ADVERTISEMENT

ಮೂಡಿತು ‘ಕನಕಪ್ರಜ್ಞೆ’.. ಹಬ್ಬಿತು ಅರಿವಿನ ಬೆಳಕು..

‘ಪ್ರಜಾವಾಣಿ’ ಸಹಯೋಗದಲ್ಲಿ ‘ಮಾಧ್ಯಮದಲ್ಲಿ ಕನಕಪ್ರಜ್ಞೆ’ ವಿಚಾರ ಸಂಕಿರಣ L ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜನೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 4:50 IST
Last Updated 31 ಡಿಸೆಂಬರ್ 2025, 4:50 IST
<div class="paragraphs"><p>ಮೈಸೂರಿನಲ್ಲಿ&nbsp;‘ಪ್ರಜಾವಾಣಿ’ಯು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಮಾಧ್ಯಮದಲ್ಲಿ ಕನಕಪ್ರಜ್ಞೆ’ ವಿಚಾರ ಸಂಕಿರಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಅವರು ವಿದ್ಯಾರ್ಥಿಗಳಿಗೆ ಪ್ರಮಾಣ ನೀಡಿದರು. </p></div>

ಮೈಸೂರಿನಲ್ಲಿ ‘ಪ್ರಜಾವಾಣಿ’ಯು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಮಾಧ್ಯಮದಲ್ಲಿ ಕನಕಪ್ರಜ್ಞೆ’ ವಿಚಾರ ಸಂಕಿರಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಅವರು ವಿದ್ಯಾರ್ಥಿಗಳಿಗೆ ಪ್ರಮಾಣ ನೀಡಿದರು.

   

ಮೈಸೂರು: ಕನಕದಾಸರ ಕೀರ್ತನೆ, ಕಾವ್ಯಕೃತಿಗಳನ್ನು ಕೇಳುತ್ತಲೇ, ವ್ಯವಸ್ಥೆಯ ವಿರುದ್ಧ ಅವರು ತಳೆದಿದ್ದ ನಿಲುವು, ನಡೆಸಿದ ತಣ್ಣನೆಯ ಕಾವ್ಯ ಪ್ರತಿಭಟನೆ, ಪ‍್ರತಿಕ್ರಾಂತಿಯ ಹೊಳಹುಗಳ ವಿಶ್ಲೇಷಣೆ ಮತ್ತು ಅಪೂರ್ವ ಸಂವಾದಕ್ಕೆ ‘ಮಾಧ್ಯಮದಲ್ಲಿ ಕನಕಪ್ರಜ್ಞೆ’ ವಿಚಾರ ಸಂಕಿರಣಕ್ಕೆ ಬಂದಿದ್ದ ಪ್ರೇಕ್ಷಕರು ಸಾಕ್ಷಿಯಾದರು. 

ನಗರದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ‘ಪ್ರಜಾವಾಣಿ’ಯು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಸಂಕಿರಣವು ‘ಕನಕಪ್ರಜ್ಞೆ’ ಹತ್ತಾರು ಮಾರ್ಗವನ್ನು ತೆರೆದುಕೊಟ್ಟಿತು.  

ADVERTISEMENT

‘ತೊರೆದು ಜೀವಿಸಬಹುದೇ...’ ಸೇರಿದಂತೆ ವಿವಿಧ ಕೀರ್ತನೆ ಹಾಡಿದ ಎಂ.ಮಹಾಲಿಂಗ ಮತ್ತು ತಂಡ, ‘ಹರಿಭಕ್ತಸಾರ’ ಕಾವ್ಯದ ಗಮಕ ವಾಚನ ಮಾಡಿದ ಚಾರ್ವಿ ಸತೀಶ್ ಅವರು ನಾದದ ಅಡಿಪಾಯ ಹಾಕಿಕೊಟ್ಟರೆ, ನಂತರ ಹರಿದದ್ದು ವಿಚಾರಧಾರೆಯ ವೈಭವ. ಸಂಜೆವರೆಗೂ ನಡೆದ ಚರ್ಚೆಗಳಿಂದ ‘ಕನಕ ಪ್ರಜ್ಞೆ’ಯನ್ನು ಎದೆಗಿಳಿಸಿಕೊಂಡ ಸಾರ್ಥಕತೆ ಎಲ್ಲರದ್ದಾಗಿತ್ತು. 

