
ಹುಣಸೂರು: ‘ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಶ್ರಮಿಸುತ್ತಿದೆ’ ಎಂದು ಕೇಂದ್ರದ ಉಪವಲಯದ ಸಂಚಾಲಕರಾದ ಲಕ್ಷ್ಮಿ ಬೆಹನ್ ತಿಳಿಸಿದರು.
ನಗರದ ಬೈಪಾಸ್ ರಸ್ತೆಯಲ್ಲಿ ವಿಶ್ವವಿದ್ಯಾಲಯದ ನೂತನ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ವಿಶ್ವದಲ್ಲಿ ಅಶಾಂತಿ, ವೈರತ್ವ, ಹಿಂಸೆ ಮತ್ತು ಯುದ್ಧ ನಡೆದು ಶ್ರೀಸಾಮಾನ್ಯರು ಮಾನಸಿಕವಾಗಿ ವಿಚಲಿತರಾಗುತ್ತಿದ್ದಾರೆ. ಸ್ನೇಹ, ಪ್ರೀತಿ, ಆತ್ಮೀಯತೆ ಬೀಜ ಬಿತ್ತುವ ಮೂಲಕ ಸಹೋದರ ಭಾವನೆ ಸ್ಥಾಪನೆಗೆ ವಿದ್ಯಾಲಯವು ಹಲವು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ’ ಎಂದರು.
‘ಕೇಂದ್ರವು 147 ದೇಶಗಳಲ್ಲಿ ತನ್ನದೇ ಆದ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಮಾನಸಿಕ ನೆಮ್ಮದಿಗೆ ಒತ್ತು ನೀಡಿ, ಶಾಂತಿ ಸ್ಥಾಪಿಸುವತ್ತ ದಾಪುಗಾಲು ಹಾಕಿದೆ’ ಎಂದು ಹೇಳಿದರು.
‘ದೇಶದಾದ್ಯಂತ ತಾಲ್ಲೂಕು ಮಟ್ಟದಲ್ಲಿ ಈಶ್ವರೀಯ ವಿಶ್ವವಿದ್ಯಾಲಯದ ಕೇಂದ್ರ ಆರಂಭಿಸಲಾಗುವುದು’ ಎಂದರು.
ಕಾರ್ಯಕ್ರಮದಲ್ಲಿ ಮೌಂಟ್ ಅಬು ಕೇಂದ್ರದ ಲಲಿತ್ ಮಧುಬನ್, ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜ ಸ್ವಾಮೀಜಿ, ನಗರಸಭೆ ಅಧ್ಯಕ್ಷ ಶರವಣ ಮಾತನಾಡಿದರು.
ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಆಶಾ, ನಗರಸಭೆ ಆಯುಕ್ತೆ ಮಾನಸ, ಕೃಷ್ಣಮೂರ್ತಿ, ಬಾಬು, ರಾಮಚಂದ್ರ, ಮೂರ್ತಿ, ನಾಗಶ್ರೀ ಸೇರಿದಂತೆ ಭಕ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.