ADVERTISEMENT

ಅಪರಾಧ ಹೆಚ್ಚಳ: ಪೊಲೀಸ್‌ ವೈಫಲ್ಯ

‘ಕೆ.ಆರ್‌.ವಿಧಾನಸಭಾ ಕ್ಷೇತ್ರದಲ್ಲಿ ಅಪರಾಧ ಮುಕ್ತಗೊಳಿಸುವಿಕೆ; ನಗೆಪಾಟಲಿನ ಹೇಳಿಕೆ’

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 10:16 IST
Last Updated 12 ಅಕ್ಟೋಬರ್ 2021, 10:16 IST
ಎಂ.ಕೆ.ಸೋಮಶೇಖರ್‌
ಎಂ.ಕೆ.ಸೋಮಶೇಖರ್‌   

ಮೈಸೂರು: ‘ಕೆ.ಆರ್‌.ವಿಧಾನಸಭಾ ಕ್ಷೇತ್ರದಲ್ಲಿ ಅಪರಾಧ ಚಟುವಟಿಕೆಗಳನ್ನು ಮುಕ್ತಗೊಳಿಸುವುದಾಗಿ ಶಾಸಕ ಎಸ್‌.ಎ.ರಾಮದಾಸ್‌ ಹೇಳಿರುವುದು ನಗೆಪಾಟಲಿಗೀಡಾಗಿದೆ’ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌ ಮಂಗಳವಾರ ಇಲ್ಲಿ ವಾಗ್ದಾಳಿ ನಡೆಸಿದರು.

‘ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 9 ಕೊಲೆ, 18 ಸರಗಳ್ಳತನ ಪ್ರಕರಣ ದಾಖಲಾಗಿವೆ. ದರೋಡೆ, ಅತ್ಯಾಚಾರ, ದೌರ್ಜನ್ಯ ಹೆಚ್ಚಿವೆ’ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಲೆ ತೋಟಗಳು ಗಾಂಜಾ ಅಡ್ಡೆಗಳಾಗಿವೆ. ಎಲ್ಲವೂ ಗೊತ್ತಿದ್ದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಪೊಲೀಸ್‌ ವೈಫಲ್ಯದಿಂದಲೇ ಅಪರಾಧ ಚಟುವಟಿಕೆ ಹೆಚ್ಚಿವೆ’ ಎಂದು ಸೋಮಶೇಖರ್‌ ಕಿಡಿಕಾರಿದರು.

ADVERTISEMENT

ರಾಮದಾಸ್‌ ಉತ್ಸವ: ‘ಕ್ಷೇತ್ರದಲ್ಲಿ ನಡೆದಿದ್ದು ಮೋದಿ ಉತ್ಸವವಲ್ಲ. ರಾಮದಾಸ್‌ ಉತ್ಸವವಷ್ಟೇ. ಸುಳ್ಳು ಹೇಳೋದೇ ಬಿಜೆಪಿಗರ ಕಾಯಕವಾಗಿದೆ. ಯಾವೊಂದು ಕೆಲಸ ಮಾಡದಿದ್ದರೂ ಪ್ರಚಾರ ಪಡೆಯುವುದು ಹೇಗೆಂಬುದು ಕರಗತವಾಗಿದೆ. ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿ ಹೊರತುಪಡಿಸಿದರೆ; ಉಳಿದ ಯಾವ ಅವಧಿಯಲ್ಲಿ ಯಾರೊಬ್ಬರಿಗಾದರೂ ಮನೆ ಕೊಟ್ಟಿರುವುದನ್ನು ಶಾಸಕರು ಸಾಬೀತುಪಡಿಸಿದರೆ, ನಾನು ರಾಜಕೀಯದಿಂದಲೇ ನಿವೃತ್ತನಾಗುವೆ’ ಎಂದು ಮಾಜಿ ಶಾಸಕರು ರಾಮದಾಸ್‌ಗೆ ಸವಾಲು ಹಾಕಿದರು.

‘ಯಡಿಯೂರಪ್ಪ ಜೈಲಿಗೆ ಹೋದಾಗ ಪಟಾಕಿ ಹೊಡೆದು ಸಂಭ್ರಮಿಸಿದವರು, ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಪಿತೂರಿ ನಡೆಸಿದವರೇ; ವೀರಶೈವ ಲಿಂಗಾಯತರ ವೋಟಿನಾಸೆಗಾಗಿ ಬಿಎಸ್‌ವೈ ಕರೆಸಿ ಕಾರ್ಯಕ್ರಮ ನಡೆಸಿದರು’ ಎಂದು ಸೋಮಶೇಖರ್‌ ಶಾಸಕರ ಕಾಲೆಳೆದರು.

ಪಾಲಿಕೆ ಸದಸ್ಯ ಗೋಪಿ, ಮಾಜಿ ಸದಸ್ಯ ಸುನೀಲ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.