ADVERTISEMENT

ಜೆಎಸ್‌ಎಸ್‌ ವಿವಾಹ ವೇದಿಕೆ: ನವೀಕೃತ ಜಾಲತಾಣ

ಸಂಬಂ ಬೆಸೆಯಲು ಆಯ್ಕೆಗಳಿಗೆ ಅವಕಾಶ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 7:29 IST
Last Updated 21 ಅಕ್ಟೋಬರ್ 2025, 7:29 IST
ಮೈಸೂರಿನಲ್ಲಿ ಜೆಎಸ್‌ಎಸ್ ವಿವಾಹವೇದಿಕೆಯ ನವೀಕೃತ ಜಾಲತಾಣವನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅನಾವರಣಗೊಳಿಸಿದರು
ಮೈಸೂರಿನಲ್ಲಿ ಜೆಎಸ್‌ಎಸ್ ವಿವಾಹವೇದಿಕೆಯ ನವೀಕೃತ ಜಾಲತಾಣವನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅನಾವರಣಗೊಳಿಸಿದರು   

ಮೈಸೂರು: ‘ಜೆಎಸ್‌ಎಸ್ ವಿವಾಹವೇದಿಕೆಯ ನವೀಕೃತ ಜಾಲತಾಣ (ವೆಬ್‌ಸೈಟ್)ವು  
ನೂತನ ಸಂಬಂಧಗಳನ್ನು ಬೆಸೆಯಲು ಆಯ್ಕೆಗಳಿಗೆ ಅವಕಾಶ ಕಲ್ಪಿಸಲಿದೆ’ ಎಂದು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ನಗರದ ಜೆಎಸ್‌ಎಸ್ ಆಸ್ಪತ್ರೆಯ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಜೆಎಸ್‌ಎಸ್ ವಿವಾಹವೇದಿಕೆಯ ನವೀಕೃತ ಜಾಲತಾಣವನ್ನು (https://jssmatrimony.com/login) ಈಚೆಗೆ ಅನಾವರಣಗೊಳಿಸಿ ಅವರು ಮಾತನಾಡಿದರು. 

‘ಜೆಎಸ್‌ಎಸ್ ವಿವಾಹ ವೇದಿಕೆ 30 ವರ್ಷಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಮೈಸೂರು, ಬೆಂಗಳೂರಿನಲ್ಲಿ ವಧು–ವರರ ಸಮಾವೇಶಗಳನ್ನು ಏರ್ಪಡಿಸಿಕೊಂಡು ಬರಲಾಗುತ್ತಿದೆ. ಚಾಮರಾಜನಗರದಲ್ಲೂ ನಡೆಸಲು ವ್ಯವಸ್ಥೆ ಮಾಡಲಾಗುತ್ತಿದೆ’ ಎಂದರು.

ADVERTISEMENT

‘ವಿವಾಹದ ಆಯ್ಕೆಯ ವಿಧಾನಗಳು ಕಾಲಮಾನಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ. ಇಂದಿನ ದಿನಗಳಲ್ಲಿ ಸಮಾನ ಮನಸ್ಕರು ಮತ್ತು ಸಮಾನ ಆಲೋಚನೆ ಹೊಂದಿರುವವರನ್ನು ಸಂಗಾತಿಗಳಾಗಿ ಪಡೆಯಲು ಇಚ್ಛಿಸುತ್ತಾರೆ. ಬದಲಾದ ಕಾಲಘಟ್ಟದಲ್ಲಿ ವಿವಾಹ ವೇದಿಕೆಯ ಜಾಲತಾಣಗಳ ಸಹಾಯದೊಂದಿಗೆ ವಿವಾಹಗಳು ನಿಶ್ಚಯಗೊಳ್ಳುತ್ತಿವೆ. ಹೀಗಾಗಿ, ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಜಾಲತಾಣ ರೂಪಿಸಲಾಗಿದೆ’ ಎಂದು ಹೇಳಿದರು.

ಗ್ರಾಮಾಂತರ ಪ್ರದೇಶಗಳಿಗೆ ತಲುಪಲು: ‘ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲೂ ರೂಪಿಸಿ ಗ್ರಾಮಾಂತರ ಪ್ರದೇಶಗಳಿಗೂ ತಲುಪುವಂತೆ ಮಾಡಲು ಸೂಚಿಸಲಾಗಿದೆ’ ಎಂದು ತಿಳಿಸಿದರು.

ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ. ಬೆಟಸೂರಮಠ, ‘ಹಿಂದೆಲ್ಲಾ ಸಾಂಪ್ರದಾಯಿಕವಾಗಿ ಜೀವನ ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು. ಈಗ ತಂತ್ರಜ್ಞಾನದ ಆವಿಷ್ಕಾರದಿಂದ ಅದು ಬದಲಾಗಿದೆ. ಆನ್‌ಲೈನ್ ವಿವಾಹ ಜಾಲತಾಣಗಳ ಮೂಲಕ ಮದುವೆಗಳು ನಿಶ್ಚಯವಾಗುತ್ತಿವೆ’ ಎಂದರು.

ಜೆಎಸ್‌ಎಸ್‌ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ಉಪಕುಲಪತಿ ಡಾ.ಎಚ್‌. ಬಸವನಗೌಡಪ್ಪ, ‘ಜೀವನದಲ್ಲಿ ವಿವಾಹ ಪ್ರಮುಖವಾದ ಘಟ್ಟ. ಲಿಂಗಾನುಪಾತದಲ್ಲಿ ವ್ಯತ್ಯಾಸ ಇರುವುದರಿಂದಾಗಿ ಸರಿಯಾದ ವಯಸ್ಸಿಗೆ ವಿವಾಹಗಳು ಏರ್ಪಡುತ್ತಿಲ್ಲ. ಇಂತಹ ವೆಬ್‌ಸೈಟ್‌ಗಳು ಮದುವೆ ನಿಶ್ಚಯವಾಗಲು  ಸಹಾಯಕವಾಗಲಿದೆ. ವಧು–ವರರಿಗೆ ಸಾಕಷ್ಟು ನೆರವಾಗಲಿದೆ’ ಎಂದು ತಿಳಿಸಿದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್‌, ನಿರ್ದೇಶಕ ಆರ್. ಮಹೇಶ್‌ ಇದ್ದರು.

ಎಸ್. ಶಿವಕುಮಾರಸ್ವಾಮಿ ಸ್ವಾಗತಿಸಿದರು. ವಿವಾಹ ವೇದಿಕೆಯ ಸ್ವಯಂಸೇವಕಿ ಎನ್. ಮಲ್ಲಿಕಾ ಮಾತನಾಡಿದರು. ವೈಶಾಲಿ ಮತ್ತು ಕುಶಲ ಪ್ರಾರ್ಥಿಸಿದರು. ಪಲ್ಲವಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.