ವಿಸ್ತರಿಸುವ ಪರಿಕಲ್ಪನೆ: ಸಂಕಿರಣ ಉದ್ಘಾಟಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ, ‘ಕನಕಪ್ರಜ್ಞೆ ನಿರಂತರವಾಗಿ ವಿಸ್ತರಿಸುತ್ತಿರುವ ಪರಿಕಲ್ಪನೆಯಾಗಿದೆ. ಕನಕರ ಕಾವ್ಯ, ಬದುಕಿನ ಕಥೆಗಳು, ಕೃತಿಗಳು ಅರಿವಿನ ದಾರಿಯಾಗಿವೆ. ಈಗಲೂ ಕಲಾ ಪ್ರಕಾರಗಳ ಮೂಲಕ ಕನಕ ಅರಿವು ಚಾಚುತ್ತಲೇ ಇದೆ’ ಎಂದರು. 

ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ, ‘ಕನಕರನ್ನು ಭಕ್ತ ಇಲ್ಲವೇ ದಾಸರಾಗಿ ಮಾತ್ರವೇ ನೋಡಲಾಗುತ್ತಿದೆ. ಅವರು ಎಚ್ಚರಿಕೆಯ, ವಿವೇಕದ, ಸಾಮಾಜಿಕ ಪ್ರಜ್ಞೆಯಾಗಿದ್ದಾರೆ. ಅವರೊಬ್ಬ ಮನೋವಿಜ್ಞಾನಿ. ಆದಿಕೇಶವ ಎಂಬುದೇ ಅವರ ಪ್ರಜ್ಞೆಯಾಗಿದೆ. ಸಮಾಜವನ್ನು ನೋಡುವ ಈ ಕನಕನ ಕಿಂಡಿ ಎಲ್ಲರದ್ದಾಗಬೇಕಿದೆ’ ಎಂದರು. 

‘ಪ್ರೀತಿ, ಸ್ನೇಹದ ದೀಪಗಳು ದೇಶದಲ್ಲಿ ಕ್ಷೀಣಿಸುತ್ತಿವೆ. ದ್ವೇಷ, ತಾರತಮ್ಯದ ಬೆಂಕಿ ಪ್ರಬಲವಾಗುತ್ತಿದೆ. ಜಾತಿ– ಧರ್ಮದ ಮೂಲಕ ಚರಿತ್ರೆಯನ್ನು ಕಟ್ಟುವುದು ಮುಂದುವರಿದಿದೆ. ಕನಕರದ್ದು ಭಾಷೆ ಮತ್ತು ಸಂಸ್ಕೃತಿಯ ಮೂಲಕ ಕಟ್ಟಿದ ಜೀವಪರ ಚರಿತ್ರೆಯಾಗಿದೆ’ ಎಂದರು.   

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಮೈಸೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ಸಮಾಜಕಾರ್ಯ ಅಧ್ಯಯನ ವಿಭಾಗ, ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜುಗಳು ಸಹಕಾರ ನೀಡಿದ್ದವು. 

ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಮೈಸೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪ್ರೊ.ಎನ್‌.ಮಮತಾ, ‘ಪ್ರಜಾವಾಣಿ’ ಮೈಸೂರು ಬ್ಯುರೊ ಮುಖ್ಯಸ್ಥ ಕೆ.ನರಸಿಂಹಮೂರ್ತಿ ಪಾಲ್ಗೊಂಡಿದ್ದರು.    

ಎಂ.ಮಹಾಲಿಂಗು ‘ಕನಕ ಕೀರ್ತನೆ’ ಪ್ರಸ್ತುತಪಡಿಸಿದರು. ತಬಲಾದಲ್ಲಿ ಆತ್ಮ ಸಹಗಾಯನದಲ್ಲಿ ಮೈಸೂರು ಕೃಷ್ಣಮೂರ್ತಿ ಸುನೀತಾ ಹಿರೇಮಠ ಕೀಬೋರ್ಡ್‌ನಲ್ಲಿ ‌ಪುರುಷೋತ್ತಮ ಕಿರಗಸೂರು ಸಾಥ್ ನೀಡಿದರು. 
ಗಮಕ ವಾಚನ ಮಾಡಿದ ಚಾರ್ವಿ ಸತೀಶ್
ಸಿ.ಎಸ್‌.ಪೂರ್ಣಿಮಾ
ರಶ್ಮಿ ಕೋಟಿ
ಎ.ನಾರಾಯಣ
ಮಂಜುಶ್ರೀ ಎಂ.ಕಡಕೋಳ
ಕೆ.ವೆಂಕಟೇಶ್
ಅಂಶಿ ಪ್ರಸನ್ನಕುಮಾರ್
ಡಿ.ಉಮಾಪತಿ 
ಎನ್.ಸಂಧ್ಯಾರಾಣಿ
ಆರ್.ವೀರೇಂದ್ರ ಪ್ರಸಾದ್

