ADVERTISEMENT

ನೌಕರರನ್ನು ಮನೆಗೆ ಕಳುಹಿಸಲು ಬಸ್‌ ವ್ಯವಸ್ಥೆ ಮಾಡಿದ ಇನ್ಫೋಸಿಸ್

ಕೊರೊನಾ ವೈರಸ್ ಭೀತಿ; ಮೈಸೂರು ಕ್ಯಾಂಪಸ್‌ನಲ್ಲಿ ಮುನ್ನೆಚ್ಚರಿಕೆ ಕ್ರಮ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 15:30 IST
Last Updated 18 ಮಾರ್ಚ್ 2020, 15:30 IST
ಕೊರೊನಾವೈರಸ್
ಕೊರೊನಾವೈರಸ್   

ಮೈಸೂರು: ಕೋವಿಡ್‌–19 ಸೋಂಕು ಶಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಉಲ್ಭಣಗೊಳ್ಳುತ್ತಿದ್ದಂತೆ, ಇನ್ಫೋಸಿಸ್‌ ಸಹ ತನ್ನ ನೌಕರರ ಆರೋಗ್ಯದತ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.

ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಇನ್ಫೋಸಿಸ್‌ನ ಬೃಹತ್ ಕ್ಯಾಂಪಸ್‌ ಇದ್ದು, ಇಲ್ಲಿ 10,000ಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದಾರೆ. ಇವರಿಗೆ ತಮ್ಮ ಮನೆಗಳಿಂದಲೇ ಕೆಲಸ ನಿರ್ವಹಿಸುವಂತೆ ಸೂಚಿಸಿದೆ ಎಂಬುದು ತಿಳಿದು ಬಂದಿದೆ.

ಮಾರ್ಚ್‌ 18ರ ಬುಧವಾರದಿಂದ ಏಪ್ರಿಲ್‌ 2ರವರೆಗೂ ಮೈಸೂರು ಕ್ಯಾಂಪಸ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ಹಂತ ಹಂತವಾಗಿ ಅವರ ಊರುಗಳಿಗೆ ಕಳಿಸಿಕೊಡಲಿದೆ ಎನ್ನಲಾಗಿದೆ. ಈ ಬಗ್ಗೆ ಖಚಿತತೆಗಾಗಿ ಸಂಸ್ಥೆಯ ಅಧಿಕಾರಿ ವರ್ಗವನ್ನು ಸಂಪರ್ಕಿಸುವ ಯತ್ನ ನಡೆಸಿದರೂ ಲಭ್ಯವಾಗಲಿಲ್ಲ.

ADVERTISEMENT

ಮೊದಲ ದಿನವೇ 20 ಬಸ್‌: ‘ಮನುಷ್ಯ ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸಿರುವ ಕೊರೊನಾ ವೈರಸ್‌ ಸೋಂಕು ಹರಡುವಿಕೆ ತಡೆಗಟ್ಟಲು ಇನ್ಫೋಸಿಸ್ ಕ್ರಮ ಜರುಗಿಸಿದೆ. ಇದಕ್ಕೆ ಕೆಎಸ್‌ಆರ್‌ಟಿಸಿ ಸಾಥ್‌ ನೀಡುತ್ತಿದೆ’ ಎಂದು ಮೈಸೂರು ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಆರ್‌.ಅಶೋಕ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಎಸ್‌ಆರ್‌ಟಿಸಿಯ ವೋಲ್ವೊ, ಸ್ಲೀಪರ್ ಕೋಚ್‌, ರಾಜಹಂಸ ಮಾದರಿಯ 20ಕ್ಕೂ ಹೆಚ್ಚು ಬಸ್‌ಗಳು ಬುಧವಾರ ಇನ್ಫೋಸಿಸ್‌ ಆವರಣದಿಂದಲೇ ಟೆಕ್ಕಿಗಳನ್ನು ಹೊತ್ತು ಅವರವರ ಊರಿನ ಕಡೆ ಸಂಚಾರ ಆರಂಭಿಸಿದವು’ ಎಂದು ಹೇಳಿದರು.

‘ಚೆನ್ನೈ, ಹೈದರಾಬಾದ್‌, ಮಧುರೈ, ಸಿಕಂದರಾಬಾದ್‌, ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧೆಡೆ ಮೊದಲ ದಿನದ ಬಸ್‌ಗಳು ತೆರಳಿವೆ. ಈ ಪ್ರಕ್ರಿಯೆ ಏಪ್ರಿಲ್‌ 2ರವರೆಗೂ ನಿರಂತರವಾಗಿ ನಡೆಯಲಿದೆ. ಉದ್ಯೋಗಿಗಳು ಯಾವ ಊರಿಗೆ ಟಿಕೆಟ್‌ ಬುಕ್ಕಿಂಗ್‌ ಮಾಡುತ್ತಾರೆ, ಅದರಂತೆ ಬಸ್‌ಗಳು ಸಂಚರಿಸಲಿವೆ’ ಎಂದು ಅಶೋಕ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.