
ಮೈಸೂರಿನ ಕೆಎಸ್‌ಒಯುನಲ್ಲಿ ಶುಕ್ರವಾರ ಆರಂಭವಾದ ಕಿಸಾನ್ ಸ್ವರಾಜ್ ಸಮ್ಮೇಳನವನ್ನು ರೈತ ಸಂಘಟಕರಾದ ಬೀಬಿಜಾನ್, ವಿಶಾಲಾಕ್ಷನ್, ರಾಘವ ಐಕಾಂತಿಕ, ಜಿ.ವಿ.ರಾಮಾಂಜನೇಯಲು, ಕಪಿಲ್ ಶಾ, ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಉದ್ಘಾಟಿಸಿದರು. ಸಂತೋಷ್ ನಾಯಕ್, ಪ್ರೊ.ರಾಮನಾಥಂ ನಾಯ್ಡು, ಪ್ರೊ.ಎಸ್.ಕೆ.ನವೀನ್ ಕುಮಾರ್, ನಿರಂಜನ್ ಪಾಲ್ಗೊಂಡಿದ್ದರು
ಮೈಸೂರು: ‘ಜಾಗತಿಕ ರಾಜಕೀಯ ಶಕ್ತಿಗಳಿಗೆ ಕೇಂದ್ರ ಸರ್ಕಾರವು ಶರಣಾಗತವಾಗಿದೆ. ಭಾರತೀಯ ರೈತರನ್ನು ಕಡೆಗಣಿಸಿ ಅಂತರರಾಷ್ಟ್ರೀಯ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಂಡಿದೆ’ ಎಂದು ಕೇರಳದ ಜೈವ ಕರ್ಷಕ ಸಮಿತಿ ಅಧ್ಯಕ್ಷ ವಿಶಾಲಾಕ್ಷನ್ ಕಳವಳ ವ್ಯಕ್ತಪಡಿಸಿದರು.
ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ‘ಆಶಾ (ಅಲಯನ್ಸ್ ಫಾರ್ ಸಸ್ಟೈನಬಲ್ ಆ್ಯಂಡ್ ಹೋಲಿಸ್ಟಿಕ್ ಅಗ್ರಿಕಲ್ಚರ್) ಕಿಸಾನ್ ಸ್ವರಾಜ್’ ಸಂಸ್ಥೆಯು ಆಯೋಜಿಸಿರುವ 3 ದಿನಗಳ ರಾಷ್ಟ್ರಮಟ್ಟದ ‘ಕಿಸಾನ್ ಸ್ವರಾಜ್ ಸಮ್ಮೇಳನ’ವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
‘ಸರ್ಕಾರವು ಪಾರದರ್ಶಕವಾಗಿ ನಡೆದುಕೊಳ್ಳುತ್ತಿಲ್ಲ. ಕುಲಾಂತರಿ ಬೀಜಗಳಿಂದ ಬೆಳೆ, ಬೀಜ ಮಸೂದೆ, ಅಮೆರಿಕ ವ್ಯಾಪಾರ ಒಪ್ಪಂದ ಸೇರಿದಂತೆ ಎಲ್ಲ ನಿರ್ಧಾರಗಳಲ್ಲಿಯೂ ರೈತ ಸಂಘಟನೆಗಳನ್ನು ಒಳಗೊಳ್ಳದೇ ಏಕಮುಖ ನಿರ್ಧಾರ ತೆಗೆದುಕೊಂಡಿದೆ’ ಎಂದು ದೂರಿದರು.
‘ಮಾಲಿನ್ಯ ರಹಿತ ನೈಸರ್ಗಿಕ ಸಾವಯವ ಕೃಷಿಯ ಬಗ್ಗೆ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ದೊಡ್ಡದಾಗಿ ಮಾತನಾಡುವ ಸರ್ಕಾರಗಳು ಸಂಸತ್ತು, ವಿಧಾನ ಮಂಡಲಗಳಲ್ಲಿ ರೈತ ಪರವಾಗಿ ನೀತಿ ನಿಯಮಗಳನ್ನು ರೂಪಿಸುತ್ತಿಲ್ಲ. ಚರ್ಚೆಗಳು ನಡೆಯುತ್ತಿಲ್ಲ. ಬಂಡವಾಳಶಾಹಿಗಳ ಪರವಾಗಿ ನಡೆದುಕೊಳ್ಳುತ್ತಿವೆ’ ಎಂದರು.
