
ಹುಣಸೂರು: ನಗರದಲ್ಲಿ ಬೃಹತ್ ಹನುಮ ಜಯಂತಿ ಉತ್ಸವ ಶಾಂತಿಯುತವಾಗಿ ಪ್ರಮುಖ ಬೀದಿಯಲ್ಲಿ ತೆರಳಿ ಸಂಪನ್ನಗೊಂಡಿತು.
ರಂಗನಾಥ ಬಡಾವಣೆಯಲ್ಲಿ ಗುರುವಾರ ಬೆಳಿಗ್ಗೆ 11ಕ್ಕೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಜಿ.ಡಿ. ಹರೀಶ್ ಗೌಡ, ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಮತ್ತು ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜ ಸ್ವಾಮೀಜಿ, ಉಕ್ಕಿನ ಕಂತೆ ಮಠದ ಸಾಂಬಸದಾಶಿವ ಸ್ವಾಮೀಜಿ ಅವರು ನಂದಿ ಕಂಬ ಮತ್ತು ಆಂಜನೇಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು.
ಹನುಮ ಜಯಂತ್ಯುತ್ಸವದಲ್ಲಿ ತಾಲ್ಲೂಕಿನ 10 ಗರಡಿಗಳಿಂದ ಆಂಜನೇಯ ಉತ್ಸವ ಮೂರ್ತಿಯೊಂದಿಗೆ ಆಗಮಿಸಿದ್ದ ಭಕ್ತರು ಗಮನ ಸೆಳೆದರು. ಸನಾತನ ಧರ್ಮ ಜ್ಯೋತಿ, ಅಂಜನಾದ್ರಿ ಕ್ಷೇತ್ರ, ಅಯೋಧ್ಯೆ ಧರ್ಮ ಧ್ವಜ ಸೇರಿದಂತೆ ಕಲಾತಂಡಗಳಾದ ವೀರಭದ್ರ ಕುಣಿತ, ವೀರಗಾಸೆ, ನವಿಲು ಕುಣಿತ, ಉಗ್ರ ನರಸಿಂಹ, ಕೀಲು ಕುದುರೆ, ಡೊಳ್ಳು ಕುಣಿತ, ಕೊಡವರ ಸಾಂಪ್ರದಾಯಕ ವಾದ್ಯ, ಪೌರಕಾರ್ಮಿಕರ ಡೋಲು, ಕೇರಳ ಚಂಡೆ ವಾದ್ಯ, ನಾದಸ್ವರಗಳು ಆಕರ್ಷಿಸಿದವು.
ಹನುಮ ಉತ್ಸವದಲ್ಲಿ ಗಣ್ಯರು ತೆರೆದ ವಾಹನದಲ್ಲಿ ಒಟ್ಟಿಗೆ ಮೆರವಣಿಗೆಯಲ್ಲಿ ಭಾಗವಹಿಸಿ ಕ್ಷೇತ್ರದ ಜನರತ್ತ ಕೈಬೀಸಿ ಅಭಿನಂದಿಸುವಲ್ಲಿ ತೊಡಗಿದ್ದರು. ಸಂಸದ ಯದುವೀರರು, ಕಲ್ಕುಣಿಕೆ ಬಡಾವಣೆ ಅಂತ್ಯವಾಗುತ್ತಿದ್ದಂತೆ ಕೆಲಸ ನಿಮಿತ್ತ ಉತ್ಸವದಿಂದ ತೆರಳಿದರು.
ಪ್ರಸಾದ:
ಉತ್ಸವದ ಅಂಗವಾಗಿ ವಿವಿಧೆಡೆಯಿಂದ ಬಂದಿದ್ದ ಜನರಿಗೆ ವಿವಿಧ ಸಂಘ ಸಂಸ್ಥೆಗಳು ಮತ್ತು ಭಕ್ತರು ಪ್ರಸಾದ ವಿತರಣೆ ಮಾಡಿದರು. ಅಲ್ಲಲ್ಲಿ ಪಾನೀಯ ವ್ಯವಸ್ಥೆ ಮಾಡಲಾಗಿತ್ತು. ಕಾರ್ಖಾನೆ ರಸ್ತೆಯಲ್ಲಿ ಮುಸ್ಲಿಂ ಸಮುದಾಯದವರಿಂದಲೂ ಉತ್ಸವದಲ್ಲಿ ಭಾಗವಹಿಸಿದ್ದವರಿಗೆ ಹಣ್ಣು ಮತ್ತು ಹೂವು ನೀಡಿ ಸೌಹಾರ್ದ ಮೆರೆದರು.
ಬಿಗಿ ಬಂದೋಬಸ್ತ್:
ಹನುಮಜಯಂತಿ ಅಂಗವಾಗಿ ನಗರದಲ್ಲಿ 1200ಕ್ಕೂ ಹೆಚ್ಚು ಪೊಲೀಸರು ಬೀಡು ಬಿಟ್ಟು ಬಗಿ ಬಂದೋಬಸ್ತ್ ಏರ್ಪಡಿಸಿದ್ದರು. ಮೆರವಣಿಗೆ ತೆರಳುವ ಮಾರ್ಗದಲ್ಲಿ 50 ಸಿಸಿಟಿವಿ ಕ್ಯಾಮೆರಾ, 20 ವಿಡಿಯೊ ಚಿತ್ರಿಕರಣ, 5 ಡ್ರೋಣ್ ಕ್ಯಾಮರಾ ಕಣ್ಗಾವಲು ಹಾಕಲಾಗಿತ್ತು.
