ADVERTISEMENT

ತೋಟಗಾರಿಕೆಲ್ಲಿ ಯಶಸ್ಸು ಕಂಡ ಬ್ಯಾಂಕ್‌ ನಿವೃತ್ತ ಉದ್ಯೋಗಿ ಬಾಲಗಂಗಾಧರ್‌ ಯಶೋಗಾಥೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 5:33 IST
Last Updated 23 ಡಿಸೆಂಬರ್ 2025, 5:33 IST
ಹುಣಸೂರು ತಾಲ್ಲೂಕಿನ ಕಿರಿಜಾಜಿ ಗ್ರಾಮದ ಪ್ರಗತಿಪರ ರೈತ ಬಾಲಗಂಗಾಧರ್‌ ಅವರು ಅಡಿಕೆ ಕಾಯಿ ವೀಕ್ಷಿಸಿದರು
ಹುಣಸೂರು ತಾಲ್ಲೂಕಿನ ಕಿರಿಜಾಜಿ ಗ್ರಾಮದ ಪ್ರಗತಿಪರ ರೈತ ಬಾಲಗಂಗಾಧರ್‌ ಅವರು ಅಡಿಕೆ ಕಾಯಿ ವೀಕ್ಷಿಸಿದರು   

ಹುಣಸೂರು: ಏಳು ಎಕರೆ ಜಾಗದಲ್ಲಿ ಅಡಿಕೆ, ತೆಂಗು, ನಿಂಬೆ, ಏಲಕ್ಕಿ, ಕಾಳುಮೆಣಸು ಹಾಗೂ ವೀಳ್ಯೆದೆಲೆ ಸೇರಿದಂತೆ ವಿವಿಧ ಬೆಳೆಗಳು ಸಮೃದ್ಧವಾಗಿ ಕಾಣುತ್ತಿವೆ. 

ತಾಲ್ಲೂಕಿನ ಕಿರಿಜಾಜಿ ಗ್ರಾಮದಲ್ಲಿ ಲಕ್ಷ್ಮಣತೀರ್ಥ ನದಿ ಸಮೀಪದ ಜಮೀನಿನಲ್ಲಿ ಸಮಗ್ರ ಬೇಸಾಯದ ಮೂಲಕ ಯಶಸ್ಸು ಕಂಡ ರೈತ ಬಾಲಗಂಗಾಧರ್‌ ಅವರ ತೋಟದ ನೋಟವಿದು.

ಕೂಲಿ ಕಾರ್ಮಿಕರನ್ನು ಅವಲಂಬಿಸದೇ ಯಂತ್ರಗಳ ನೆರವಿನಿಂದ ತೋಟದ ಬೇಸಾಯ ಮಾಡುತ್ತಿದ್ದಾರೆ. 6 ವರ್ಷಗಳ ಹಿಂದೆ ಬ್ಯಾಂಕ್‌ ಉದ್ಯೋಗದಿಂದ ನಿವೃತ್ತಿ ಹೊಂದಿದ ಬಾಲಗಂಗಾಧರ್‌, ನಿತ್ಯ 6 ಗಂಟೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡರು. ರಾಸಾಯನಿಕಮುಕ್ತ ಬೇಸಾಯಕ್ಕೆ ಒತ್ತು ನೀಡಿದರು.

ADVERTISEMENT

‘ಏಳು ಎಕರೆಯಲ್ಲಿ 3 ಸಾವಿರ ಅಡಿಕೆ ಬೆಳೆಸಿದ್ದು, ಪ್ರಸಕ್ತ ಸಾಲಿನಲ್ಲಿ ಮೊದಲ ಫಸಲು ಕಟಾವಿಗೆ ಬಂದಿದೆ. 15 ಟನ್‌ ಸಿಗುವ ನಿರೀಕ್ಷೆಯಿದ್ದು, ₹ 10 ಲಕ್ಷ ಆದಾಯ ಬರಬಹುದು. ಅಲ್ಲದೇ ಅಡಿಕೆ ಮತ್ತು ತೆಂಗಿನ ನರ್ಸರಿಯಿಂದ ವಾರ್ಷಿಕ ₹ 5 ಲಕ್ಷ ವಹಿವಾಟು ಮಾಡುತ್ತಿದ್ದೇನೆ’ ಎಂದು ಬಾಲಗಂಗಾಧರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಕಳೆ ನಿಯಂತ್ರಣ, ಮರದಿಂದ ಬಿದ್ದ ತೆಂಗಿನ ಗರಿಯನ್ನು ಕತ್ತರಿಸಲು ಯಂತ್ರಗಳನ್ನು ಬಳಸುತ್ತಾರೆ. ತೋಟದ ತ್ಯಾಜ್ಯವನ್ನು 12 ಕಡೆ ನಿರ್ಮಿಸಿರುವ ಎರೆಹುಳು ಗೊಬ್ಬರ ಘಟಕಗಳಿಗೆ ಹಾಕುತ್ತಾರೆ. ಇದರಿಂದ ವಾರ್ಷಿಕ 20 ಟನ್‌ ಎರೆಹುಳು ಗೊಬ್ಬರ ಉತ್ಪಾದಿಸಿ ಬೇಸಾಯಕ್ಕೆ ಬಳಸುತ್ತಾರೆ.

