ADVERTISEMENT

ಬಟ್ಟೆ ಬ್ಯಾಗ್ ಖರೀದಿಯಲ್ಲಿ ₹6.18 ಕೋಟಿ ಅವ್ಯವಹಾರ: ರೋಹಿಣಿ ವಿರುದ್ಧ ಸಾ.ರಾ ಆರೋಪ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 16:37 IST
Last Updated 3 ಸೆಪ್ಟೆಂಬರ್ 2021, 16:37 IST
ಪತ್ರಿಕಾಗೋಷ್ಠಿಯಲ್ಲಿ ಸಾ.ರಾ.ಮಹೇಶ್
ಪತ್ರಿಕಾಗೋಷ್ಠಿಯಲ್ಲಿ ಸಾ.ರಾ.ಮಹೇಶ್   

ಮೈಸೂರು: ‘ಪ್ಲಾಸ್ಟಿಕ್‌ ಮುಕ್ತ ನಗರ ಕಾರ್ಯಕ್ರಮದ ಅಡಿ ನಾಗರಿಕರಿಗೆ ಉಚಿತವಾಗಿ ವಿತರಿಸಲು ನಡೆದ ಬಟ್ಟೆ ಬ್ಯಾಗ್‌ ಖರೀದಿಯಲ್ಲಿ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ₹ 6.18 ಕೋಟಿ ಅವ್ಯವಹಾರ ನಡೆಸಿದ್ದು, ಅವರನ್ನು ಕೂಡಲೇ ಸೇವೆಯಿಂದ ವಜಾ ಮಾಡಬೇಕು’ ಎಂದು ಶಾಸಕ ಸಾ.ರಾ.ಮಹೇಶ್‌ ಆಗ್ರಹಿಸಿದರು.

‘ಸ್ವಚ್ಛ ಭಾರತ್ ಯೋಜನೆ ಹಾಗೂ 15ನೇ ಹಣಕಾಸು ಯೋಜನೆಯಡಿ ಪ್ರತಿ ಬ್ಯಾಗಿಗೆ ₹ 52ರಂತೆ ಒಟ್ಟು ₹ 7.65 ಕೋಟಿ ವೆಚ್ಚದಲ್ಲಿ 14.71 ಲಕ್ಷ ಬ್ಯಾಗ್‌ ‍ಪೂರೈಸಲು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಮಾರ್ಚ್‌ 4ರಂದು ಗುತ್ತಿಗೆ ನೀಡಲಾಗಿತ್ತು. ಆದರೆ ಮಾರುಕಟ್ಟೆಯಲ್ಲಿ ಬ್ಯಾಗಿನ ದರ ಕೇವಲ ₹ 8ರಿಂದ 13 ಇತ್ತು. ಆ ದರದಲ್ಲಿ ₹ 1.47 ಕೋಟಿ ಮಾತ್ರ ವೆಚ್ಚವಾಗುತ್ತದೆ’ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಬ್ಯಾಗ್‌ ಖರೀದಿಗೆ ಪುರಸಭೆ, ‍ಪಾಲಿಕೆ, ಗ್ರಾಮಪಂಚಾಯಿತಿ ಸಾಮಾನ್ಯ ಸಭೆಗಳ ಅನುಮತಿ ಪಡೆದಿಲ್ಲ. ಈಗ 14 ಲಕ್ಷದಷ್ಟು ಬ್ಯಾಗ್‌ಗಳು ಪೂರೈಕೆಯಾಗಿವೆ. ನಿಗಮದ ಗುತ್ತಿಗೆದಾರನಿಗೆ ಹಣ ಪಾವತಿಯಾಗಿಲ್ಲ. ಕೊಡುವುದೆಲ್ಲವನ್ನೂ ಹಿಂದಿನ ಜಿಲ್ಲಾಧಿಕಾರಿಗೆ ಕೊಟ್ಟಾಗಿದೆ. ಸಾಲ ಮಾಡಿರುವುದರಿಂದ ಬಿಲ್ ಹಣವನ್ನು ಮಂಜೂರು ಮಾಡಿಸಿಕೊಡಿ ಎಂದು ಮಹಿಳಾ ಅಧಿಕಾರಿಯೊಬ್ಬರ ಪತಿಯಾಗಿರುವ ಗುತ್ತಿಗೆದಾರ ಅಳಲು ತೋಡಿಕೊಂಡಿದ್ದಾರೆ’ ಎಂದರು. ಅವರ ಹೆಸರನ್ನು ಶಾಸಕರು ಹೇಳಲಿಲ್ಲ.

ADVERTISEMENT

‘ಅಧಿಕಾರಿಗಳು ಲೂಟಿ ಹೊಡೆಯುತ್ತಿದ್ದರೂ ಮುಖ್ಯಕಾರ್ಯದರ್ಶಿ ಏನು ಮಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ರೋಹಿಣಿ ಸಿಂಧೂರಿ ಎರಡು ತಿಂಗಳು ಮೈಸೂರಿನಲ್ಲೇ ಮುಂದುವರಿದಿದ್ದರೆ ಹಣವೂ ಮಂಜೂರಾಗಿರುತ್ತಿತ್ತು’ ಎಂದು ದೂರಿದರು.

‘ಸ್ಥಳೀಯ ಸಂಸ್ಥೆಗಳ ಅಧಿಕಾರವನ್ನು ಮೊಟಕುಗೊಳಿಸಿ, ಏಕಪಕ್ಷೀಯವಾಗಿ ಬ್ಯಾಗ್ ಖರೀದಿಗೆ ನಿರ್ಧರಿಸಿದ್ದು ನಿರಂಕುಶತೆಯ ಸಂಕೇತ. ವಿಷಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಗಮನಕ್ಕೂ ತರುವೆ. ಸಿಂಧೂರಿಯವರನ್ನು ಸೇವೆಯಿಂದ ವಜಾ ಮಾಡದಿದ್ದರೆ ಮುಖ್ಯ ಕಾರ್ಯದರ್ಶಿ ಕಚೇರಿ ಮುಂದೆ ಆಮರಣಾಂತ ಧರಣಿ ನಡೆಸುವೆ’ ಎಂದರು.

‘ಕೈಮಗ್ಗ ನಿಗಮದಿಂದ ದರ ನಿಗದಿ’
‘ಶಾಸಕರ ಆರೋಪಗಳು ಆಧಾರರಹಿತ. ಬ್ಯಾಗ್‌ ಪೂರೈಕೆಯ ಗುತ್ತಿಗೆಯನ್ನು ನಿಯಮಾನುಸಾರ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ನೀಡಲಾಗಿತ್ತು. ನಿಗಮವೇ ದರ ನಿಗದಿ ಮಾಡಿದ್ದು, ನನ್ನ ಪಾತ್ರ ಇಲ್ಲ. ಪ್ರಾದೇಶಿಕ ಜವಳಿ ಪ್ರಯೋಗಾಲಯ ಸಮಿತಿಯು ಬ್ಯಾಗ್‌ಗಳ ಗುಣಮಟ್ಟ ದೃಢೀಕರಿಸಿತ್ತು. ನಾನು ಜಿಲ್ಲಾಧಿಕಾರಿಯಾಗಿದ್ದಾಗ ಒಂದು ಪೈಸೆಯನ್ನೂ ನಿಗಮಕ್ಕೆ ನೀಡಿಲ್ಲ. ಈಗ ₹ 9.59 ಲಕ್ಷ ಮಾತ್ರ ನಿಗಮಕ್ಕೆ ಪಾವತಿಯಾಗಿದೆ’ ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿ ಸ್ಪಷ್ಟನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.