಹಜರತ್ ಜಾನ್, 29ನೇ ವಾರ್ಡ್‌ನಲ್ಲಿ ಮೂರನೇ ಬಾರಿಗೆ ಆಯ್ಕೆ ಬಯಸಿದ್ದ ಪ್ರೇಮಾ ನಂಜಪ್ಪ, 30ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಚ್.ಎಸ್.ಶಿವಯ್ಯ ಅವರ ಪತ್ನಿ ರಾಜಲಕ್ಷ್ಮಿ ಸೋಲಿನ ರುಚಿ ಕಂಡಿದ್ದಾರೆ.

ಒಂದೇ ಕುಟುಂಬದಿಂದ ವಿವಿಧ ವಾರ್ಡ್‌ಗಳಲ್ಲಿ ಸ್ಪರ್ಧಿಸಿದ್ದ ಮಾಜಿ ಅಧ್ಯಕ್ಷ ಚಂದ್ರಶೇಖರ್, ಸಹೋದರ ಕುಮಾರ್ ಮತ್ತು ನಾದಿನಿ ಶ್ವೇತಾ ಶಂಕರ್ ಸೋತಿದ್ದು, ಬಿಜೆಪಿ ಪಕ್ಷದಿಂದ ಕಣಕ್ಕಿಳಿದಿದ್ದ ಗಣೇಶ್‌ ಕುಮಾರಸ್ವಾಮಿ ಗೆಲುವಿನ ನಗೆ ಬೀರಿದ್ದರೆ, ಸಹೋದರ ವೆಂಕಟೇಶ್‌ ಕುಮಾರ
ಸ್ವಾಮಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದಾರೆ.

ಮರು ಆಯ್ಕೆಗೊಂಡವರು: ಸತೀಶ್‌ ಕುಮಾರ್‌, ಸೌರಭ ಸಿದ್ದರಾಜು, ಶರವಣ ಮತ್ತು ಕೃಷ್ಣರಾಜಗುಪ್ತ ನಗರಸಭೆಗೆ ಮರು ಆಯ್ಕೆಗೊಂಡಿದ್ದಾರೆ.

ಶಿವರಾಜ್, ಧನಲಕ್ಷ್ಮಿ ದಂಪತಿ ಸೋಲು
ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶಿವರಾಜ್ ಮತ್ತು ಧನಲಕ್ಷ್ಮಿ ದಂಪತಿ ಈ ಬಾರಿ ಸೋಲು ಕಂಡಿದ್ದಾರೆ. ಕಳೆದ 5 ಬಾರಿ ಗೆಲುವು ಕಂಡಿದ್ದ ಶಿವರಾಜ್, ಈ ಚುನಾವಣೆಯಲ್ಲಿ ಸೋತಿದ್ದಾರೆ. ಇವರ ಪತ್ನಿ ಕಳೆದ ಸಾಲಿನಲ್ಲಿ ಉಪಾಧ್ಯಕ್ಷೆಯಾಗಿ ಕೆಲಸ ಮಾಡಿದ್ದರೂ ಮತದಾರರು ಇವರಿಗೆ ಮಣೆ ಹಾಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.