ADVERTISEMENT

ಒಳಮೀಸಲಾತಿ ಸಮೀಕ್ಷೆ ಸರಿಯಾಗಿ ನಡೆಯುತ್ತಿದೆ, ಗೊಂದಲ ಬೇಡ: ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 12 ಮೇ 2025, 13:44 IST
Last Updated 12 ಮೇ 2025, 13:44 IST
<div class="paragraphs"><p>ಸಿದ್ದರಾಮಯ್ಯ (ಸಂಗ್ರಹ ಚಿತ್ರ)</p></div>

ಸಿದ್ದರಾಮಯ್ಯ (ಸಂಗ್ರಹ ಚಿತ್ರ)

   

ಎಚ್.ಡಿ. ಕೋಟೆ: ‘‍ಪರಿಶಿಷ್ಟರಲ್ಲಿ ಒಳ ಮೀಸಲಾತಿ ನೀಡುವ ಸಂಬಂಧ ಆರಂಭಿಸಿರುವ ಸಮೀಕ್ಷೆಯು ಚೆನ್ನಾಗಿ ನಡೆಯುತ್ತಿದೆ. ಈ ವಿಷಯದಲ್ಲಿ ಯಾರೂ ಇಲ್ಲಸಲ್ಲದ ಗೊಂದಲಗಳನ್ನು ಸೃಷ್ಟಿಸಬಾರದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಮುಖಂಡರು ಮತ್ತು ಸಮಾಜದವರಿಗೆ ತಿಳಿಸಿದರು.

ಇಲ್ಲಿನ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ₹148 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ADVERTISEMENT

‘ಪಕ್ಕಾ ಸಮೀಕ್ಷೆ ನಡೆಸಲಾಗುತ್ತಿದೆ. ಒಳಮೀಸಲಾತಿ ಬೇಕೋ, ಬೇಡವೋ? ಯಾವ್ಯಾವ ಜಾತಿಯವರು ಎಷ್ಟಿದ್ದಾರೆ ಎಂಬುದು ಗೊತ್ತಾಗಬೇಕೋ ಬೇಡವೋ? ಯಾವ ಜಾತಿ ಹೇಳುತ್ತೀರೋ ಅದನ್ನೇ ಬರೆದುಕೊಳ್ಳುತ್ತಾರೆ. ಮಾದಿಗ, ಕೊರಮ, ಕೊರಚ, ಎಡಗೈ, ಬಲಗೈ, ಭೋವಿ... ಏನು ಹೇಳುತ್ತೀರೋ ಅದನ್ನು ನಮೂದಿಸುತ್ತಾರೆ’ ಎಂದು ಸಮರ್ಥಿಸಿಕೊಂಡರು.

‘ಸಮೀಕ್ಷೆ ಸರಿಯಾಗಿ ನಡೆಯುತ್ತಿಲ್ಲ. ಇದರಿಂದ ನಮಗೆ ಅನ್ಯಾಯ ಆಗುತ್ತದೆ’ ಎಂದು ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ, ಕೆಪಿಸಿಸಿ ವಕ್ತಾರ ಜಿ.ವಿ. ಸೀತಾರಾಂ ಅವರು ವೇದಿಕೆಯಲ್ಲೇ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ, ಸಾರ್ವಜನಿಕವಾಗಿಯೇ ಪ್ರತಿಕ್ರಿಯೆ ನೀಡಿದರು. ‘ಈ ವಿಷಯದಲ್ಲಿ ಗೊಂದಲ ಉಂಟು ಮಾಡಬಾರದು. ಎಲ್ಲರೂ ಜಾತಿ, ಉಪಜಾತಿಗಳನ್ನು ಸ್ಪಷ್ಟವಾಗಿ ಬರೆಸಬೇಕು’ ಎಂದು ಬುದ್ಧಿವಾದ ಹೇಳಿದರು.

