
ಮೈಸೂರು: ‘ಈಗಿನ ಡಿಜಿಟಲ್ ಯುಗದಲ್ಲೂ ಪತ್ರಿಕೋದ್ಯಮದಲ್ಲಿ ನೈತಿಕತೆ ಉಳಿದಿದೆ’ ಎಂದು ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಪ್ರತಿಪಾದಿಸಿದರು.
ಇಲ್ಲಿನ ಮಹಾರಾಜ ಕಾಲೇಜು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಗುರುವಾರ ಏರ್ಪಡಿಸಿದ್ದ ‘ರೂಸಾ 2.0’ ಪ್ರಾಯೋಜಿತ’ ಶೈಕ್ಷಣಿಕ ಕಾರ್ಯಾಗಾರದ ತಾಂತ್ರಿಕ ಅಧಿವೇಶನದಲ್ಲಿ ಮಾತನಾಡಿದರು.
‘ಮುಖ್ಯವಾಹಿನಿಯ ಪತ್ರಿಕೆಗಳು ಹಾಗೂ ಪತ್ರಕರ್ತರು ಯಾವುದೇ ದಾಖಲೆಗಳಿಲ್ಲದೇ ಸುದ್ದಿಗಳನ್ನು ಮಾಡುವುದಿಲ್ಲ. ಹೀಗಾಗಿ ಇನ್ನೂ ಜನರಿಗೆ ಮಾಧ್ಯಮಗಳ ಬಗ್ಗೆ ನಂಬಿಕೆ, ವಿಶ್ವಾಸವಿದೆ. ಅದನ್ನು ಉಳಿಸಿಕೊಂಡು ಹೋಗಬೇಕಾಗಿದೆ’ ಎಂದರು.
‘ಸ್ವಾತಂತ್ರ್ಯಪೂರ್ವದಲ್ಲಿ ಕಲ್ಲಚ್ಚು, ನಂತರ ಅಚ್ಚುಮೋಳೆ ಕಾಲ ಇತ್ತು. ನಂತರ ಕಂಪ್ಯೂಟರ್ ಬಂದಿತು. ಪ್ರಸ್ತುತ ಡಿಜಿಟಲ್ ಮಾಧ್ಯಮಕ್ಕೆ ತಕ್ಕಂತೆ ಪತ್ರಿಕೆಗಳು ಕೂಡ ಬದಲಾಗಿವೆ. ಡಿಜಿಟಲ್ ಮಾಧ್ಯಮದ ಮೂಲಕವು ಜನರಿಗೆ ಸುದ್ದಿಯನ್ನು ಶರವೇಗದಲ್ಲಿ ತಲುಪಿಸುತ್ತಿವೆ’ ಎಂದು ಹೇಳಿದರು.
‘ಎಲ್ಲಾ ಕ್ಷೇತ್ರಗಳಲ್ಲೂ ಒಳಿತು, ಕೆಡಕು ಇರುತ್ತದೆ. ಹೀಗಾಗಿ ಎಲ್ಲಾ ಪತ್ರಿಕೆಗಳು ಹಾಗೂ ಪತ್ರಕರ್ತರನ್ನು ಒಂದೇ ರೀತಿ ನೋಡುವ ಅಗತ್ಯವಿಲ್ಲ’ ಎಂದರು.
‘ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು, ಭಾಷೆ ಹಾಗೂ ಕಂಪ್ಯೂಟರ್ ಕೌಶಲ ಇರುವವರಿಗೆ ಮಾಧ್ಯಮ ಕ್ಷೇತ್ರಗಳಲ್ಲಿ ಉದ್ಯೋಗಕ್ಕೆ ಕೊರತೆ ಇಲ್ಲ. ಪತ್ರಿಕೆಗಳನ್ನು ಓದಬೇಕು. ಜೊತೆಗೆ ಸಾಹಿತ್ಯ ಕೃತಿಗಳನ್ನು ಓದಬೇಕು’ ಎಂದು ಸಲಹೆ ನೀಡಿದರು.
ಪತ್ರಕರ್ತ ಕೆ.ಪಿ. ನಾಗರಾಜ್ ಮಾತನಾಡಿದರು. ಪತ್ರಿಕೋದ್ಯಮ ವಿಭಾಗದ ಅಧ್ಯಾಪಕರಾದ ಗೋಪಾಲ್, ಶ್ವೇತಾ ಎಂ. ಹನ್ಸ್, ಕೇಶವಮೂರ್ತಿ, ಎನ್. ನವೀನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.