ADVERTISEMENT

ಪಕ್ಷದ ಕೆಲಸವಿಲ್ಲ, ಕಚೇರಿಗೆ ಏಕೆ ಹೋಗಲಿ: ಜಿ.ಟಿ. ದೇವೇಗೌಡ

ಚಾಡಿಕೋರರೇ ಕುಮಾರಸ್ವಾಮಿಗೆ ಪ್ರಿಯ: ಜಿ.ಟಿ. ದೇವೇಗೌಡ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 2:30 IST
Last Updated 14 ನವೆಂಬರ್ 2025, 2:30 IST
ಮೈಸೂರಿನ ಜಲದರ್ಶಿನಿ ಸಭಾಂಗಣದಲ್ಲಿ ಶಾಸಕ ಜಿ.ಟಿ. ದೇವೇಗೌಡ ಪತ್ರಿಕಾಗೋಷ್ಠಿ ನಡೆಸಿದರು. ಪ್ರಜಾವಾಣಿ ಚಿತ್ರ.
ಮೈಸೂರಿನ ಜಲದರ್ಶಿನಿ ಸಭಾಂಗಣದಲ್ಲಿ ಶಾಸಕ ಜಿ.ಟಿ. ದೇವೇಗೌಡ ಪತ್ರಿಕಾಗೋಷ್ಠಿ ನಡೆಸಿದರು. ಪ್ರಜಾವಾಣಿ ಚಿತ್ರ.   

ಬೆಂಗಳೂರು: ‘ಪಕ್ಷದ ಸಮಿತಿಯಿಂದ ನನ್ನನ್ನು ಕೈಬಿಡಲಾಗಿದೆ. ಯಾವ ಸಮಿತಿಯಲ್ಲೂ ನಾನಿಲ್ಲ. ಹೀಗಾಗಿ ನಾನು ಪಕ್ಷದ ಕಚೇರಿಗೆ ಹೋಗುವುದಿಲ್ಲ, ಕ್ಷೇತ್ರದಲ್ಲೇ ಇದ್ದು ಜನರ ಕೆಲಸ ಮಾಡುತ್ತೇನೆ’ ಎಂದು ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಅವರು ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕನಾಗುವ ಆಸೆ ನನಗೇನೂ ಇರಲಿಲ್ಲ. ಆಸೆ ತೋರಿಸಿ, ಏನನ್ನೂ ಹೇಳದೆ ನನ್ನ ಹೆಸರನ್ನು ಕೈಬಿಡಲಾಗಿತ್ತು. ಇದರಿಂದ ಬೇಸರವಾಯಿತು’ ಎಂದರು. 

‘ಯಾವ ಕಾರಣಕ್ಕಾಗಿ ನನ್ನ ಹೆಸರನ್ನು ಕೈಬಿಡಲಾಯಿತು ಎಂಬುದನ್ನು ಕುಮಾರಸ್ವಾಮಿ ಅವರು ಈವರೆಗೂ ತಿಳಿಸಿಲ್ಲ. ಅಂದಿನಿಂದ ನನ್ನ ಪಾಡಿಗೆ ನಾನು, ಅವರ ಪಾಡಿಗೆ ಅವರು ಇದ್ದಾರೆ. ಪಕ್ಷಕ್ಕಾಗಿ ಕೆಲಸ ಮಾಡಿದವರು ಅವರಿಗೆ ಬೇಡವಾಗಿದೆ. ಬದಲಿಗೆ ಚಾಡಿ ಹೇಳುವವರು ಅವರಿಗೆ ಪ್ರಿಯವಾಗುತ್ತಾರೆ’ ಎಂದರು.

ADVERTISEMENT

‘ಎಚ್‌.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ಬಳಿಕ ಪಾಂಡವಪುರದಲ್ಲಿ ಪಕ್ಷದ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರು, ‘ನೀವೇ ಶಾಸಕಾಂಗ ಪಕ್ಷದ ನಾಯಕ’ ಎಂದು ಸೂಚ್ಯವಾಗಿ ಹೇಳಿದ್ದರು. ಎದುರಾಳಿ ಕಾಂಗ್ರೆಸ್‌ ಪಾಳಯದಲ್ಲೂ ಈ ಮಾತು ಚಾಲ್ತಿಯಲ್ಲಿತ್ತು’ ಎಂದು ವಿವರಿಸಿದರು.

‘ಡಿ.ಕೆ.ಶಿವಕುಮಾರ್ ಸಹ ಈ ವಿಷಯ ಪ್ರಸ್ತಾಪಿಸಿದ್ದರು. ಅಧಿಕೃತವಾಗಿ ಘೋಷಣೆ ಆಗದೆ ಹೇಗೆ ನಾಯಕನಾಗುತ್ತೇನೆ ಎಂದು ಅವರಿಗೆ ತಿಳಿಸಿದ್ದೆ. ನಿಖಿಲ್‌ ಅವರೇ ಸೂಚ್ಯವಾಗಿ ಹೇಳಿದ್ದರಿಂದ ಹೊಸ ಕಚೇರಿಯನ್ನೂ ಆರಂಭಿಸಿದ್ದೆ. ಆದರೆ, ಯಾವ ಕಾರಣವನ್ನೂ ನೀಡದೆ ಬೇರೆಯವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಘೋಷಿಸಿದರು. ಇದರಿಂದ ನನಗೆ ತುಂಬಾ ನೋವಾಯಿತು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ನಾನು ಕುಮಾರಸ್ವಾಮಿ ಅವರನ್ನೂ ಹೊಗಳಿದ್ದೇನೆ. ಸಿದ್ದರಾಮಯ್ಯ ಅವರನ್ನೂ ಹೊಗಳಿದ್ದೇನೆ. ತೆಗಳುವಾಗ ತೆಗಳಬೇಕು, ಹೊಗಳುವಾಗ ಹೊಗಳಬೇಕು. ಸಿದ್ದರಾಮಯ್ಯ ಅವರ ಜೊತೆ 25 ವರ್ಷ ಕೆಲಸ ಮಾಡಿದ್ದೆ. ಅವರ ವಿರುದ್ಧ ಹೋರಾಡುವ ಹೊಣೆಯನ್ನು ಪಕ್ಷ ನೀಡಿದಾಗ, ಹೋರಾಡಿದೆ. ಆಗಿನ ನನ್ನ ನಿಷ್ಠೆ ಪಕ್ಷದ ನಾಯಕರಿಗೆ ಕಾಣಲಿಲ್ಲವೇ’ ಎಂದು ಪ್ರಶ್ನೆಯೊಂದಕ್ಕೆ ಮರುಪ್ರಶ್ನೆ ಹಾಕಿದರು.