ADVERTISEMENT

Manuscript Preservation: ಹಸ್ತಪ್ರತಿ ರಕ್ಷಿಸಲು ‘ಜ್ಞಾನಭಾರತ್ ಮಿಷನ್’

ರಾಜ್ಯದಲ್ಲಿವೆ 1,20,835 ಹಸ್ತಪ್ರತಿಗಳು; ಮಾಹಿತಿ ಕೋರಿ ಸಿಎಸ್ ಪತ್ರ

ಎಂ.ಮಹೇಶ್
Published 27 ಡಿಸೆಂಬರ್ 2025, 23:30 IST
Last Updated 27 ಡಿಸೆಂಬರ್ 2025, 23:30 IST
ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿರುವ ಹಸ್ತಪ್ರತಿಗಳು
ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿರುವ ಹಸ್ತಪ್ರತಿಗಳು   

ಮೈಸೂರು: ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ಹಾಗೂ ಸಂಸ್ಥೆಗಳ ಸಂಗ್ರಹದಲ್ಲಿರುವ ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣಕ್ಕೆ ಸರ್ಕಾರ ಕ್ರಮ ವಹಿಸಿದೆ.

ಕೇಂದ್ರದ ನೀತಿ ಆಯೋಗದ ದತ್ತಾಂಶ ನಿರ್ವಹಣೆ ಹಾಗೂ ಮೌಲ್ಯಮಾಪನ ಕಚೇರಿಯಿಂದ (ಡಿಎಂಇಒ) ದೇಶದಾದ್ಯಂತ ‘ಜ್ಞಾನಭಾರತ್‌ ಮಿಷನ್‌’ ಅನುಷ್ಠಾನಗೊಳಿಸಲಾಗುತ್ತಿದ್ದು, ಹಸ್ತಪ್ರತಿಗಳ ವಿವರವನ್ನು ಸಂಗ್ರಹಿಸಲಾಗಿದೆ. ರಾಜ್ಯದಲ್ಲಿ ಒಟ್ಟು 1,20,835 ಹಸ್ತಪ್ರತಿಗಳನ್ನು ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಏನಿದು ಯೋಜನೆ?: 

ADVERTISEMENT

ದೇಶದಾದ್ಯಂತ ಲಭ್ಯವಿರುವ, ಕೈಬರಹದ ಪುರಾತನ ಪಠ್ಯಗಳು, ಹಸ್ತಪ್ರತಿಗಳು, ದಾಖಲೆಗಳ ಸಮೀಕ್ಷೆ ಹಾಗೂ ಸಂರಕ್ಷಣೆಗಾಗಿ ಡಿಜಿಟಲೀಕರಣ ಮಾಡುವ ಕಾರ್ಯ ‘ಜ್ಞಾನಭಾರತ್‌ ಮಿಷನ್‌’  ಅಡಿ ನಡೆದಿದೆ.  ಭವಿಷ್ಯದ ಪೀಳಿಗೆಗಾಗಿ ಜ್ಞಾನ ಸಂಪತ್ತಿನ ಸಂರಕ್ಷಣೆಗೆ ಡಿಜಿಟಲೀಕರಣದ ರಕ್ಷೆ ಪಡೆಯಲಾಗುತ್ತಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದಿದ್ದ 5ನೇ ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನದಲ್ಲಿ ಚರ್ಚೆಯಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಎಲ್ಲ ವಿಶ್ವವಿದ್ಯಾಲಯಗಳ ಕುಲಸಚಿವರಿಗೂ ಪತ್ರ ಬರೆದು, ಹಸ್ತಪ್ರತಿಗಳ ಮಾಹಿತಿ ಪಡೆದುಕೊಂಡಿದ್ದಾರೆ.

ವೆಬ್, ಪೋರ್ಟಲ್‌: 

‘ರಾಷ್ಟ್ರೀಯ ಸಮೀಕ್ಷೆಯ ಮೂಲಕ ರಾಜ್ಯಗಳಲ್ಲಿರುವ ಹಸ್ತಪ್ರತಿಗಳ ದಾಖಲೀಕರಣಕ್ಕಾಗಿ ‘ಜ್ಞಾನಭಾರತ್‌ ವೆಬ್‌ ಮತ್ತು ಮೊಬೈಲ್‌ ಪೋರ್ಟಲ್‌’ ಅಭಿವೃದ್ಧಿಪಡಿಸಲಾಗಿದೆ. ದೇಣಿಗೆ ಮೂಲಕ ಹಸ್ತಪ್ರತಿಗಳ ಸಂಗ್ರಹಣೆಗೆ ಉದ್ದೇಶಿಸಲಾಗಿದೆ. ರಾಷ್ಟ್ರೀಯ ಹಸ್ತಪ್ರತಿಗಳ ಮಹೋತ್ಸವ, ವಸ್ತುಪ್ರದರ್ಶನ ಆಯೋಜನೆ, ಪಾಡ್‌ಕಾಸ್ಟ್‌ ಮೂಲಕ ಪ್ರಚಾರ, ಅಂತರರಾಷ್ಟ್ರೀಯ ಸಮ್ಮೇಳನ ಆಯೋಜನೆಗೆ ಉದ್ದೇಶಿಸಲಾಗಿದೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

