ADVERTISEMENT

ನವೆಂಬರ್‌ನಲ್ಲಿ ನನ್ನ ಮುಂದಿನ ರಾಜಕೀಯ ನಿಲುವು ಪ್ರಕಟ: JDS ಶಾಸಕ ಜಿಟಿ ದೇವೇಗೌಡ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2022, 13:06 IST
Last Updated 27 ಆಗಸ್ಟ್ 2022, 13:06 IST
ಜಿಟಿ ದೇವೇಗೌಡ
ಜಿಟಿ ದೇವೇಗೌಡ   

ಮೈಸೂರು: ‘ನನ್ನ ಮುಂದಿನ ರಾಜಕೀಯ ನಿಲುವು ಮತ್ತು ಪಕ್ಷ ರಾಜಕಾರಣದ ಬಗ್ಗೆ, ಕ್ಷೇತ್ರದ ಜನರು, ಹಿತೈಷಿಗಳು, ಬೆಂಬಲಿಗರ ಸಲಹೆ ಪಡೆದು ನವೆಂಬರ್‌ನಲ್ಲಿ ಪ್ರಕಟಿಸುವೆ’ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು.

ಜೆಡಿಎಸ್‌ ಪಕ್ಷದ ನಾಯಕತ್ವದಿಂದ ಅಂತರ ಕಾಯ್ದುಕೊಂಡಿದ್ದ ಅವರು ಹುಣಸೂರಿನಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಶುಕ್ರವಾರ ವೇದಿಕೆ ಹಂಚಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ‘ನಿರ್ಮಲಾನಂದನಾಥ ಸ್ವಾಮೀಜಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಇದ್ದರು. ಇಬ್ಬರೂ ನನಗೆ ಆತ್ಮೀಯರು. ಎಲ್ಲರೂ ಗೌರವದಿಂದ ಮಾತನಾಡಿದರು. ನವೆಂಬರ್‌ನಲ್ಲಿ ಕುಳಿತು ಮಾತನಾಡೋಣ, ಹೀಗೇಕಾಯಿತು ಎಂದು ಚರ್ಚಿಸೋಣ ಎಂದು ಜೆಡಿಎಸ್‌ ವರಿಷ್ಠರಿಗೆ ಹೇಳಿದ್ದೇನೆ’ ಎಂದರು.

ADVERTISEMENT

‘ನನ್ನ ಮಗನಿಗೆ (ಜಿ.ಡಿ.ಹರೀಶ್‌ಗೌಡ) ಟಿಕೆಟ್‌ ನೀಡಿ, ಮಂತ್ರಿ ಮಾಡಿ ಎಂದು ಯಾರಲ್ಲೂ ಬೇಡಿಕೆ ಇಟ್ಟಿಲ್ಲ. ನಮ್ಮದೇನಿದ್ದರೂ ಜನರ ಪರವಾದ ರಾಜಕಾರಣ’ ಎಂದು ಹೇಳಿದರು.

‘ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅಥವಾ ಕುಮಾರಸ್ವಾಮಿ ಅವರೊಂದಿಗೆ ವೈಷಮ್ಯ ಇಲ್ಲ. ಅವರ ವಿರುದ್ಧ ಆಪಾದನೆಯನ್ನೂ ಮಾಡಿಲ್ಲ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಯಾವ ಮುಖ್ಯಮಂತ್ರಿಗಳು ಅನುದಾನ ನೀಡಿದ್ದಾರೆಯೋ ಅವರ ಹೆಸರನ್ನು ಹೇಳುತ್ತೇನೆ. ನಾನೇ ಮಾಡಿದ್ದೇನೆ ಎಂದು ಹೇಳುತ್ತಿಲ್ಲ. ಸದ್ಯ ತಟಸ್ಥನಾಗಿದ್ದೇನೆ. ವರಿಷ್ಠರು ಕರೆದರೆ ಸ್ಪಂದಿಸುತ್ತೇನೆ’ ಎಂದರು.

‘ಮೈಸೂರು ಮಹಾನಗರ ಪಾಲಿಕೆ ಮೇಯರ್‌ ಚುನಾವಣೆಯಲ್ಲಿ ಯಾರಿಗೂ ಶಿಫಾರಸು ಮಾಡುವುದಿಲ್ಲ. ಶಾಸಕ ಸಾ.ರಾ. ಮಹೇಶ್‌ ಎಲ್ಲವನ್ನೂ ನಿರ್ವಹಿಸುತ್ತೇನೆ ಎಂದಿದ್ದಾರೆ. ಅಂತೆಯೇ ಮುಂದುವರಿಯುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.