ಹುಣಸೂರು: ‘ಕೃಷಿ ಕುಟುಂಬದ ಯುವಕರು ಉದ್ಯೋಗಕ್ಕಾಗಿ ನಗರಗಳತ್ತ ಮುಖ ಮಾಡದೇ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಬೇಸಾಯದಲ್ಲಿ ತೊಡಗಿ, ಮಾದರಿ ರೈತರಾಗಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್ ಹೇಳಿದರು.
ತಾಲ್ಲೂಕಿನ ರಾಮಪಟ್ಟಣ ಗ್ರಾಮದಲ್ಲಿ ರೈತ ಸಂಘದ ಶಾಖೆ ಉದ್ಘಾಟಿಸಿ, ‘ರಾಮಪಟ್ಟಣದ ಪ್ರಗತಿಪರ ರೈತರು ಸಂಘದೊಂದಿಗೆ ನಿರಂತರವಾಗಿ ಗುರುತಿಸಿಕೊಂಡು ಪ್ರತಿಯೊಂದು ಹೋರಾಟದಲ್ಲಿ ಭಾಗವಹಿಸಿ ರೈತರ ಧ್ವನಿಯಾಗಿದ್ದಾರೆ. ಈ ಗ್ರಾಮ ಹುಣಸೂರು ನಗರಕ್ಕೆ ಹತ್ತಿರವಿದ್ದು, ಲಕ್ಷ್ಮಣತೀರ್ಥ ನದಿ ದಂಡೆಯಲ್ಲಿರುವುದರಿಂದ ಭೂಮಿ ಫಲವತ್ತತೆಯಿಂದ ಕೂಡಿದೆ. ನಮ್ಮ ಪೂರ್ವಿಕರು ಕೊಡುಗೆ ನೀಡಿದ ಕೃಷಿ ಭೂಮಿ ಮಾರಾಟ ಮಾಡಿ ಉದ್ಯೋಗಕ್ಕಾಗಿ ನಗರಗಳತ್ತ ಹೋಗಿ ಸ್ವಾವಲಂಬಿ ಬದುಕು ಕೈಚೆಲ್ಲಬೇಡಿ’ ಎಂದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ ಮಾತನಾಡಿ, ಫಲವತ್ತಾದ ಭೂಮಿಯನ್ನು ಮಾರಾಟ ಮಾಡಿ ಬಡಾವಣೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸದೆ ಅನ್ನದಾತರಾಗಿ ಬದುಕು ಕಟ್ಟಿಕೊಳ್ಳಲು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ಗುರುಪುರ ಆಲಿಜಾನ್, ಅಗ್ರಹಾರ ರಾಮೇಗೌ, ಈಶ್ವರೇಗೌಡ, ರಾಜೇಗೌಡ, ರವಿಗೌಡ, ಸತೀಶ್, ಸಣ್ಣೇಗೌಡ, ರಂಗೇಗೌಡ, ಕಾಳೇಗೌಡ, ಮೊಗಣ್ಣ, ಮಲ್ಲೇಶ್ ಹಾಗೂ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.