ADVERTISEMENT

ಮೈಸೂರು: ಚೇತರಿಕೆ ಹಾದಿಯಲ್ಲಿ ಸೋಂಕಿತ ಪೊಲೀಸರು

ಶತಕ ದಾಟಿದ ಸೋಂಕಿತ ಪೊಲೀಸರ ಸಂಖ್ಯೆ, ಯುವ ಪೊಲೀಸರದ್ದೇ ಸಿಂಹಪಾಲು

ಕೆ.ಎಸ್.ಗಿರೀಶ್
Published 25 ಜುಲೈ 2020, 7:42 IST
Last Updated 25 ಜುಲೈ 2020, 7:42 IST

ಮೈಸೂರು: ನಗರ ಪೊಲೀಸರಲ್ಲಿ 103 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಇವರಲ್ಲಿ 64 ಮಂದಿ ಗುಣಮುಖರಾಗಿದ್ದಾರೆ. ಇನ್ನು 39 ಮಂದಿಯಷ್ಟೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಂಕಿತರ ಪೈಕಿ 30 ವರ್ಷದ ಒಳಗಿನವರ ಸಂಖ್ಯೆ 41. ಹೊರಗಿನ ಕೆಲಸಗಳಿಗೆ ಯುವ ಪೊಲೀಸರನ್ನೇ ಹೆಚ್ಚು ನಿಯೋಜಿಸಿದ್ದರಿಂದ 40 ದಾಟಿದ ಪೊಲೀಸರಿಗೆ ಸೋಂಕು ತಗುಲುವ ಪ್ರಮಾಣ ಕಡಿಮೆಯಾಗಿದೆ.

ಇವರಲ್ಲಿ 50 ವರ್ಷ ದಾಟಿದ 30 ಮಂದಿಯಲ್ಲಿ 18 ಮಂದಿ ಈಗಾಗಲೇ ಗುಣಮುಖರಾಗಿದ್ದು, 12 ಮಂದಿ ಮಾತ್ರವೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 59 ವರ್ಷದ ಇಬ್ಬರು ಇದ್ದಾರೆ.

ADVERTISEMENT

40ರಿಂದ 50ರ ವಯೋಮಾನದವರ ಸಂಖ್ಯೆ 18. ಇವರಲ್ಲಿ 9 ಮಂದಿ ಗುಣಮುಖರಾಗಿದ್ದಾರೆ. 30ರಿಂದ 40ರ ವಯೋಮಾನದವರ ಸಂಖ್ಯೆ 14. 5 ಮಂದಿ ಗುಣಮುಖರಾಗಿದ್ದಾರೆ.

ಕ್ವಾರಂಟೈನ್‌ನಲ್ಲಿ 144 ಸಿಬ್ಬಂದಿ: ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ 144 ಸಿಬ್ಬಂದಿ ಇನ್ನೂ ಕ್ವಾರಂಟೈನ್‌ನಲ್ಲೇ ಇದ್ದಾರೆ. 126 ಮಂದಿ ಕ್ವಾರಂಟೈನ್ ಅವಧಿಯನ್ನು ಮುಗಿಸಿದ್ದಾರೆ.

ಸೋಂಕಿತರ ಪೈಕಿ ಕರ್ನಾಟಕ ರಾಜ್ಯ ಮೀಸಲು ಪಡೆ (ಕೆಎಸ್‌ಆರ್‌ಪಿ) ಸಿಬ್ಬಂದಿಯದ್ದೇ ಹೆಚ್ಚಿನ ಪಾಲಿದೆ. ಒಟ್ಟು 55 ಮಂದಿ ಕೆಎಸ್‌ಆರ್‌ಪಿ ಸಿಬ್ಬಂದಿಯಲ್ಲಿ ‘ಕೋವಿಡ್–19’ ದೃಢಪಟ್ಟಿತ್ತು. ಇವರಲ್ಲಿ 54 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ.‌

ನಗರ ಸಿವಿಲ್ ಪೊಲೀಸರ ಪೈಕಿ 34 ಮಂದಿ ಕೊರೊನಾ ಸೋಂಕಿತರಾಗಿದ್ದಾರೆ. ಇನ್ನೂ 30 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ, ಕರ್ನಾಟಕ ಪೊಲೀಸ್ ಅಕಾಡೆಮಿ ಹಾಗೂ ರೈಲ್ವೆ ಪೊಲೀಸರಲ್ಲಿ ತಲಾ 5 ಮಂದಿ, ಮತ್ತಿತರೇ ವಿಭಾಗದಲ್ಲಿ ನಾಲ್ವರು ಸೋಂಕಿತರಾಗಿದ್ದಾರೆ.

ಬೆಂಗಳೂರಿಗೆ ಹೋಗಿ ಬಂದವರ ಮೂಲಕ ಮೊದಲು ಪೊಲೀಸರಲ್ಲಿ ಸೋಂಕು ಪತ್ತೆಯಾಯಿತು. ಕ್ರಮೇಣ ಸ್ಥಳೀಯವಾಗಿಯೂ ಕಾಣಿಸಿಕೊಳ್ಳಲಾರಂಭಿಸಿತು. ಹೆಚ್ಚಿನ ಸೋಂಕಿತರು ಪತ್ತೆಯಾದ ಮಂಡಿ ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.