
ಜಯಪುರ: ಹೋಬಳಿಯ ಮಂಡನಹಳ್ಳಿ ಜೋಡಿಲಿಂಗ ಮಹದೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಂಗಳವಾರ ಕೊಂಡೋತ್ಸವ ನಡೆಯಿತು.
ಮಹದೇಶ್ವರ ಸ್ವಾಮಿ, ವೀರಭದ್ರೇಶ್ವರ ಸ್ವಾಮಿ ದೇವರ ಬಿರುದು ಹೊತ್ತ ಅರ್ಚಕರು ಕೊಂಡ ಹಾಯ್ದರು. ಭಕ್ತರು ಕೊಂಡೊತ್ಸವ ಕಣ್ತುಂಬಿಕೊಂಡರು. ಭಕ್ತರು ತೆಂಗಿನಕಾಯಿ ಮತ್ತು ದವಸ ಧಾನ್ಯಗಳನ್ನು ಕೊಂಡಕ್ಕೆ ಹಾಕಿ ಪೂಜೆ ಸಲ್ಲಿಸಿದರು.
ಸೋಮವಾರ ಹಾಲರವಿ ಉತ್ಸವಕ್ಕೆ ಗಂಗಸ್ಥಾನದಲ್ಲಿ ಪೂಜೆ ನಡೆಯಿತು. ಮಹದೇಶ್ವರ ಸ್ವಾಮಿ ಉತ್ಸವ ಮೂರ್ತಿ, ದೇವರ ಬಿರುದು ಬಾವಲಿಗಳು ಮೆರವಣಿಗೆಯಲ್ಲಿ ಸಾಗಿದವು. ತಮಟೆ, ಮಂಗಳವಾದ್ಯ ಸದ್ದಿಗೆ ವೀರಗಾಸೆ ನೃತ್ಯ ನಡೆಯಿತು. ಮೆರವಣಿಗೆಯಲ್ಲಿ ಪುರ ಮಠದ ಚಂದ್ರಶೇಖರ ಸ್ವಾಮೀಜಿ ಭಾಗವಹಿಸಿದ್ದರು.
ಮುಂಜಾನೆ 3ಗಂಟೆ ವೇಳೆಗೆ ಕರ್ಪೂರದಿಂದ ಕೊಂಡ ಹಚ್ಚಲಾಯಿತು. ಬಳಿಕ ಜೋಡಿಲಿಂಗ ಮಹದೇಶ್ವರ ಸ್ವಾಮಿಗೆ ಮಹಾಮಂಗಳಾರತಿ ನೆರವೇರಿಸಿ, ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಭಕ್ತರು ಸರತಿ ಸಾಲಿನಲ್ಲಿ ನಿಂತು ಜೋಡಿಲಿಂಗ ದರ್ಶನ ಪಡೆದು, ಹರಕೆ ಪೂಜೆ ಸಲ್ಲಿಸಿದರು. ಮಹಾಪ್ರಸಾದ ವಿನಿಯೋಗ ಮಾಡಲಾಯಿತು.
ಮಂಗಳವಾರ ಸಂಜೆ ಹುಲಿವಾಹನ ಉತ್ಸವ ಮೂರ್ತಿ, ಮಹದೇಶ್ವರ ಸ್ವಾಮಿ ಉತ್ಸವ ಮೂರ್ತಿ ಮತ್ತು ಬಿರುದು ಬಾವಲಿಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಜೋಡಿಲಿಂಗ ಮಹದೇಶ್ವರ ಜಾತ್ರಾ ಮಹೋತ್ಸವಕ್ಕೆ ಅಂತಿಮ ತೆರೆ ಬಿದ್ದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.