‘ಆದಿ ಕರ್ನಾಟಕ ಬದಲಿಗೆ ಬಲ ಎಂದು ಹೇಳಿಕೊಳ್ಳಬೇಕು. ಅದೇ ರೀತಿ ಎಡಗೈನವರು ಕೂಡ ಹೇಳಬೇಕು. ಇದನ್ನು ನಾನು ಹೇಳಿದರೆ ತಪ್ಪಾಗುತ್ತದೆ. ಆದರೆ, ನೀವು ಹೇಳಬೇಕು. ವೈಜ್ಞಾನಿಕವಾಗಿ ಒಳ ಮೀಸಲಾತಿ ನೀಡಲು ನ್ಯಾ.ಎಚ್.ಎನ್.ನಾಗಮೋಹನ್‌ದಾಸ್ ಆಯೋಗ ರಚಿಸಲಾಗಿದೆ. ನಿಖರ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಆಗುವುದು’ ಎಂದರು.

₹ 8ಸಾವಿರ ಕೋಟಿ ಇಟ್ಟಿರುವೆ

‘ಈ ವರ್ಷ ಶಾಸಕರಿಗೆ ತಲಾ ₹ 50 ಕೋಟಿ ಕೊಡುತ್ತೇನೆ. ಇದಕ್ಕಾಗಿಯೇ ಬಜೆಟ್‌ನಲ್ಲಿ ₹ 8ಸಾವಿರ ಕೋಟಿ ಇಟ್ಟುಕೊಂಡಿದ್ದೇನೆ. ಗ್ಯಾರಂಟಿಗೂ ಹಣ ಕೊಡುತ್ತಿದ್ದೇನೆ. ಅಭಿವೃದ್ಧಿ ಕೆಲಸವನ್ನೂ ಮಾಡುತ್ತಿದ್ದೇನೆ. ಈ ವರ್ಷ ಅಭಿವೃದ್ಧಿ ಕೆಲಸಗಳಿಗೆಂದೇ ₹ 1.34 ಲಕ್ಷ ಕೋಟಿ ಕೋಟಿ ಖರ್ಚು ಮಾಡುತ್ತಿದ್ದೇವೆ. ಬಿಜೆಪಿಯವರು ಹೇಳಿದಂತೆ ಪಾಪರ್ ಅಥವಾ ಆರ್ಥಿಕವಾಗಿ ದಿವಾಳಿಯಾದ ಸರ್ಕಾರದಿಂದ ಇಷ್ಟೆಲ್ಲ ಅಭಿವೃದ್ಧಿ ಮಾಡುವುದಕ್ಕೆ ಆಗುತ್ತದೆಯೇ?’ ಎಂದು ಕೇಳಿದರು.

ಜೆಎಲ್‌ಆರ್‌ (ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್‌)ನಿಂದ 2024–25ನೇ ಸಾಲಿನ ಲಾಭಾಂಶ ₹ 12.47 ಕೋಟಿಯ ಚೆಕ್‌ ಅನ್ನು ಅಧ್ಯಕ್ಷರೂ ಆಗಿರುವ ಎಚ್‌.ಡಿ. ಕೋಟೆ ಶಾಸಕ ಅನಿಲ್ ಚಿಕ್ಕಮಾದು ಮುಖ್ಯಮಂತ್ರಿಗೆ ಹಸ್ತಾಂತರಿಸಿದರು.

ಎಚ್‌.ಡಿ. ಕೋಟೆ ಪಟ್ಟಣದಲ್ಲಿ ₹ 50 ಲಕ್ಷ ವೆಚ್ಚದಲ್ಲಿ ಪ್ರತಿಷ್ಠಾಪಿಸಿರುವ ಕಂಚಿನ ಅಂಬೇಡ್ಕರ್‌ ಪ್ರತಿಮೆಯನ್ನು ಸಿದ್ದರಾಮಯ್ಯ ಅನಾವರಣಗೊಳಿಸಿದರು. ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್, ಸತೀಶ ಜಾರಕಿಹೊಳಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.