ADVERTISEMENT

ಸರ್ಕಾರಿ ಶಾಲೆಗಳಲ್ಲಿ ಮೊಬೈಲ್‌ ಆಧಾರಿತ ಹಾಜರಾತಿ ವ್ಯವಸ್ಥೆ ‘ಕಾಮ್ಸ್‌’

ಎಂ.ಮಹೇಶ
Published 23 ಡಿಸೆಂಬರ್ 2025, 5:33 IST
Last Updated 23 ಡಿಸೆಂಬರ್ 2025, 5:33 IST
ಮೈಸೂರು ತಾಲ್ಲೂಕಿನ ಕೀಳನಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೋಟ
ಮೈಸೂರು ತಾಲ್ಲೂಕಿನ ಕೀಳನಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೋಟ   

ಮೈಸೂರು: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು, ಶಿಕ್ಷಕಿಯರು ಹಾಗೂ ಸಿಬ್ಬಂದಿಯ ಹಾಜರಾತಿ ಖಾತ್ರಿಗೆ ಶಾಲಾ ಶಿಕ್ಷಣ ಇಲಾಖೆಯು ತಂತ್ರಜ್ಞಾನದ ಮೊರೆ ಹೋಗಿದೆ. 

ಮೊಬೈಲ್‌ಫೋನ್‌ ಆಧಾರಿತ ಹಾಜರಾತಿ ವ್ಯವಸ್ಥೆ (ಕೆಎಎಎಂಎಸ್–ಕಾಮ್ಸ್‌)ಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಈ ಬಗ್ಗೆ ಜಿಲ್ಲೆಯ ಬಿಇಒಗಳಿಗೆ ಪತ್ರ ಬರೆದಿರುವ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ (ಆಡಳಿತ) ಉದಯ್‌ಕುಮಾರ್‌, ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ತಂತ್ರಾಂಶ ಬಳಕೆ ಕುರಿತು ಪಿಪಿಟಿಯನ್ನೂ ಒದಗಿಸಲಾಗಿದೆ. ಜಿಲ್ಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯಡಿ ಒಟ್ಟು 2,094 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿವೆ. 263 ಅನುದಾನಿತ ಶಾಲೆಗಳಿವೆ.

ADVERTISEMENT

ಈಗಾಗಲೇ ಎಲ್ಲ ಶಾಲೆಗಳ ಅಕ್ಷಾಂಶ ಮತ್ತು ರೇಖಾಂಶಗಳು ನಮೂದಾಗಿರುವುದರಿಂದಾಗಿ ‘ಕಾಮ್ಸ್‌’ ಅನುಷ್ಠಾನಕ್ಕೆ ಎಲ್ಲ ಸರ್ಕಾರಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯಶಿಕ್ಷಕರು, ಸಹಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಅನುಷ್ಠಾನಕ್ಕೆ ಕ್ರಮ ವಹಿಸಬೇಕು. ಕಡ್ಡಾಯವಾಗಿ ತಂತ್ರಾಂಶವನ್ನು ಮೊಬೈಲ್‌ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರತಿ ನೌಕರರೂ ಹೆಸರನ್ನು ನೋಂದಾಯಿಸಿಕೊಂಡು ಪ್ರತಿದಿನ ಹಾಜರಾತಿಯನ್ನು ಆ ತಂತ್ರಾಂಶದಲ್ಲೇ ಲಾಗಿನ್‌ ಹಾಗೂ ಲಾಗ್‌ಔಟ್‌ ಆಗುವ ಮೂಲಕ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. ಡಿ.20ರಿಂದಲೇ ಇದು ಜಾರಿಗೆ ಬಂದಿದೆ.

ವರದಿ ಸಲ್ಲಿಸಲು ಸೂಚನೆ: 

‘ನಿಮ್ಮ ತಾಲ್ಲೂಕಿನ ಎಲ್ಲ ಶಾಲೆಗಳಲ್ಲಿ ಮೊಬೈಲ್‌ಫೋನ್‌ ಹಾಜರಾತಿ ವ್ಯವಸ್ಥೆಯಲ್ಲಿ ಹಾಜರಾತಿ ನಮೂದಿಸುತ್ತಿರುವ ಬಗ್ಗೆ ವರದಿ ಪಡೆದು, ನಿರಂತರ ಅನುಪಾಲನೆ ಕೈಗೊಂಡು ಜಿಲ್ಲಾ ಕಚೇರಿಗೆ ವರದಿ ಮಾಡಬೇಕು’ ಎಂದು ಬಿಇಒಗಳಿಗೆ ಸೂಚಿಸಲಾಗಿದೆ. ತಂತ್ರಾಂಶದ ಬಳಕೆಯಲ್ಲಿ ತೊಂದರೆ, ಸಮಸ್ಯೆ ಕಂಡುಬಂದರೆ ನಿರ್ವಹಿಸಲೆಂದೇ ತಾಲ್ಲೂಕು ಕೆಎಎಎಂಎಸ್ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ’ ಎಂದು ತಿಳಿಸಲಾಗಿದೆ.

