ಮೈಸೂರು: ‘ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿ ಪರಿಚಯಿಸಬೇಕು ಎಂಬ ಸುತ್ತೂರು ಸ್ವಾಮೀಜಿ ಆಶಯದಂತೆ ಜೆಎಸ್ಎಸ್ ಮಹಾವಿದ್ಯಾಪೀಠ ಅಧೀನದ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿ ಪಠ್ಯ ಅಳವಡಿಸಲಾಗಿದೆ’ ಎಂದು ಸಂಸ್ಥೆಯ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ.ನಿರಂಜನಮೂರ್ತಿ ಹೇಳಿದರು.
ಸರಸ್ವತಿಪುರಂ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಸೋಮವಾರ ಸಾಂಸ್ಕೃತಿಕ, ಸಾಹಿತ್ಯಕ ಹಾಗೂ ಕ್ರೀಡಾ ವೇದಿಕೆಗಳ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಪ್ರಸ್ತುತ ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಹೀಗಾಗಿ ನಮ್ಮ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು ಎಂಬ ಉದ್ದೇಶದಿಂದ ಪಠ್ಯ ಅಳವಡಿಸಲಾಗಿದೆ’ ಎಂದರು.
‘ಮೊದಲ ಪಿಯು ಹಾಗೂ ಮೊದಲ ಪದವಿ ವಿದ್ಯಾರ್ಥಿಗಳಿಗೆ ಈ ಪಠ್ಯ ಕಡ್ಡಾಯ. ಪರೀಕ್ಷೆ ನಡೆಸಿ, ಸರ್ಟಿಫಿಕೇಟ್ ಕೂಡ ನೀಡಲಾಗುತ್ತದೆ. ಆದರೆ ಇದು ಅಂಕಪಟ್ಟಿಯಲ್ಲಿ ಇರುವುದಿಲ್ಲ’ ಎಂದರು.
ಯುವ ಉದ್ಯಮಿ ಪಲಾಶ್ ಬಿದ್ದಪ್ಪ ಮಾತನಾಡಿ, ‘ವಿದ್ಯೆ ಎಂದರೇ ಪುಸ್ತಕದ ವಿಷಯಗಳು ಸಾಕಾಗುವುದಿಲ್ಲ. ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು ಕೂಡ ಮುಖ್ಯವಾಗುತ್ತವೆ. ಶಿಸ್ತು ಕೂಡ ಇರಬೇಕಾಗುತ್ತದೆ. ಸಾಧಿಸಲು ಹೊರಟಾಗ ಹಲವಾರು ಅಡ್ಡಿ ಆತಂಕಗಳು ಎದುರಾಗುತ್ತವೆ. ಅದನ್ನೆಲ್ಲಾ ಎದುರಿಸಿಯೇ ಮುಂದೆ ಸಾಗಬೇಕು. ಆತ್ಮವಿಶ್ವಾಸವನ್ನು ಯಾವತ್ತೂ ಬಿಟ್ಟುಕೊಡಬೇಡಿ’ ಎಂದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸಾಂಸ್ಕೃತಿಕ, ಸಾಹಿತ್ಯಕ ಸಂಚಾಲಕಿ ಡಿ.ಎಂ.ಉಮಾದೇವಿ, ಕ್ರೀಡಾ ಸಂಚಾಲಕ ಶಿವಕುಮರಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.