ADVERTISEMENT

ಮಾತು ತಪ್ಪಲು ನಾನು ಮೋದಿಯಲ್ಲ, ಕೆಲಸ ಸಿಗುವವರೆಗೂ ಯುವನಿಧಿ ಭತ್ಯೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 18:24 IST
Last Updated 17 ಅಕ್ಟೋಬರ್ 2025, 18:24 IST
   

ಮೈಸೂರು: ‘ಉದ್ಯೋಗ ಸಿಗುವವರೆಗೂ ಯುವನಿಧಿ ಯೋಜನೆಯ ಅನುದಾನ ಫಲಾನುಭವಿಗೆ ನಿಲ್ಲುವುದಿಲ್ಲ. ಕೌಶಲಾಭಿವೃದ್ಧಿ ತರಬೇತಿಗೆ ಸೇರಿದರೆ ಭತ್ಯೆ ನಿಲ್ಲುವುದೆಂಬ ಬಿಜೆಪಿಗರ ಸುಳ್ಳುಗಳಿಗೆ ಕಿವಿಗೊಡಬಾರದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ರಾಜ್ಯ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಶುಕ್ರವಾರ ಆಯೋಜಿಸಿದ್ದ ಮೈಸೂರು ವಿಭಾಗೀಯ ಮಟ್ಟದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿ, ‘ಉದ್ಯೋಗ ಸಿಕ್ಕ ಬಳಿಕ ಯುವನಿಧಿ ನಿಲ್ಲಿಸಲಾಗುವುದು. ಎರಡು ವರ್ಷದವರೆಗೂ ಯೋಜನೆಯ ಪ್ರಯೋಜನ ಪಡೆಯಬಹುದು’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. 11 ವರ್ಷದಲ್ಲಿ 22 ಕೋಟಿ ನೌಕರಿ ಕೊಡಬೇಕಿತ್ತು. ಕೊಟ್ಟ ಮಾತು ತಪ್ಪಿ ನಡೆಯಲು ನಾನು ಮೋದಿಯಲ್ಲ. ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳಿಗೆ ದುಡ್ಡಿಲ್ಲವೆಂದು ಅಪಪ್ರಚಾರ ಮಾಡಿದ್ದವು. ಲೋಕಸಭಾ ಚುನಾವಣೆ ನಂತರ ಅನುದಾನ ನಿಲ್ಲಿಸುತ್ತಾರೆಂದರು. ನಾವು ಏನು ಹೇಳುತ್ತೇವೆಯೋ ಅದನ್ನು ಮಾಡೇ ತೀರುತ್ತೇವೆ’ ಎಂದು ಹೇಳಿದರು. 

ADVERTISEMENT

‘ನುಡಿದಂತೆ ನಡೆಯುವ ಸರ್ಕಾರ ನಮ್ಮದು. ಕಳೆದ ಎರಡೂವರೆ ವರ್ಷದಲ್ಲಿ 28 ಸಾವಿರಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿದ್ದು, 35 ಸಾವಿರ ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಿದ್ದೇವೆ’ ಎಂದು ಮಾಹಿತಿ ನೀಡಿದರು.

ಬಿಜೆಪಿ ಸರ್ಕಾರ ಕೊಡಲಿಲ್ಲ

‘ಹಿಂದಿನ ಬಿಜೆಪಿ ಸರ್ಕಾರವೂ ಯಾರಿಗೂ ಉದ್ಯೋಗ ನೀಡಲಿಲ್ಲ. ರಾಜ್ಯದಲ್ಲಿ 7 ಲಕ್ಷ ಸರ್ಕಾರಿ ಹುದ್ದೆಗಳಿವೆ. ಉಳಿದವು ಖಾಸಗಿ ಕ್ಷೇತ್ರದಲ್ಲಿವೆ. ಉದ್ಯೋಗ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ತಯಾರು ಮಾಡಲು ಸರ್ಕಾರವು ಕೌಶಲ ತರಬೇತಿ ಕಾರ್ಯಕ್ರಮಗಳನ್ನು ಶಿಕ್ಷಣದೊಂದಿಗೆ ಹಮ್ಮಿಕೊಂಡಿದೆ. ನಿರುದ್ಯೋಗಿಗಳು, ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು. 

‘ನಿರುದ್ಯೋಗ ಸಮಸ್ಯೆ ಹೋಗಲಾಡಿಸುವುದು ದೊಡ್ಡ ಸವಾಲಾಗಿದೆ. ಹೀಗಾಗಿ ವಿಭಾಗೀಯ ಹಾಗೂ ಜಿಲ್ಲಾ ಮಟ್ಟದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ. ಮೈಸೂರಿನ ಮೇಳದಲ್ಲಿ 43 ಸಾವಿರ ನಿರುದ್ಯೋಗಿಗಳು ನೌಕರಿಗೆ ಹೆಸರು ನೋಂದಾಯಿಸಿಕೊಂಡಿದ್ದು, ಎಲ್ಲರಿಗೂ ಉದ್ಯೋಗ ಸಿಗುವಂತೆ ಮಾಡಲಾಗುವುದು’ ಎಂದು ಭರವಸೆ ನೀಡಿದರು. 