‘ಹಸ್ತಪ್ರತಿ ಸಂಗ್ರಹ ಕಾರ್ಯವು ವಿಶ್ವದ ಅತಿದೊಡ್ಡದು ಮತ್ತು ಅತ್ಯಂತ ಮಹತ್ವದ್ದು. ಪೂರ್ವಜರ ಬೂರ್ಜಪತ್ರ, ತಾಳೆಗರಿ, ಕಾಗದ ಹಾಗೂ ಕಡತಗಳ ಬರವಣಿಗೆ ಪ್ರಮುಖ ದಾಖಲೆಗಳಾಗಿವೆ. ರಾಜ್ಯದ ಹಸ್ತಪ್ರತಿಗಳು ಕನ್ನಡ, ತುಳು, ಮೋದಿ (ತಿಗಳಾರಿ), ದೇವನಾಗರಿ, ಉರ್ದು, ಸಂಸ್ಕೃತ, ತೆಲುಗು, ಪರ್ಷಿಯನ್‌, ಇಂಗ್ಲಿಷ್ ಭಾಷೆಗಳಲ್ಲಿ ಇರುವುದನ್ನು ಗುರುತಿಸಲಾಗಿದೆ. ಹಸ್ತಪ್ರತಿ ಸಂರಕ್ಷಣೆಯು ಸಾಂಸ್ಕೃತಿಕ ಪರಂಪರೆ ರಕ್ಷಿಸುವ ಪ್ರಕ್ರಿಯೆಗಳಾಗಿವೆ’ ಎಂದು ತಿಳಿಸಿದ್ದಾರೆ.

ಒಂದೇ ವೇದಿಕೆಯಲ್ಲಿ:

‘ಹಸ್ತಪ್ರತಿಗಳ ಸಂರಕ್ಷಣೆಯಲ್ಲಿ ಲ್ಯಾಮಿನೇಷನ್‌, ಆಮ್ಲೀಕರಣವನ್ನು ಕಡಿಮೆ ಮಾಡುವುದು ಹಾಗೂ ಪರಿಸರ ರಕ್ಷಣೆಯ ತಂತ್ರಗಳನ್ನು ಅಳವಡಿಸಲಾಗುತ್ತದೆ. ಡಿಜಿಟಲೀಕರಣವು ವ್ಯಾಪಕ ಪ್ರವೇಶ, ಹುಡುಕಾಟ, ಸಮಕಾಲೀನ ಸಂಗ್ರಹಣೆಗಾಗಿ ಡಿಜಿಟಲ್‌ ಪ್ರತಿಗಳನ್ನು ಸೃಷ್ಟಿಸಲಿದೆ. ಭೌತಿಕ ನಿರ್ವಹಣೆ ಸಾಧ್ಯವಾಗದ ಮೂಲ ಪ‍್ರತಿಗಳನ್ನು ರಕ್ಷಿಸುತ್ತದೆ’ ಎಂದಿದ್ದಾರೆ.

‘ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಒಂದೇ ರಾಷ್ಟ್ರೀಯ ವೇದಿಕೆ ಮೂಲಕ ಸಾರ್ವಜನಿಕ ಪ್ರವೇಶಕ್ಕೆ ಅನುವು ಮಾಡಿಕೊಡಲು ಡಿಜಿಟಲೀಕರಣ ಮತ್ತು ಸಂಯೋಜನೆಗೆ ಕೇಂದ್ರ ಸಂಸ್ಕೃತಿ ಸಚಿವಾಲಯ ಸಮಗ್ರ ಯೋಜನೆ ರೂಪಿಸುತ್ತಿದೆ’ ಎಂದು ಶಾಲಿನಿ ರಜನೀಶ್ ಮಾಹಿತಿ ನೀಡಿದ್ದಾರೆ.  

