ADVERTISEMENT

ಹುಣಸೂರು| ಕೋಮು ಸೌಹಾರ್ದ ಸಾರುವ ಜಮಾಲ್ ಬೀಬೀ ದರ್ಗಾ ಉರುಸ್ ಸಂಭ್ರಮ

ಹುಣಸೂರು ತಾಲ್ಲೂಕಿನ ರತ್ನಪುರಿಯ ದರ್ಗಾಕ್ಕೆ ಹಿಂದೂಗಳ ಭೇಟಿ, ಚಾದರ್‌ ಹೊದಿಸಿ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2023, 5:12 IST
Last Updated 27 ಫೆಬ್ರುವರಿ 2023, 5:12 IST
ಹುಣಸೂರು ತಾಲ್ಲೂಕಿನ ರತ್ನಪುರಿ ಗ್ರಾಮದಲ್ಲಿ ನಡೆದ ಜಮಾಲ್ ಬೀಬೀ ದರ್ಗಾಕ್ಕೆ ಭೇಟಿ ನೀಡಿದ್ದ ಭಕ್ತರು
ಹುಣಸೂರು ತಾಲ್ಲೂಕಿನ ರತ್ನಪುರಿ ಗ್ರಾಮದಲ್ಲಿ ನಡೆದ ಜಮಾಲ್ ಬೀಬೀ ದರ್ಗಾಕ್ಕೆ ಭೇಟಿ ನೀಡಿದ್ದ ಭಕ್ತರು   

ಹುಣಸೂರು: ತಾಲ್ಲೂಕಿನ ಸದ್ಭಾವನಾ ಜಾತ್ರೆ ಎಂದು ಹೆಸರು ಮಾಡಿರುವ ರತ್ನಪುರಿ ಗ್ರಾಮದಲ್ಲಿ ಜಮಾಲ್ ಬೀಬೀ ದರ್ಗಾ ಉರುಸ್ ಭಾನುವಾರ ರಾತ್ರಿ ಅದ್ಧೂರಿಯಾಗಿ ನಡೆಯಿತು.

ಸಂಜೆ 7 ಗಂಟೆಗೆ ಆರಂಭವಾದ ಗಂಧೋತ್ಸವ ಮೆರವಣಿಗೆ ಗ್ರಾಮದ‌ ಪ್ರಮುಖ ರಸ್ತೆಗಳಲ್ಲಿ ತೆರಳಿತು. ಮೆರವಣಿಗೆಯಲ್ಲಿ ತಾಲ್ಲೂಕಿನ ವಿವಿಧ ಮಸೀದಿಯಿಂದ ಬಂದ ದೇವರುಗಳನ್ನು ಜಮಾಲ್ ಬೀಬೀ ದರ್ಗಾದ ಬಳಿ ಒಗ್ಗೂಡಿಸಿ ಇಸ್ಲಾಂ ಧರ್ಮ ಗುರುಗಳು ಭಕ್ತರಿಗೆ ಹರಿತವಾದ ಆಯುಧಗಳನ್ನು ಚುಚ್ಚಿ ಕಣ್ಣುಕಟ್ಟಿನ ಮಾಯಾ ಪ್ರದರ್ಶನ ನೀಡಿದರು. ಬಳಿಕ ಪವಿತ್ರ ಗಂಗೆಯೊಂದಿಗೆ ವಿವಿಧ ಮಸೀದಿಯಿಂದ ಆಗಮಿಸಿದ ಭಕ್ತರು ದರ್ಗಾ ಪ್ರವೇಶಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧ ಭಾಗದಿಂದ ಭಕ್ತರು ಆಗಮಿಸಿ ದರ್ಗಾ ವೀಕ್ಷಿಸಿದರು.

ಜಮಾಲ್ ಬೀಬೀ ದರ್ಗಾದಲ್ಲಿ ಹಿಂದೂ ಸಮುದಾಯದವರು ಚಾದರ್‌ ಹೊದಿಸಿ ಹರಕೆ ಸಲ್ಲಿಸಿದರು.

ADVERTISEMENT

ಶಾಸಕ ಎಚ್.ಪಿ.ಮಂಜುನಾಥ್, ವಿಧಾನ ಪರಿಷತ್‌ ಸದಸ್ಯ ಅಡಗೂರು ಎಚ್.ವಿಶ್ವನಾಥ್ ದರ್ಗಾದಲ್ಲಿ ಚಾದರ್‌ ಹೊದಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದರ್ಗಾ ಆಡಳಿತ ಸಮಿತಿ ಮುಖಂಡರು ಜನಪ್ರತಿನಿಧಿಗಳನ್ನು ಗೌರವಿಸಿದರು.

ತುಂಬಿ ತುಳುಕಿದ ದರ್ಗಾ: ಉರುಸ್‌ಗೆ ಈ ಬಾರಿ ಹೆಚ್ಚಿನ ಭಕ್ತರು ಆಗಮಿಸಿದ್ದರು. ಉರುಸ್‌ಗೆ ಭೇಟಿ ನೀಡುವ ಭಕ್ತರು ಸಿಹಿ ಬೂಂದಿ ಮತ್ತು ಹೂವು ಖರೀದಿಸಿ ತೆರಳುವುದು ಸಂಪ್ರದಾಯ. ಜಾತ್ರೆಯಲ್ಲಿ ಬೂಂದಿ ಮಾರಾಟ ಅಂಗಡಿಗಳಲ್ಲಿ ಗ್ರಾಹಕರು ಕಿಕ್ಕಿರಿದು ನೆರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.