ಹುಣಸೂರು: ‘ರಾಜ್ಯ ರೈತ ಸಂಘ ತನ್ನ ಹೋರಾಟವನ್ನು ಗಾಂಧಿ ತತ್ವ ಆದರ್ಶ ಮಾರ್ಗದಲ್ಲಿ ದಶಕಗಳಿಂದ ಹೋರಾಟ ಮಾಡಿ ರೈತರಿಗೆ ನ್ಯಾಯಕೊಡಿಸುವಲ್ಲಿ ತೊಡಗಿದೆ’ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್ ಹೇಳಿದರು.
ತಾಲ್ಲೂಕಿನ ಕುಪ್ಪೆ ಗ್ರಾಮದಲ್ಲಿ ರೈತ ಸಂಘ ಉದ್ಘಾಟಿಸಿ ಮಾತನಾಡಿ, ‘ರೈತ ಸಂಘ ಹುಟ್ಟು ಪಡೆದಿರುವುದು ಅನ್ನದಾತರಿಗೆ ನ್ಯಾಯಕೊಡಿಸಲು. ರೈತರಿಗೆ ಮಾರುಕಟ್ಟೆಯಿಂದ ಪ್ರತಿಯೊಂದು ಹಂತದಲ್ಲೂ ಮೋಸವಾಗುತ್ತಿದೆ. ಈ ಬಗ್ಗೆ ರೈತ ಸಂಘಟನೆ ತೀವ್ರತರವಾದ ಹೋರಾಟ ನಡೆಸಿ ಇತ್ತೀಚಿಗೆ ವಾಣಿಜ್ಯ ಬೆಳೆ ಸೇರಿದಂತೆ ಇತರೆ ಆಹಾರ ಪದಾರ್ಥಗಳಿಗೆ ಬೆಂಬಲ ಬೆಲೆ ಸರ್ಕಾರ ನೀಡಿ ರೈತನ ಆರ್ಥಿಕ ಶಕ್ತಿ ದ್ವಿಗುಣವಾಗಲು ಪೂರಕವಾಗಿದೆ’ ಎಂದು ತಿಳಿಸಿದರು.
‘ರೈತ ಸಂಘದ ಒಗ್ಗಟ್ಟಿನ ಹೋರಾಟದ ಫಲ ಮತ್ತು ಗಾಂಧಿ ಅವರ ತತ್ವ ಆದರ್ಶವನ್ನು ರೈತ ಸಂಘ ಅಳವಡಿಸಿಕೊಳ್ಳಲಾಗಿ ನಮ್ಮ ಹೋರಾಟಕ್ಕೆ ಸರ್ಕಾರದ ಸ್ಪಂದನೆ ಸಿಕ್ಕಿದೆ’ ಎಂದರು.
ರೈತ ಸಂಘ ಹಲವು ವಿಷಯಗಳಲ್ಲಿ ಜಡ್ಡುಗಟ್ಟಿದ ಸರ್ಕಾರವನ್ನು ಬಡಿದೆಬ್ಬಿಸಲು ಉಗ್ರ ಹೋರಾಟ ನಡೆಸಿದ್ದರೂ, ಅದರಲ್ಲೂ ಗಾಂಧಿ ಅದರ್ಶ ಅಳವಡಿಸಿಕೊಳ್ಳಲಾಗಿದೆ. ರೈತ ಚಳವಳಿ ಮತ್ತು ಗಾಂಧಿ ಚಳವಳಿ ಎರಡೂ ಒಂದು ನಾಣ್ಯದ ಎರಡು ಮುಖವಿದ್ದಂತೆ ಎಂದು ತಿಳಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ ಮಾತನಾಡಿದರು. ಬಸವರಾಜೇಗೌಡ, ಅಗ್ರಹಾರ ರಾಮೇಗೌಡ, ತಂಬಾಕು ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋದೂರು ಶಿವಣ್ಣ, ಗೌರವಾಧ್ಯಕ್ಷ ಚಂದ್ರೇಗೌಡ,ರವಿ.ಮಹೇಶ್, ಮಹದೇವು, ಶಂಕರ್, ಮಾದೇವು, ವೆಕಟೇಶ, ಗ್ರಾಮದ ಯಜಮಾನ ಅಣ್ಣೇಗೌಡ, ಕುಪ್ಪೆ ಗ್ರಾಮ ಘಟಕದ ಅಧ್ಯಕ್ಷ ದಶರಥ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.