‘ಕಳೆದ ಎರಡೂವರೆ ವರ್ಷದಲ್ಲಿ ಬೆಂಗಳೂರಿನಲ್ಲಿ ನಡೆದ ಉದ್ಯೋಗ ಮೇಳಗಳಲ್ಲಿ 58,892 ಅಭ್ಯರ್ಥಿಗಳು ಪಾಲ್ಗೊಂಡಿದ್ದು, ಅವರಲ್ಲಿ 11,507 ಮಂದಿ ಕೆಲಸ ಗಿಟ್ಟಿಸಿದ್ದಾರೆ. 22,869 ಅಭ್ಯರ್ಥಿಗಳು ಉದ್ಯೋಗ ಆಯ್ಕೆ ಪಟ್ಟಿಯಲ್ಲಿದ್ದಾರೆ. ಜಿಲ್ಲಾ ಮಟ್ಟದಲ್ಲಿ ನಡೆದ ಮೇಳಗಳಲ್ಲಿ 1,20,563 ಮಂದಿ ಅಭ್ಯರ್ಥಿಗಳು ಭಾಗವಹಿಸಿದ್ದು, 24,391 ಉದ್ಯೋಗಿಗಳಾಗಿದ್ದಾರೆ. 48,232 ಮಂದಿ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡಿದಿದ್ದು, ಆದ್ಯತೆ ಮೇಲೆ ಭರ್ತಿ ಮಾಡಿಕೊಳ್ಳಲು ಸೂಚಿಸಲಾಗಿದೆ’ ಎಂದರು.  

ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ರೇಷ್ಮೆ ಮತ್ತು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌ ಪಾಲ್ಗೊಂಡಿದ್ದರು.

ಉದ್ಯಮಗಳ ಬೇಡಿಕೆಗೆ ತಕ್ಕಂತೆ ಉದ್ಯೋಗಾಂಕ್ಷಿಗಳಿಗೆ ಕೌಶಲ ತರಬೇತಿ ನೀಡಿ ಉದ್ಯೋಗ ಸೃಷ್ಟಿಸುವಲ್ಲಿ ಸರ್ಕಾರ ನುಡಿದಂತೆ ನಡೆಯುತ್ತಿದೆ
ಸಿದ್ದರಾಮಯ್ಯ, ಮುಖ್ಯಮಂತ್ರಿ

43 ಸಾವಿರ ಆಕಾಂಕ್ಷಿಗಳು ನೋಂದಣಿ 

  ಉದ್ಯೋಗ ಮೇಳಕ್ಕಾಗಿ 43 ಸಾವಿರ ಉದ್ಯೋಗಾಂಕ್ಷಿಗಳು ನೋಂದಣಿ ಮಾಡಿಕೊಂಡಿದ್ದರು. 40ಸಾವಿರ ಮಂದಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. 235 ಕಂಪನಿಗಳು ಭಾಗಿಯಾಗಿದ್ದವು. ಬೆಳಿಗ್ಗೆಯಿಂದಲೇ ಆಕಾಂಕ್ಷಿಗಳು ಸಾಲುಗಟ್ಟಿ ನಿಂತಿದ್ದರು. ಪ್ರತಿ ಅಭ್ಯರ್ಥಿ 5 ಕಂಪನಿಗೆ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಹಲವರಿಗೆ ಸ್ಥಳದಲ್ಲೇ ಕೆಲಸ ಸಿಕ್ಕಿತು. ಉಳಿದವರಿಗೆ ಸಂದರ್ಶನದ ಸಂದೇಶ ಕಳುಹಿಸುವುದಾಗಿ ತಿಳಿಸಲಾಯಿತು.  ಮಹಾರಾಜ ಕಾಲೇಜು ಹಾಗೂ ಯುವರಾಜ ಕಾಲೇಜಿನ 80 ಕೊಠಡಿಗಳಲ್ಲಿ ಸಂದರ್ಶನ ನಡೆಯಿತು. ಟೆಕ್ನೊ ಟಾಸ್ಕ್‌ ಎಚ್‌ಡಿಎಫ್‌ಸಿ ಕನೆಕ್ಟ್‌ ವೈಟ್‌ಗೋಲ್ಡ್‌ ಸೇರಿ ವಿವಿಧ ಕಂಪನಿಗಳಲ್ಲಿ ಉದ್ಯೋಗ ಪಡೆದ ನಮ್ರತಾ ಪ್ರಶಾಂತ್‌ ಚಂದನ್ ಜಬೀರ್ ಪಾಷಾ ತ್ರಿಶಾಲ ಮೊಹಮ್ಮದ್‌ ರಿಯಾಜ್ ಸೇರಿದಂತೆ 10 ಮಂದಿಗೆ ಸಾಂಕೇತಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇಮಕಾತಿ ಆದೇಶ ಪತ್ರ ನೀಡಿದರು.   13289 ಮಂದಿ ಪಾಲ್ಗೊಂಡಿದ್ದರು. ಇವರಲ್ಲಿ 3303 ಮಂದಿ ಶಾರ್ಟ್‌ಲಿಸ್ಟ್‌ ಸಿದ್ಧ ಪಡಿಸಲಾಗಿತ್ತು. ಇದರಲ್ಲಿ 1346 ಮಂದಿ ಆಯ್ಕೆಯಾದರು ಎಂದು ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.