ಮೈಸೂರು: ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಹಿನ್ನೀರಿನ ಪರಿಸರ ಸೂಕ್ಷ್ಮ ವಲಯದಲ್ಲಿ ರೆಸಾರ್ಟ್‌ಗಳು ಅಕ್ರಮವಾಗಿ ತಲೆ ಎತ್ತುತ್ತಿವೆ ಎಂಬ ಆರೋಪಗಳು ಜೋರಾಗಿದ್ದು, ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ‘ಕಬಿನಿ ಉಳಿಸಿ’, ‘ವನಸಿರಿ ನಾಡನು ಉಳಿಸಿ’ ಅಭಿಯಾನ ಆರಂಭವಾಗಿದೆ.
ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಪರಿಸರ ಪ್ರಿಯರು, ರೈತರು, ಯುವ ಸಮುದಾಯವು ಅಭಿಯಾನದ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲದೇ, ಚಾಮರಾಜನಗರ, ಕೊಡಗು, ಕೇರಳದ ವಯನಾಡ್‌ನ ಯುವಕರೂ ಪೋಸ್ಟ್ ಮಾಡುತ್ತಿದ್ದು, ರೆಸಾರ್ಟ್‌ಗಳ ವಿಡಿಯೊಗಳನ್ನು ಹರಿಬಿಟ್ಟಿದ್ದಾರೆ.
‘ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳ ಮಧ್ಯದಲ್ಲಿರುವ ಕಬಿನಿ ನದಿ ಹಿನ್ನೀರು ವನ್ಯಜೀವಿಗಳ ಕಾರಿಡಾರ್ ಆಗಿದೆ. ನೀಲಗಿರಿ ಜೀವವೈವಿಧ್ಯ ಪ್ರದೇಶದ ಆಯಕಟ್ಟಿನ ಜಾಗದಲ್ಲಿರುವ ಈ ಪ್ರದೇಶದಲ್ಲಿ ರೆಸಾರ್ಟ್‌ಗಳಿಗೆ ಅವಕಾಶ ಕೊಡುತ್ತಿರುವುದೇಕೆ’ ಎಂದೂ ಪ್ರಶ್ನಿಸಿದ್ದಾರೆ.
‘ದೇಶದಲ್ಲೇ ಅತಿ ಹೆಚ್ಚು ಹುಲಿ ಹಾಗೂ ಆನೆಗಳ ಸಾಂದ್ರತೆ ಇರುವ ಅರಣ್ಯಗಳಲ್ಲಿ ನಾಗರಹೊಳೆಗೆ ಅಗ್ರಸ್ಥಾನವಿದೆ. ಪರಿಸರ ಸೂಕ್ಷ್ಮ ವಲಯದಲ್ಲಿ ಪ್ರವಾಸೋದ್ಯಮಕ್ಕೆ ಅಕ್ರಮವಾಗಿ ಅವಕಾಶ ನೀಡಿದರೆ, ವನ್ಯಜೀವಿಗಳ ಆವಾಸಸ್ಥಾನಕ್ಕೆ ತೊಂದರೆಯಾಗಲಿದೆ’ ಎಂಬುದು ರೈತರ ಆತಂಕವಾಗಿದೆ.
‘ಕಬಿನಿ ಹಿನ್ನೀರಿನಂತೆಯೇ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ತಾರಕಾ ಜಲಾಶಯದ ಹಿನ್ನೀರಿನಲ್ಲಿ ಅರಣ್ಯದ ಗಡಿಯಿಂದ 1 ಕಿ.ಮೀ ಒಳಗೆ ಹೋಂಸ್ಟೇ, ರೆಸಾರ್ಟ್ ತಲೆ ಎತ್ತಿದ್ದು, ಪ್ರಭಾವಿ ಸಚಿವರು, ಅಧಿಕಾರಿಗಳು ಬೆಂಬಲವಾಗಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಪರಿಸರ ಕಾರ್ಯಕರ್ತರೊಬ್ಬರು ತಿಳಿಸಿದರು.
‘ಕಬಿನಿ ಹಿನ್ನೀರಿನಲ್ಲಿ ಅಕ್ರಮ ರೆಸಾರ್ಟ್ ನಿರ್ಮಾಣವಾಗಿರುವುದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಅದರಲ್ಲಿ ನನ್ನ ಪಾತ್ರವಿಲ್ಲ’ ಎಂದು ಶಾಸಕ ಹಾಗೂ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಅಧ್ಯಕ್ಷ ಅನಿಲ್ ಚಿಕ್ಕಮಾದು ಸ್ಪಷ್ಟಪಡಿಸಿದರು. ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ‘ರೆಸಾರ್ಟ್ ನಿರ್ಮಾಣಕ್ಕೆ ಇಲಾಖೆಗಳಿಂದ ಅನುಮತಿ ಪಡೆದಿರಬೇಕು. ಅಕ್ರಮವಿದ್ದರೆ ಜಿಲ್ಲಾಧಿಕಾರಿ ಅರಣ್ಯಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಕಾನೂನಾತ್ಮಕವಾಗಿ ಅದನ್ನು ನಾಶಗೊಳಿಸುವ ಕೆಲಸ ಮಾಡಲಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.