ಹನುಮ ಜಯಂತಿ ಉತ್ಸವದಲ್ಲಿ ಸಮಿತಿ ಅಧ್ಯಕ್ಷ ವಿ.ಎನ್.ದಾಸ್, ಕಾರ್ಯದರ್ಶಿ ಅನಿಲ್, ಉಪಾಧ್ಯಕ್ಷ ಮಹದೇವ್, ಮುಖಂಡರಾದ ಸುರೇಂದ್ರ, ಸತೀಶ್, ರಂಜಿತ ಚಿಕ್ಕಮಾದು, ಯೋಗಾನಂದ, ಕೃಷ್ಣರಾಜಗುಪ್ತ, ಜಾಬಗೆರೆರಮೇಶ್, ಕಿರಣ್, ನಾಗರಾಜ್ ಮಲ್ಲಾಡಿ, ರಾಜು ಶಿವರಾಜೇಗೌಡ, ಕೃಷ್ಣ,ಕಲ್ಕುಣಿಕೆ ರಾಘು,ಸಂಪತ್ ಕುಮಾರ್, ಹರವೆ ಶ್ರೀಧರ್, ಕಾಂತರಾಜು, ಗಣೇಶ್ ಕುಮಾರಸ್ವಾಮಿ, ವರದರಾಜ್ ಪಿಳ್ಳೆ, ಚಂದ್ರಶೇಖರ್, ಡಿವೈಎಸ್ಪಿ ರವಿ, ಉಪವಿಭಾಗಾಧಿಕಾರಿ ಮಂಜುನಾಥ್, ತಹಶೀಲ್ದಾರ್ ಮಂಜುನಾಥ್, ಆಯುಕ್ತೆ ಮಾನಸ ಹಾಜರಿದ್ದರು.
ಹುಣಸೂರಿನ ಹನುಮಜಯಂತಿ ಉತ್ಸವಕ್ಕೆ ಛಾಪು ಮೂಡಿಸಿದ್ದ ಮಾಜಿ ಸಂಸದ ಪ್ರತಾಪಸಿಂಹ ಗುರುವಾರ ನಡೆದ ಉತ್ಸವದಲ್ಲಿ ಗೈರು ಹಾಜರಾಗಿದ್ದರು. ಪ್ರತಾಪಸಿಂಹ ಅಭಿಮಾನಿಗಳಾದ ಯುವಸಮುದಾಯದಲ್ಲಿ ಉತ್ಸಾಹ ಕುಂದಿದಂತೆ ಬಾಸಿಸುತ್ತಿತ್ತು.
ಮಾಜಿ ಸಂಸದ ಪ್ರತಾಪಸಿಂಹ ಗೈರು 10 ಗರಡಿಗಳ ಆಂಜನೇಯ ಮೂರ್ತಿಗಳ ಮೆರವಣಿಗೆ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ಥ
ಭಕ್ತರ ದಂಡು
ಹುಣಸೂರು ಹನುಮ ಜಯಂತಿ ಹಳೆ ಮೈಸೂರು ಭಾಗದಲ್ಲಿ ವಿಶೇಷತೆ ಹೊಂದಿದ್ದು ಜಯಂತಿಯಲ್ಲಿ ಉಪವಿಭಾಗ ಸೇರಿದಂತೆ ಕೊಡಗು ಜಿಲ್ಲೆಯಿಂದಲೂ ಭಕ್ತರು ಭಾಗವಹಿಸಿದ್ದರು. ಈ ಬಾರಿಯೂ ವಿವಿಧ ತಾಲ್ಲೂಕು ಮತ್ತು ಜಿಲ್ಲೆಯಿಂದ ಭಾಗವಹಿಸಿದ್ದ ಯುವಕರು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ಕೊಡವರ ಸಾಂಪ್ರದಾಯಿಕ ವಾದ್ಯ ತಂಡಕ್ಕೆ ಹುಡುಗ ಹುಡುಗಿಯರು ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು. ಮೆರವಣಿಗೆಯಲ್ಲಿ ಅಂದಾಜು 18ರಿಂದ 20 ಸಾವಿರ ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು. ಉತ್ಸವ ಸಾಗುವ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ವಾಹನಗಳಿಂದ ದಟ್ಟಣೆಯಾಗಿತ್ತು. ಬೆಂಗಳೂರು –ಮಂಗಳೂರಿಗೆ ತೆರಳುವ ಪ್ರಯಾಣಿಕರು ಸ್ಪಲ್ಪ ಸಮಯ ಕಿರಿಕಿರಿ ಅನುಭವಿಸುವಂತಾಯಿತು. ಪೊಲೀಸರು ವಾಹನ ದಟ್ಟಣೆ ತಗ್ಗಿಸುವಲ್ಲಿ ಹರಸಾಹಸ ಪಟ್ಟರು. ಮೆರವಣಿಗೆಯನ್ನು ಅಗಿಂದಾಗ್ಗೆ ತಡೆದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.