ADVERTISEMENT

ಸಾಲ ಮಾಡುವುದೇ ಅಭಿವೃದ್ಧಿಯಾ ?

ಸಂಸದರು, ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ವಕ್ತಾರೆ ಮಂಜುಳಾ ಮಾನಸ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 15:00 IST
Last Updated 6 ಸೆಪ್ಟೆಂಬರ್ 2020, 15:00 IST

ಮೈಸೂರು: ‘ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾದ ಬಳಿಕ, ಆರ್‌ಬಿಐನಿಂದ ಇದೂವರೆಗೂ ₹ 43 ಸಾವಿರ ಕೋಟಿ ಸಾಲವನ್ನು ಪಡೆದಿದ್ದಾರೆ. ಮುಂದಿನ ನಾಲ್ಕು ತಿಂಗಳಲ್ಲಿ ₹ 50 ಸಾವಿರ ಕೋಟಿ ಸಾಲ ಪಡೆಯಲು ಮುಂದಾಗಿದ್ದಾರೆ. ಸಾಲ ಪಡೆಯುವುದೇ ನಿಮ್ಮ ಅಭಿವೃದ್ಧಿ ಕಾರ್ಯಕ್ರಮವಾ ?’ ಎಂದು ಕೆಪಿಸಿಸಿ ವಕ್ತಾರೆ ಮಂಜುಳಾ ಮಾನಸ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

‘ಜಿಎಸ್‌ಟಿ ವಿಷಯದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಭಾರಿ ಮೋಸವಾಗಿದೆ. ಇದರಿಂದ ಅಭಿವೃದ್ಧಿ ಕುಂಠಿತಗೊಂಡಿದೆ. ಪ್ರಶ್ನಿಸಬೇಕಾದ ಸಂಸದರು ಮಾತ್ರ ಮೌನಕ್ಕೆ ಶರಣಾಗಿದ್ದಾರೆ’ ಎಂದು ಭಾನುವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

‘ಬಿಜೆಪಿಯ ನಾಟಕ ಇನ್ಮುಂದೆ ಹೆಚ್ಚಿನ ದಿನ ನಡೆಯಲ್ಲ. ಸಾಮಾನ್ಯ ಜನರಿಗೆ ಇದೀಗ ಎಲ್ಲವೂ ಅರ್ಥವಾಗುತ್ತಿದೆ. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಹೇಳಿದರು.

ADVERTISEMENT

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ ‘ಕೇಂದ್ರದ 15ನೇ ಹಣಕಾಸು ಆಯೋಗ ರಾಜ್ಯಕ್ಕೆ ಭಾರಿ ಅನ್ಯಾಯ ಎಸಗಿದೆ. ಪ್ರತಿ ವರ್ಷ ₹ 11,215 ಕೋಟಿ ಅನುದಾನ ಕೊರತೆಯಾಗಲಿದೆ. ಐದು ವರ್ಷದ ಅವಧಿಯಲ್ಲಿ ಒಟ್ಟಾರೆ ರಾಜ್ಯಕ್ಕೆ ₹ 56,075 ಕೋಟಿ ಅನುದಾನ ಕೊರತೆಯಾಗಲಿದೆ. ಇದು ರಾಜ್ಯದ ಅಭಿವೃದ್ಧಿಯ ಮೇಲೆ ದುಷ್ಪರಿಣಾಮ ಬೀರಲಿದೆ’ ಎಂದರು.‌

‘ಕೇಂದ್ರ ಸರ್ಕಾರದ ನೋಟ್ ಬ್ಯಾನ್‌, ಅವೈಜ್ಞಾನಿಕ ಜಿಎಸ್‌ಟಿ, ಲಾಕ್‌ಡೌನ್‌, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣ ನೀತಿಯಿಂದ ದೇಶದ ಜಿಡಿಪಿ ಶೇ ಮೈನಸ್ 23.9ಕ್ಕೆ ಕುಸಿದಿದೆ. ಇದರಿಂದ ಜನರು ಹಲವು ದುಷ್ಪರಿಣಾಮಗಳನ್ನು ಎದುರಿಸುವಂತಾಗಿದೆ’ ಎಂದು ಕೇಂದ್ರ ಸರ್ಕಾರದ ವಿರುದ್ಧ ಅವರು ಹರಿಹಾಯ್ದರು.

‘ಆಯಾ ಕಾಲಘಟ್ಟಕ್ಕೆ ತಕ್ಕಂತೆ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರಕ್ಕೆ ಗಂಭೀರವಾದ ಸಲಹೆಗಳನ್ನು ಕೊಟ್ಟರೂ ಪರಿಗಣಿಸದಿರುವುದೇ ಇಂದಿನ ದುಃಸ್ಥಿತಿಗೆ ಕಾರಣವಾಗಿದೆ’ ಎಂದು ಲಕ್ಷ್ಮಣ್ ಹೇಳಿದರು.

ಮೈಸೂರು ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.