‘ಕೆರೆ, ನದಿ, ಕರಾವಳಿ ಪ್ರದೇಶ, ಪಶ್ಚಿಮಘಟ್ಟ, ಪೂರ್ವಘಟ್ಟಗಳು, ಹಿಮಾಲಯ, ಅರಾವಳಿ ಪರ್ವತ ಶ್ರೇಣಿಗಳ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಕ್ಷಣೆಗೆ ಮುಂದಾಗದೇ ಅಭಿವೃದ್ಧಿ ಹೆಸರಿನಲ್ಲಿ ನಿಸರ್ಗವನ್ನು ನಾಶಮಾಡುವುದೇ ಸರ್ಕಾರಗಳ ಉದ್ದೇಶವಾಗಿದೆ’ ಎಂದು ಹೇಳಿದರು.
ಬೆಂಬಲ ಬೆಲೆ ಘೋಷಿಸಿ: ‘ರೈತರ ಕಡೆ ಒಲವನ್ನು ತೋರಿಸದಿದ್ದರೆ ಆಹಾರಕ್ಕೆ ಪರದಾಡುವಂತಾಗುತ್ತದೆ. ಬಿತ್ತನೆ, ಕಟಾವು ಸೇರಿದಂತೆ ಎಲ್ಲ ಕಾರ್ಯಗಳಿಗೆ ಸಿರಿಧಾನ್ಯ ಬೆಳೆಗಾರರಿಗೆ ಹೆಚ್ಚು ನಷ್ಟವಾಗುತ್ತಿದ್ದು, ಇತರ ಬೆಳೆಗಳಂತೆಯೇ ಬೆಂಬಲ ಬೆಲೆ ಘೋಷಿಸಬೇಕು. ಮಹಿಳಾ ಕೃಷಿಕರಿಗೂ ಅಗತ್ಯ ಪ್ರೋತ್ಸಾಹ ಕೊಡಬೇಕು’ ಎಂದು ರೈತ ಮಹಿಳೆ ಬೀಬಿಜಾನ್ ಆಗ್ರಹಿಸಿದರು.
‘ಆಶಾ’ ಸಂಸ್ಥೆಯ ಕಪಿಲ್ ಷಾ, ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಹೈದರಾಬಾದ್‌ನ ಸುಸ್ಥಿರ ಕೃಷಿ ಕೇಂದ್ರದ ಜಿ.ವಿ.ರಾಮಾಂಜನೇಯಲು, ನೈಸರ್ಗಿಕ ಕೃಷಿಕರಾದ ರಾಘವ ಐಕಾಂತಿಕ, ಕುಲಸಚಿವರಾದ ಸಿ.ಎಸ್.ಆನಂದ್ ಕುಮಾರ್, ಪ್ರೊ. ಎಸ್.ಕೆ.ನವೀನ್‌ಕುಮಾರ್, ಡೀನ್ ರಾಮನಾಥಂನಾಯ್ಡು, ನಿರಂಜನ್, ಚಂದ್ರೇಗೌಡ, ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ರಾಮಚಂದ್ರಪ್ಪ, ಕವಿತಾ ಶ್ರೀನಿವಾಸ್, ಪ್ರಸಾರಾಂಗ ನಿರ್ದೇಶಕ ಆರ್. ಸಂತೋಷ್ ನಾಯಕ್ ಪಾಲ್ಗೊಂಡಿದ್ದರು.
11 ರಾಜ್ಯಗಳ ನೂರಾರು ಸಾವಯವ ಕೃಷಿಕರು ಭಾಗವಹಿಸಿರುವ ಸಮ್ಮೇಳನದಲ್ಲಿ ಬೀಜ ಉತ್ಸವ, ಸಾಕ್ಷ್ಯಚಿತ್ರ ಪ್ರದರ್ಶನ, ಕೃಷಿಗೋಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.