ಈ ಹೊಸ ಕ್ರಮದಿಂದಾಗಿ ಶಿಕ್ಷಕರು ಸೇರಿದಂತೆ ಎಲ್ಲ ನೌಕರರೂ ಅಂತರ್ಜಾಲ ಸಂಪರ್ಕ ಸಹಿತ ಸ್ಮಾರ್ಟ್‌ಫೋನ್‌ ಹೊಂದುವುದು ಕಡ್ಡಾಯವಾಗಿದೆ. ‘ತಾಲ್ಲೂಕು ಕೇಂದ್ರದಿಂದ ದೂರದಲ್ಲಿರುವುದು, ಕಾಡಂಚಿನಲ್ಲಿರುವುದು ಸೇರಿದಂತೆ ವಿವಿಧೆಡೆ ನೆಟ್‌ವರ್ಕ್‌ ಸಮಸ್ಯೆ ಎದುರಿಸುತ್ತಿರುವ ಸರ್ಕಾರಿ ಶಾಲೆಗಳ ಶಿಕ್ಷಕರು ಹೇಗೆ ನಿರ್ವಹಿಸಬೇಕು ಎಂಬುದು ಸವಾಲಾಗಿ ಪರಿಣಮಿಸಲಿದೆ’ ಎನ್ನುತ್ತಾರೆ ಕೆಲವು ಶಿಕ್ಷಕರು.

‘ಹೊಸ ತಂತ್ರಾಂಶ ಬಳಕೆಯ ಕುರಿತು ಇಲಾಖೆಯಿಂದ ಮಾಹಿತಿ ನೀಡಲಾಗಿದೆ. ಅದನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಹಾಜರಾತಿ ನಿರ್ವಹಿಸಲಾಗುವುದು. ನಿಯಮಿತವಾಗಿ ಹಾಜರಾಗುವವರಿಗೆ ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಸ್ವಾಗತಾರ್ಹ ಕ್ರಮವಿದು’ ಎಂದು ಎಚ್‌.ಡಿ. ಕೋಟೆ ತಾಲ್ಲೂಕು ಚಾಮಲಾಪುರ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಸಾಲುಂಡಿ ದೊರೆಸ್ವಾಮಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.‌

ಯಾವ ಕಾರಣದಿಂದ ಜಾರಿ?

‘ಕೆಲವು ಕಡೆಗಳಲ್ಲಿ ಶಿಕ್ಷಕರು ಶಾಲೆಗಳಿಗೆ ಬರುವುದು ವಿಳಂಬ ಮಾಡುತ್ತಾರೆ ನಿಗದಿತ ಸಮಯಕ್ಕಿಂತಲೂ ಮುಂಚೆಯೇ ಹೊರಟುಬಿಡುತ್ತಾರೆ. ಇದರಿಂದ ಶಾಲಾ ಚಟುವಟಿಕೆಯ ಮೇಲೆ ತೊಂದರೆ ಉಂಟಾಗುತ್ತದೆ’ ಎಂಬ ದೂರುಗಳು ಅಲ್ಲಲ್ಲಿ ಕೇಳಿಬರುತ್ತಿದ್ದವು. ಹೀಗಾಗಿ ಹಾಜರಾತಿಯಲ್ಲಿ ಶಿಸ್ತು ತರಲು ಮೊಬೈಲ್‌ ತಂತ್ರಾಂಶದ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ’ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು. 

1770 ಹುದ್ದೆಗಳು ಖಾಲಿ

ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ (ಅನುದಾನಿತವೂ ಸೇರಿ) ಒಟ್ಟು 10727 ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು 8957 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 1770 ಹುದ್ದೆಗಳು ಖಾಲಿ ಇವೆ. 2025–26ನೇ ಸಾಲಿಗೆ ಪ್ರಾಥಮಿಕ ಶಾಲೆಗಳಿಗೆ 1145 ಅತಿಥಿ ಶಿಕ್ಷಕರ ಬೇಡಿಕೆ ಇದ್ದು ಅದರಲ್ಲಿ 1008 ಮಂದಿಯನ್ನು ತೆಗೆದುಕೊಳ್ಳಲು ಮಂಜೂರಾತಿಯಾಗಿದೆ. ಪ್ರೌಢಶಾಲೆಗಳಿಗೆ 288 ಅತಿಥಿ ಶಿಕ್ಷಕರ ಬೇಡಿಕೆ ಇದ್ದು ಅಷ್ಟೂ ಮಂಜೂರಾಗಿದೆ. ಜಿಲ್ಲೆಯಲ್ಲಿ ಸರ್ಕಾರಿ ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಒಟ್ಟು 397669 ಮಕ್ಕಳು (1ರಿಂದ 10ನೇ ತರಗತಿ) ದಾಖಲಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.