ಮೈಸೂರು: ‘ದಲಿತ, ಹಿಂದುಳಿದವರು ಬದಲಾದರೆ ಶೇ 25ರಷ್ಟು ಜನರು ಬೌದ್ಧ ಧರ್ಮ ಸ್ವೀಕರಿಸುತ್ತಾರೆ. ಅಂಬೇಡ್ಕರ್ ಆಶಯದಂತೆ ಭಾರತ ಬೌದ್ಧಮಯವಾಗುತ್ತದೆ’ ಎಂದು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ತಿಳಿಸಿದರು.
ಸಂಶೋಧಕರ ಸಂಘ ಹಾಗೂ ಬೌದ್ಧ ಸಂಘಟನೆಗಳು ವಿಜ್ಞಾನ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಬುದ್ಧಂ ನಮಾಮಿ’ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
‘ಸಂಸ್ಕಾರ ಇಲ್ಲದಿರುವುದರಿಂದ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ. ದಕ್ಷಿಣ ಕನ್ನಡದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಸಣ್ಣ ವಯಸ್ಸಿನ ಯುವಕರು ಕೊಂದಿದ್ದಾರೆ. ಹಾಗಿದ್ದರೆ ಆ ಯುವಕರಿಗೆ ಬಾಲ್ಯದಿಂದ ಪೋಷಕರು, ಶಾಲೆ ಹಾಗೂ ಅವರ ಧರ್ಮ ಸಂಸ್ಕಾರವನ್ನು ಹೇಳಿಕೊಟ್ಟಿಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ಬೌದ್ಧ ಧರ್ಮವು ನೀತಿ ಪಾಠ ಮಾಡುತ್ತಿದ್ದು, ಬಾಲ್ಯದಿಂದಲೇ ಮಕ್ಕಳು ಸರಿದಾರಿಯಲ್ಲಿ ನಡೆಯಲು ಸಹಕರಿಸುತ್ತದೆ’ ಎಂದು ಹೇಳಿದರು.
‘ಮನು ಸಿದ್ದಾಂತದಲ್ಲಿ ಶತಮಾನಗಳ ಕಾಲ ಶೂದ್ರರಿಗೆ ಶಿಕ್ಷಣವನ್ನು ನಿಷೇಧಿಸಲಾಗಿತ್ತು. ಚಾತುರ್ವಣದಲ್ಲಿ ಉಳಿದ ಮೂರು ವರ್ಣದವರಿಗೂ ಧರ್ಮವನ್ನು ಆಚರಿಸುವ ಅವಕಾಶವಿದೆ, ಆದರೆ ಶೂದ್ರರ ಮನೆಯಲ್ಲಿ ದೇವರ ಫೊಟೊ ಇರುತ್ತದೆ ಹೊರತು ನಿಜವಾದ ಭಕ್ತಿ ಎಲ್ಲಿದೆ ಎಂಬುದು ಅವರಿಗೆ ತಿಳಿದಿಲ್ಲ. ಉದ್ಯೋಗಕ್ಕಾಗಿ ಶಿಕ್ಷಣ ಪಡೆಯುತ್ತಾರೆ, ಅದನ್ನು ಮುಂದುವರೆಸುವುದಿಲ್ಲ. ಧರ್ಮ ಇಲ್ಲದಿರುವುದರಿಂದ ಈ ಸಮುದಾಯವು ಸಮಾಜದ ಮುಖ್ಯವಾಹಿನಿಗೆ ಬರುತ್ತಿಲ್ಲ. ಹೀಗಾಗಿ ಅಂಬೇಡ್ಕರ್ ಹೇಳಿದ ಬೌದ್ಧ ಧರ್ಮವನ್ನು ಅನುಸರಿಸುವುದು ಒಳಿತು’ ಎಂದು ಸಲಹೆ ನೀಡಿದರು.
‘ಮನೆಯಲ್ಲಿರುವ ಫೊಟೊಗಳನ್ನು ಹೊರಗೆಸೆದು, ಅಲ್ಲಿ ಬುದ್ಧನ ಪ್ರತಿಮೆ ಇಟ್ಟು ಪೂಜಿಸಿ. ಧಮ್ಮ ಪದಗಳನ್ನು ಓದಿ, ಅದು ನಮ್ಮ ಧರ್ಮ ಗ್ರಂಥ ಅಲ್ಲಿರುವ ನುಡಿಗಟ್ಟುಗಳು ಬುದ್ಧ ಹೇಳಿದ ನೀತಿ ಪಾಠಗಳನ್ನು ತಿಳಿಸುತ್ತವೆ. ಅವು ಪಾಲಿ ಭಾಷೆಯಲ್ಲಿದ್ದು, ನಿರಂತರ ಅಭ್ಯಾಸ ಮಾಡಬೇಕು. ನೈತಿಕತೆ ಹಾಗೂ ಉತ್ತಮ ಜೀವನ ನಡೆಸುವ ಬಗ್ಗೆ ಅಲ್ಲಿ ಮಾಹಿತಿ ದೊರೆಯುತ್ತದೆ’ ಎಂದರು.
‘ಹಿಂದು ದರ್ಮ ದೇವರ ಮೂಲಕ ಭಯ ಹುಟ್ಟಿಸುತ್ತದೆ, ಅದರೊಂದಿಗೆ ಕೆಟ್ಟದು ಮಾಡಿದರೂ ಕ್ಷಮಾಪಣೆ ಇದೆ ಎಂಬುದನ್ನು ತಿಳಿಸಿದೆ. ಮಕ್ಕಳು ಪಂಚಶೀಲ ಹೇಳುತ್ತಾ ಬೆಳೆದರೆ ಅವರು ಶೀಲವಂತರಾಗುತ್ತಾರೆ. ತಪ್ಪು ಮಾಡಿದರೆ ಪಾಪ ಪ್ರಜ್ಞೆ ಮೂಡಿಸುತ್ತದೆ. ಈಚೆಗೆ ಬುದ್ಧರ ಮೂರ್ತಿ ಹಿಂದೇ ದೊಡ್ಡ ಅಂಬೇಡ್ಕರ್ ಫೊಟೋ ಇಡುತ್ತಿದ್ದು, ಆ ರೀತಿ ಮಾಡದಿರಿ’ ಎಂದು ತಿಳಿಸಿದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ‘ಎರಡು ಸಾವಿರ ವರ್ಷದಿಂದ ಬುದ್ಧನನ್ನು ಮರೆಮಾಚುವ ಪ್ರಯತ್ನ ಯಶಸ್ವಿಯಾಗಿಲ್ಲ. ನಾವು ಬುದ್ಧನನ್ನು ಗ್ರಾಮೀಣ ಭಾಗಕ್ಕೂ ತಲುಪಿಸಿದ್ದೇವೆ. 159 ಹಳ್ಳಿಯಲ್ಲಿ ದಮ್ಮ ದೀಪ ಕಾರ್ಯಕ್ರಮ ಮಾಡಿದ್ದೇವೆ. ಮುಂದೆ ಮೈಸೂರಿನಲ್ಲಿ ಬುದ್ಧನ ಕುರಿತು ಚಳುವಳಿ ಹುಟ್ಟುಹಾಕುತ್ತೇವೆ’ ಎಂದರು.
ಸುಗತಪಾಲಭಂತೇಜಿ, ದಲಿತ ಮುಖಂಡಬೆಟ್ಟಯ್ಯಕೋಟೆ, ಸಂಶೋಧಕರ ಸಂಘದ ಅಧ್ಯಕ್ಷ ಶಿವಶಂಕರ್ ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.