‘ಶ್ರೇಷ್ಠತೆ ವ್ಯಸನ ಈಗಲೂ ಕಾಡುತ್ತಿದೆ’ ‘ಸಮಾನತೆ ಸೌಹಾರ್ದತೆ ಮತ್ತು ಸೋದರತ್ವ’ ಕುರಿತು ಮಾತನಾಡಿದ ಸಿ.ಎಸ್‌.ಪೂರ್ಣಿಮಾ ‘ದೇಶ ಧರ್ಮ ಜಾತಿ ಶ್ರೇಷ್ಠತೆಯ ವ್ಯಸನ ಈಗಲೂ ಎಲ್ಲರನ್ನು ಕಾಡುತ್ತಿದೆ. ಕನಕದಾಸರು ರಾಮಧಾನ್ಯ ಚರಿತ್ರೆಯಲ್ಲಿ ಇದನ್ನು ವಿಶ್ಲೇಷಿಸಿದ್ದರು. ರಾಮ ರಾಗಿಯ ಪರ ನಿಂತನು. ಅಂಥ ವ್ಯಕ್ತಿತ್ವ ಮಾಧ್ಯಮಗಳಾದ್ದಾಗಬೇಕು’ ಎಂದರು.  ‘ರಾಜಕಾರಣಿಗಳ ನಿಂದನೆ ಹೇಳಿಕೆಗಳನ್ನೇ ಮಾಧ್ಯಮಗಳು ಮತ್ತೆ ಮತ್ತೆ ಪ್ರಸಾರ ಮಾಡುತ್ತಿವೆ. ಅದರಿಂದ ಸಮಾಜದಲ್ಲಿ ವೈರತ್ವ ಹೆಚ್ಚಾಗುತ್ತದೆ. ಮಾಧ್ಯಮಗಳಲ್ಲಿ ಪ್ರಸ್ತುತ ಪಡಿಸುವ ಮಾದರಿ ಬದಲಾಗಬೇಕಿದೆ’ ಎಂದು ಹೇಳಿದರು.  ‘ದಲಿತರಿಗೆ ಇಂದಿಗೂ ದೇವಾಲಯಕ್ಕೆ ಪ್ರವೇಶವಿಲ್ಲ. ಮುಟ್ಟಾದ ಹೆಣ್ಣು ಮಕ್ಕಳನ್ನು ಊರ ಹೊರಗೆ ಇರಿಸುವ ಪದ್ಧತಿ ಈಗಲೂ ಇದೆ. ವಿಶ್ವವಿದ್ಯಾಲಯಗಳಲ್ಲಿ ಪಿಎಚ್‌ಡಿ ಮಾರ್ಗದರ್ಶನಕ್ಕೆ ತಮ್ಮ ಜಾತಿಯ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡುವ ಪ್ರಾಧ್ಯಾಪಕರಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.  ಪ್ರತಿಕ್ರಿಯಿಸಿದ ಪತ್ರಿಕೋದ್ಯಮಿ ರಶ್ಮಿಕೋಟಿ ‘ಸಮಾನತೆ ಸಾಮರಸ್ಯ ಸೋದರತ್ವ ಅನುಸರಿಸುವವರು ದೇಶದ್ರೋಹಿಗಳಾಗಿರುವ ಸಂದರ್ಭದಲ್ಲಿ ನಾವಿದ್ದೇವೆ’ ಎಂದರು.  ‘ಮಾಧ್ಯಮದವರು ಕರ್ತವ್ಯ ಮರೆಯುವ ಸ್ಥಿತಿಗೆ ಬಂದಿದ್ದಾರೆ. ಸತ್ಯ ಹೇಳುವುದು ಕಡಿಮೆಯಾಗಿದೆ. ಸಂವೇದನೆ ಕುಗ್ಗುತ್ತಿದೆ. ಜನರಿಗೆ ಬ್ರೇಕಿಂಗ್ ಸುದ್ದಿ ಬೇಕಿಲ್ಲ ಮನಸ್ಸನ್ನು ಕಟ್ಟುವ ಸತ್ಯವನ್ನು ಹೇಳುವ ಕೆಲಸವನ್ನು ಮಾಧ್ಯಮಗಳು ಮಾಡಬೇಕಿದೆ. ಕನಕದಾಸರು ದೇವರು ಸಮಾಜ ಅಧಿಕಾರ ಅಹಂಕಾರ ಜಾತಿಯನ್ನು ಪ್ರಶ್ನಿಸಿದರು. ಅಂತ ