ಮೈಸೂರು: ಇಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್)ದಿಂದ ಹೆಚ್ಚುವರಿ ವಿದ್ಯುತ್ ಉತ್ಪಾದನೆಗಾಗಿ ಸೌರಶಕ್ತಿಯನ್ನು ಬಳಸಿಕೊಳ್ಳಲು ಯೋಜಿಸಲಾಗಿದೆ. 965 ಮೆಗಾ ವಾಟ್ ಉತ್ಪಾದನೆಗೆ ಯೋಜನೆ ರೂಪಿಸಲಾಗಿದೆ.
ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯ ಅಲ್ಲಲ್ಲಿ ಘಟಕಗಳನ್ನು ಅಳವಡಿಸಿ, ಅದರಿಂದ ಸೌರಶಕ್ತಿಯನ್ನು ವಿದ್ಯುತ್ ಆಗಿ ಉತ್ಪಾದಿಸಿ ಬಳಸಿಕೊಳ್ಳಲು ಯೋಜನೆ ಸಿದ್ಧಪಡಿಸಲಾಗಿದೆ.
ಈ ಭಾಗದ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಾನವ–ವನ್ಯಜೀವಿ ಸಂಘರ್ಷ ಹೆಚ್ಚುತ್ತಲೇ ಇದೆ. ಕೃಷಿ ಪಂಪ್‌ಸೆಟ್‌ಗಳಿಗೆ ರಾತ್ರಿ ವೇಳೆ ವಿದ್ಯುತ್ ಪೂರೈಕೆ ಮಾಡಿರುವುದರಿಂದ ರೈತರು ರಾತ್ರಿ, ತಡರಾತ್ರಿ ಎನ್ನದೇ ಜಮೀನುಗಳಿಗೆ, ತೋಟಗಳಿಗೆ ಅಥವಾ ಹೊಲಗಳಿಗೆ ಹೋಗಬೇಕಾಗುತ್ತದೆ. ಈ ವೇಳೆಯಲ್ಲಿ ವನ್ಯಪ್ರಾಣಿಗಳ ದಾಳಿಗೆ ತುತ್ತಾಗುವ ಉದಾಹರಣೆಗಳು ಕಂಡುಬರುತ್ತಿವೆ. ಇದರಿಂದ ಪ್ರಾಣ ಹಾನಿಯೂ ಆಗುತ್ತಿದೆ; ಅಂಗವೈಕಲ್ಯವೂ ಉಂಟಾಗುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಇದನ್ನು ತಪ್ಪಿಸುವ ಉದ್ದೇಶದಿಂದ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ಸರಬರಾಜನ್ನು ಹಗಲು ಹೊತ್ತಿನಲ್ಲೇ ಮಾಡಬೇಕು ಎಂದು ಉದ್ದೇಶಿಸಲಾಗಿದೆ. ಇದಕ್ಕಾಗಿ ಸೌರವಿದ್ಯುತ್ ಬಳಕೆಗೆ ಕ್ರಿಯಾಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ.
ಬಳಸಿಕೊಳ್ಳಲು: ಈ ಮೂಲಕ ನವೀಕರಿಸಬಹುದಾದ ಇಂಧನವಾದ ವಿದ್ಯುತ್ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.
‘ಸೆಸ್ಕ್ ವ್ಯಾಪ್ತಿಯ ಜಿಲ್ಲೆಗಳಲ್ಲಿ ಒಟ್ಟು 965 ಮೆಗಾವಾಟ್ ಸೌರಶಕ್ತಿ ಘಟಕಗಳ ಸ್ಥಾಪನೆಗೆಂದು ಟೆಂಡರ್ ಕರೆಯಲಾಗಿದೆ. ಕೆಲವೆಡೆ ಸರ್ಕಾರಿ ಜಾಗ ಇದೆ. ಕೆಲವೆಡೆ ಖಾಸಗಿ ಜಾಗಗಳನ್ನು ತೆಗೆದುಕೊಂಡು ಘಟಕ ಸ್ಥಾಪಿಸಬೇಕಾಗುತ್ತದೆ. ಒಂದು ಮೆಗಾವಾಟ್‌ಗೆ ₹ 4 ಕೋಟಿ ವೆಚ್ಚ ಆಗುತ್ತದೆ. ಅದರಂತೆ ಈಗಿನ ಒಟ್ಟು ಯೋಜನೆಗೆ ₹ 3,500 ಕೋಟಿ ಹೂಡಿಕೆ ಆಗಬೇಕಾಗುತ್ತದೆ. ಅದನ್ನು ನಾವು ಹೂಡಿಕೆ ಮಾಡುವುದಿಲ್ಲ; ಖಾಸಗಿಯವರು ಬಂಡವಾಳ ಹಾಕುತ್ತಾರೆ. ಅವರೇ ಉತ್ಪಾದನೆ ಮಾಡುತ್ತಾರೆ. ನಾವು ಅವರ ಬಳಿ ವಿದ್ಯುತ್ ಖರೀದಿಸುತ್ತೇವೆ. 25 ವರ್ಷಗಳವರೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ’ ಎಂದು ಸೆಸ್ಕ್ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲರಾಜು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ರೈತರ ಪಂಪ್‌ಸೆಟ್‌ಗಳಿಗೆ ಹಗಲಿನ ವೇಳೆ ವಿದ್ಯುತ್ ಕೊಡಲು ರೂಪಿಸಿರುವ ಯೋಜನೆ ಇದು. ಸ್ಥಳೀಯವಾಗಿ ಉತ್ಪಾದನೆ ಕೇಂದ್ರ ಇದ್ದರೆ ಅನುಕೂಲ ಆಗುತ್ತದೆ. ಖಾಸಗಿಯವರಿಂದ ನಾವು ಸಾಂಪ್ರದಾಯಿಕ ವಿದ್ಯುತ್ ಖರೀದಿಸುವುದು ತಪ್ಪುತ್ತದೆ. ಹೆಚ್ಚು ಹಣ ಕೊಡುವುದೂ ಇರುವುದಿಲ್ಲ. ಸೌರವಿದ್ಯುತ್ ಘಟಕಗಳಿಂದ ನಾವು ಯೂನಿಟ್‌ಗೆ ₹ 3ಕ್ಕೆ ಪಡೆಯಲಾಗುವುದು. ಬೇರೆಯವರಿಂದ ತೆಗೆದುಕೊಂಡರೆ ಪ್ರತಿ ಯೂನಿಟ್‌ಗೆ ಸರಾಸರಿ ₹ 8 ಆಗುತ್ತದೆ’ ಎನ್ನುತ್ತಾರೆ ಅವರು.
ಲಭ್ಯವಿರುವ ಸೌರಶಕ್ತಿಯನ್ನು ಸದ್ಬಳಕೆ ಮಾಡಿಕೊಂಡು ಕೃಷಿ ಚಟುವಟಿಕೆಗಾಗಿ ರೈತರಿಗೆ ಅನುಕೂಲ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ.–ಕೆ.ಎಂ. ಮುನಿಗೋಪಾಲರಾಜು, ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಸೆಸ್ಕ್ ಮೈಸೂರು
ಪಿರಿಯಾಪಟ್ಟಣದಲ್ಲಿ 40 ಮೆಗಾವಾಟ್
ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಪಂಪ್‌ಸೆಟ್‌ಗಳಿಗೆ ತ್ರಿಫೇಸ್ ವಿದ್ಯುತ್ ಪೂರೈಕೆಗಾಗಿ ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಶಂಕುಸ್ಥಾಪನೆಯನ್ನು ಈಚೆಗೆ ನೆರವೇರಿಸಲಾಗಿದೆ. ಅಲ್ಲಿ 40 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಅಲ್ಲಿ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 80 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪಿಸಲು ಯೋಜಿಸಲಾಗಿದೆ.
ಚಾಮರಾಜನಗರದಲ್ಲಿ 5 ಮೆಗಾವಾಟ್ ವಿದ್ಯುತ್ ಘಟಕ ಉದ್ಘಾಟನೆಗೆ ಸಿದ್ಧವಾಗಿದೆ. ಅದರಿಂದ 66 ಕೆ.ವಿ ಸಾಮರ್ಥ್ಯದ ಫೀಡರ್‌ಗಳಿಗೆ ನಿತ್ಯ 7 ಗಂಟೆವರೆಗೆ ಸೌರವಿದ್ಯುತ್ ಪೂರೈಸಲಾಗುವುದು. ಒಟ್ಟು 110 ಘಟಕಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. ತಲಾ ಒಂದು ಮೆಗಾ ವಾಟ್ ವಿದ್ಯುತ್ ಘಟಕಕ್ಕೆ 4 ಎಕರೆ ಭೂಮಿ ಬೇಕಾಗುತ್ತದೆ. ಈಗಾಗಲೇ ಮೊದಲ ಹಂತದಲ್ಲಿ ಒಂದು ಸಾವಿರ ಎಕರೆ ಸರ್ಕಾರಿ ಭೂಮಿಯನ್ನು ರಾಜ್ಯ ಸರ್ಕಾರ ನೀಡಿದೆ. ಉಳಿದದ್ದು ಖಾಸಗಿಯವರಿಂದ ಪಡೆಯಲಾಗುವುದು. ಪ್ರತಿ ಎಕರೆಗೆ ಭೂ ಮಾಲೀಕರಿಗೆ ವರ್ಷಕ್ಕೆ ಇಂತಿಷ್ಟು ಬಾಡಿಗೆ ಕೊಡಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.