ರಾಸಾಯನಿಕ ಗೊಬ್ಬರದ ಬದಲಾಗಿ ಜೀವಾಮೃತ ಹಾಕುತ್ತಾರೆ. 50 ಲೀಟರ್‌ ಉತ್ಪತ್ತಿಗೆ ₹ 450 ವೆಚ್ಚ ತಗಲುತ್ತದೆ. ರಾಸಾಯನಿಕ ಗೊಬ್ಬರಕ್ಕಾದರೆ ಹೆಚ್ಚು ಬಂಡವಾಳ ಬೇಕಾಗುತ್ತದೆ ಎನ್ನುವುದು ಅವರ ಅನುಭವದ ಮಾತು.

ಹುಣಸೂರು ತಾಲ್ಲೂಕಿನ ಕಿರಿಜಾಜಿ ಗ್ರಾಮ ಪ್ರಗತಿಪರ ರೈತ ಬಾಲಗಂಗಾಧರ್‌ ಜೀವಾಮೃತ ಸಿದ್ಧಪಡಿಸುತ್ತಿರುವುದು

ತೋಟದಲ್ಲಿ ತರಹೇವಾರಿ ಗಿಡಗಳನ್ನು ಬೆಳೆಸಿದ್ದಾರೆ, ಅದರಲ್ಲಿ ನಿಂಬೆ, ಏಲಕ್ಕಿ, ಕಾಳುಮೆಣಸು, ವಿಳ್ಯೆದೆಲೆ, ಗಜನಿಂಬೆ, ಹಲಸು, ನೇರಳೆ, ಜಾಯಿಕಾಯಿ, ಪಲಾವ್‌ ಎಲೆ, ಮರಾಠಿ ಮೊಗ್ಗು ಮುಖ್ಯವಾಗಿವೆ. ಇದಲ್ಲದೆ ನಿತ್ಯ ಜೀವನದ ಖರ್ಚಿಗೆ ನಾಟಿ ಕೋಳಿಗಳನ್ನು ಸಾಕಿದ್ದಾರೆ.

‘ಅಡಿಕೆ ತೋಟಕ್ಕೆ ಪ್ಲಾಸ್ಟಿಕ್‌ ಹೊದಿಕೆ ಬಳಸಿ ಬೇಲಿ ನಿರ್ಮಿಸಿ ಆ ಪ್ರದೇಶದಲ್ಲಿ ಕೋಳಿ ಬಿಟ್ಟು ಪ್ರಾಕೃತಿಕವಾಗಿ ಮೇಯಿಸುವ ಪ್ರಯತ್ನ ನಡೆಸಿದ್ದಾರೆ. ಕೋಳಿಗಳು ಆಹಾರಕ್ಕಾಗಿ ಭೂಮಿ ಕೆದಕುತ್ತವೆ ಮತ್ತು ಹಿಕ್ಕೆ ಹಾಕುವುದರಿಂದ ಮಣ್ಣು ಸಡಿಲಗೊಂಡು ಗೊಬ್ಬರವೂ ಸಿಕ್ಕಂತಾಗುತ್ತದೆ’ ಎನ್ನುತ್ತಾರೆ ಗಂಗಾಧರ್‌. ಬ್ಯಾಂಕ್‌ನಲ್ಲಿ ಕೆಲಸ ಮಾಡುವಾಗ ಒತ್ತಡವಿತ್ತು ಕೃಷಿಕನಾದ ನಂತರ ನೆಮ್ಮದಿಯ ಬದುಕು ಸಿಕ್ಕಿದೆ. ಆರ್ಥಿಕವಾಗಿಯೂ ಲಾಭವಾಗಿದೆ ಬಾಲಗಂಗಾಧರ್‌ ಪ್ರಗತಿಪರ ರೈತ

ಪ್ರಗತಿಪರ ರೈತ ಬಾಲಗಂಗಾಧರ್‌ ಸಾಕಿರುವ ನಾಟಿ ಕೋಳಿಗಳು 
ಬ್ಯಾಂಕ್‌ನಲ್ಲಿ ಕೆಲಸ ಮಾಡುವಾಗ ಒತ್ತಡವಿತ್ತು ಕೃಷಿಕನಾದ ನಂತರ ನೆಮ್ಮದಿಯ ಬದುಕು ಸಿಕ್ಕಿದೆ. ಆರ್ಥಿಕವಾಗಿಯೂ ಲಾಭವಾಗಿದೆ
ಬಾಲಗಂಗಾಧರ್‌ ಪ್ರಗತಿಪರ ರೈತ
- ಇಲಾಖೆಯಿಂದ ತುಂತುರು ಹನಿ ನೀರಾವರಿ ಯೋಜನೆ ಯಂತ್ರೋಪಕರಣಗಳಿಗೆ ಆರ್ಥಿಕ ಸಹಾಯ ನೀಡಿ ಪ್ರೋತ್ಸಾಹ ನೀಡಲಾಗಿದೆ
ನಾಗರಾಜ್‌ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.