ಶಾಲಿನಿ ರಜನೀಶ್ 
ಎಂ.ಕೆ. ಸವಿತಾ

‘ಜ್ಞಾನಭಾರತ್‌ ಮಿಷನ್‌’ ಅನುಷ್ಠಾನ ಸಂರಕ್ಷಣೆಗಾಗಿ ಸರ್ಕಾರದಿಂದ ಕ್ರಮ ಇವುಗಳಲ್ಲಿವೆ ಅಪೂರ್ವ ಜ್ಞಾನಸಂಪತ್ತು

ಲಭ್ಯವಿರುವ ಹಸ್ತಪ್ರತಿಗಳಲ್ಲಿರುವ ಜ್ಞಾನ ವಿವರವನ್ನು ಉಳಿಸಲು ಸಂರಕ್ಷಣೆ ಮತ್ತು ಡಿಜಿಟಲೀಕರಣ ಅತ್ಯಗತ್ಯವಾಗಿದೆ
ಶಾಲಿನಿ ರಜನೀಶ್ ಸರ್ಕಾರದ ಮುಖ್ಯ ಕಾರ್ಯದರ್ಶಿ
ಅಪ್ರಕಟಿತ ಹಸ್ತಪ್ರತಿಗಳಲ್ಲಿರುವ ಕೃತಿಗಳ ಅಧ್ಯಯನಕ್ಕಾಗಿ ಮೈಸೂರು ವಿ.ವಿಯ ಒಆರ್‌ಐ ಶೃಂಗೇರಿಯ ಶಾರದಾ ಪೀಠದೊಂದಿಗೆ ಒಪ್ಪಂದ ಮಾಡಿಕೊಂಡಿದೆ
ಎಂ.ಕೆ.ಸವಿತಾ ಕುಲಸಚಿವೆ ಮೈಸೂರು ವಿ.ವಿ

‘ಜ್ಞಾನಭಾರತ್‌ ಮಿಷನ್‌’ ಅನುಷ್ಠಾನ

ಸಂರಕ್ಷಣೆಗಾಗಿ ಸರ್ಕಾರದಿಂದ ಕ್ರಮ

ಇವುಗಳಲ್ಲಿವೆ ಅಪೂರ್ವ ಜ್ಞಾನಸಂಪತ್ತು

ರಾಜ್ಯದ ವಿವಿಧ ವಿವಿ, ಸಂಸ್ಥೆಗಳಲ್ಲಿರುವ ಹಸ್ತಪ್ರತಿಗಳ ವಿವರ

ಹೆಸರು;ಸಂಖ್ಯೆ

ಮೈಸೂರಿನ ಪುರಾತತ್ವ ಸಂಗ್ರಹಾಲಯ;214

ಮೈಸೂರು ವಿವಿಯ ಒಆರ್‌ಐ;70,000

ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ;7,350

ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಕೃತ ಸಂಶೋಧನಾ ಪ್ರತಿಷ್ಠಾನ;7,000

ಕನ್ನಡ ವಿಶ್ವವಿದ್ಯಾಲಯ;6,000

ಮಂಡ್ಯದ ಮೇಲುಕೋಟೆಯ ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸ್ಥೆ;5,180

ಉಡುಪಿಯ ಪುತ್ತಿಗೆ ಮಠ;4,000

ಕರ್ನಾಟಕ ವಿ.ವಿಯ ಕೆಆರ್‌ಐ;4,000

ಬೆಂಗಳೂರು ವಿ.ವಿ;3,500

ಶ್ರವಣಬೆಳಗೊಳದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ;2,687

ಬೆಂಗಳೂರಿನ ವ್ಯಾಸ ಮಾಧವ ಸಂಶೋಧನಾ ಪ್ರತಿ್ಷ್ಠಾನ;2,000

ಶಿವಮೊಗ್ಗದ ಕೆಳದಿ ಮ್ಯೂಸಿಯಂ;1,600

ಕುಕ್ಕೆಯ ಸುಬ್ರಹ್ಮಣ್ಯ ಮಠ;1,500

ಬೆಂಗಳೂರಿನ ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನ;1,463

ಬೆಂಗಳೂರಿನ ಪೂರ್ಣಪ್ರಜ್ಞ ಸಂಶೋಧನಾ ಮಂದಿರ;1,200

ಉಡುಪಿಯ ಪಲಿಮಾರು ಮಠ;670

ಉಡುಪಿಯ ಸೋದೆ ವಾದಿವಾಜ ಮಠ;520

ಹುಬ್ಬಳ್ಳಿಯ ಮೂರುಸಾವಿರ ಮಠ;400

ಬೆಂಗಳೂರು ಕಸಾಪ;336

ಕರ್ನಾಟಕ ಸಂಸ್ಕೃತ ವಿ.ವಿ;200

ಉಡುಪಿಯ ಕಣಿಯೂರು ಮಠ;170

ಮೈಸೂರು ಸಂಸ್ಕೃತ ಶಾಲೆ;150

ಹನಸೋಗೆ ಮಾಧವ ಮಠ;120

ಮಂಗಳೂರಿನ ಚಿತ್ರಾಪುರ ವಿದ್ಯಾಧ್ವಜ ಮಠ;45

ಕುವೆಂಪು ವಿಶ್ವವಿದ್ಯಾಲಯ;10

ಒಟ್ಟು;1,20,835

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.