ADVERTISEMENT

ಮಾರುಕಟ್ಟೆಗಳಲ್ಲಿ ಹೆಚ್ಚಿನ ಜನಸಂದಣಿ, ಲಾಕ್‌ಡೌನ್ ಮಧ್ಯೆಯು ರಸ್ತೆಯಲ್ಲಿ ಜನ ಸಂಚಾರ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 3:19 IST
Last Updated 30 ಏಪ್ರಿಲ್ 2021, 3:19 IST
ಮೈಸೂರಿನ ಎಂ.ಜಿ.ರಸ್ತೆಯ ತರಕಾರಿ ಮಾರುಕಟ್ಟೆಯಲ್ಲಿ ಗುರುವಾರ ಬೆಳಿಗ್ಗೆ ಹೆಚ್ಚಿನ ಜನರು ಖರೀದಿ ಭರಾಟೆಯಲ್ಲಿ ತೊಡಗಿದ್ದರು
ಮೈಸೂರಿನ ಎಂ.ಜಿ.ರಸ್ತೆಯ ತರಕಾರಿ ಮಾರುಕಟ್ಟೆಯಲ್ಲಿ ಗುರುವಾರ ಬೆಳಿಗ್ಗೆ ಹೆಚ್ಚಿನ ಜನರು ಖರೀದಿ ಭರಾಟೆಯಲ್ಲಿ ತೊಡಗಿದ್ದರು   

ಮೈಸೂರು: ಜನತಾ ಕರ್ಫ್ಯೂವಿನ 2ನೇ ದಿನವಾದ ಗುರುವಾರ ವಾಹನ ಸಂಚಾರದಲ್ಲಿ ಹೆಚ್ಚಳ ಕಂಡು ಬಂದಿತ್ತು. ಬೆಳಿಗ್ಗೆಯಿಂದಲೇ ಎಲ್ಲ ಮಾರುಕಟ್ಟೆಗಳು ಜನರಿಂದ ಗಿಜಿಗುಡುತ್ತಿದ್ದವು. ಜನರು ಗುಂಪುಗುಂಪಾಗಿಯೇ ಖರೀದಿ ಭರಾಟೆಯಲ್ಲಿ ತೊಡಗಿದ್ದ ದೃಶ್ಯಗಳು ಕಂಡು ಬಂದವು.

ಇಲ್ಲಿನ ಎಂ.ಜಿ.ರಸ್ತೆ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಸಂದಣಿ ಇತ್ತು. ಬೆಳಿಗ್ಗೆ 10 ಗಂಟೆಯವರೆಗೂ ಗ್ರಾಹಕರು ಖರೀದಿ ಪ್ರಕ್ರಿಯೆಯಲ್ಲಿ ತೊಡಗಿದರು. ಬಹುತೇಕ ಮಂದಿ ಮಾಸ್ಕ್ ಹಾಕಿದ್ದರೂ, ಎಲ್ಲರೂ ಮೂಗಿನ ಕೆಳಗೆ ಹಾಕಿದ್ದು ಕಂಡು ಬಂತು. ಇದೇ ಬಗೆಯ ದೃಶ್ಯಗಳು ನಗರದ ದೇವರಾಜ ಮಾರುಕಟ್ಟೆ ಸೇರಿದಂತೆ ಇನ್ನುಳಿದ ಕಡೆ ಇತ್ತು. ಜನರು ಪರಸ್ಪರ ಅಂತರ ಮರೆತು ಖರೀದಿಯಲ್ಲಿ ತೊಡಗಿದ್ದರು.

ಬೆಳಿಗ್ಗೆ 10ರ ನಂತರ ಒಂದೊಂದಾಗಿ ಅಂಗಡಿಗಳು ಬಾಗಿಲು ಮುಚ್ಚಿದರೂ, ಜನಸಂಚಾರ ನಿಯಂತ್ರಣಕ್ಕೆ ಬರಲಿಲ್ಲ. ಮಧ್ಯಾಹ್ನ 12ರವರೆಗೂ ವಾಹನಗಳಲ್ಲಿ ಜನರು ಸಂಚರಿಸಿದರು. ಪೊಲೀಸರಿಗೆ ತರಕಾರಿ, ದಿನಸಿ ಖರೀದಿಸಲು ಬಂದಿದ್ದಾಗಿ ಸಬೂಬು ಹೇಳಿದರು.

ADVERTISEMENT

ಬುಧವಾರದಂತೆಯೇ ಪ್ರಮುಖ ರಸ್ತೆಗಳ ಒಂದು ಭಾಗವನ್ನು ಬ್ಯಾರಿಕೇಡ್‌ಗಳನ್ನು ಹಾಕಿ ಪೊಲೀಸರು ಮುಚ್ಚಿದರು. ಒಂದೇ ಭಾಗದಲ್ಲಿ ಸಂಚರಿಸುವಂತೆ ಮಾಡಿದರು. ಮಧ್ಯಾಹ್ನದ ವೇಳೆ ಜನ ಸಂಚಾರ ವಿರಳವಾಯಿತು.

ಹೋಟೆಲ್‌ಗಳು ಪಾರ್ಸೆಲ್ ಸೇವೆಯನ್ನು ಮುಂದುವರಿಸಿದವು. ಫುಡ್‌ ಡಿಲಿವರಿ ಬಾಯ್‌ಗಳ ಸಂಚಾರವೂ ಹೆಚ್ಚಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.