ADVERTISEMENT

ತಿ.ನರಸೀಪುರ | ಜೆಡಿಎಸ್‌ ಕಾರ್ಯಕರ್ತರಲ್ಲಿ ಒಗ್ಗಟ್ಟಿರಲಿ: ಎಂ.ಅಶ್ವಿನ್ ಕುಮಾರ್

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 4:06 IST
Last Updated 15 ಫೆಬ್ರುವರಿ 2026, 4:06 IST
ಜೆಡಿಎಸ್ ಮೈಸೂರು ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷರಾಗಿ ನೇಮಕಗೊಂಡ ಎಂ.ಅಶ್ವಿನ್ ಕುಮಾರ್ ಅವರನ್ನು ತಿ.ನರಸೀಪುರ ಜೆಡಿಎಸ್ ಘಟಕದಿಂದ ಸನ್ಮಾನಿಸಲಾಯಿತು
ಜೆಡಿಎಸ್ ಮೈಸೂರು ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷರಾಗಿ ನೇಮಕಗೊಂಡ ಎಂ.ಅಶ್ವಿನ್ ಕುಮಾರ್ ಅವರನ್ನು ತಿ.ನರಸೀಪುರ ಜೆಡಿಎಸ್ ಘಟಕದಿಂದ ಸನ್ಮಾನಿಸಲಾಯಿತು   

ತಿ.ನರಸೀಪುರ: ‘ರಾಜ್ಯದಲ್ಲಿ ಜೆಡಿಎಸ್‌ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಪಕ್ಷದ ಜಿಲ್ಲಾ ಗ್ರಾಮಾಂತರ ಘಟಕದ ನೂತನ ಅಧ್ಯಕ್ಷ ಎಂ.ಅಶ್ವಿನ್ ಕುಮಾರ್ ತಿಳಿಸಿದರು.

ಪಟ್ಟಣದ ಜೆಎಸ್‌ಎಸ್ ಸಭಾಭವನದಲ್ಲಿ ಜೆಡಿಎಸ್‌ ತಾಲ್ಲೂಕು ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಪಕ್ಷವನ್ನು ಸಧೃಡಗೊಳಿಸಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದ್ದು, ಬೂತ್ ಮಟ್ಟದಲ್ಲಿ ಕಾರ್ಯಕರ್ತರಿಗೆ ಪ್ರೇರಣೆ ನೀಡಲಾಗುತ್ತಿದೆ. ಡಿಜಿಟಲ್ ಸದಸ್ಯತ್ವ ಅಭಿಯಾನದ ಮಹತ್ವವನ್ನು ಸಾಮಾಜಿಕ ಜಾಲತಾಣಗಳ ಮೂಲಕ ನೇರವಾಗಿ ಜನರನ್ನು ಸಂಪರ್ಕಿಸುವ ಕಾರ್ಯಕ್ರಮಗಳ ಕುರಿತು ಯೋಜನೆ ರೂಪಿಸಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ಈಗಾಗಲೇ ಆರಂಭಗೊಂಡಿರುವ ಡಿಜಿಟಲ್ ನೋಂದಣಿ ಸದಸ್ಯತ್ವ ಮಾಡಿಸಿ ಹೋಬಳಿ ಮಟ್ಟದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಸದಸ್ಯತ್ವ ಮಾಡಿಸಬೇಕು’ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

‘ಮುಂಬರುವ ಸ್ಥಳೀಯ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸಕ್ರಿಯವಾಗಿ ಕೆಲಸ ಮಾಡಬೇಕು’ ಎಂದು ತಿಳಿಸಿದರು.

‘ಫೆ.24 ರಂದು ಬನ್ನೂರಿನ ಡೇರಿ ಮುಂಭಾಗದ ಆವರಣದಲ್ಲಿ ‘ಜನರೊಂದಿಗೆ ಜಾತ್ಯತೀತ ಜನತಾದಳ’ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಕ್ಷೇತ್ರದ ಎಲ್ಲ ಭಾಗಗಳಿಂದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

ಜೆಡಿಎಸ್ ರಾಜ್ಯ ಕಾರ್ಯದರ್ಶಿ ವೈ.ಎಸ್. ರಾಮಸ್ವಾಮಿ ಮಾತನಾಡಿ, ‘ಅಶ್ವಿನ್‌ ಅವರ ಪ್ರಾಮಾಣಿಕತೆಗೆ ಕುಮಾರಸ್ವಾಮಿ ಅವರು ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದ್ದಾರೆ’ ಎಂದರು.

ಕ್ಷೇತ್ರ ಜೆಡಿಎಸ್ ಅಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಜೈಪಾಲ್ ಭರಣಿ, ಚಿಕ್ಕ ಜವರಪ್ಪ, ವೀರೇಶ್, ಶಂಭುದೇವಪುರ ರಮೇಶ್, ಮೂಗೂರು ಎಂ.ಆರ್. ಶಿವಮೂರ್ತಿ, ವಕೀಲರ ಸಂಘದ ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ, ವಕೀಲ ಪರಮೇಶ್, ಎನ್.ಲೋಕೇಶ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾದ ಲಿಂಗಪ್ಪಾಜಿ, ಮಧು, ಹೆಮ್ಮಿಗೆ ಹೊನ್ನಯ್ಯ, ಅಡುಗೆ ಸುರೇಶ್, ಸಂಪತ್, ಮಾವಿನಹಳ್ಳಿ ರಾಜೇಶ್, ಸೋಸಲೆ ರಾಜಣ್ಣ, ರಾಜೇಶ್, ಅತ್ತಹಳ್ಳಿ ರವಿ, ನಾಗೇಂದ್ರ, ಧರ್ಮಾ ರತ್ನಕರ, ಬಿ.ಎಂ. ಶಿವಕುಮಾರ್, ಮಾದಾಪುರ ಮಹದೇವಸ್ವಾಮಿ, ಕಟ್ಟೆಪುರ ಸಿದ್ದಪ್ಪ, ಕಾರ್ಯಕರ್ತರು ಹಾಜರಿದ್ದರು.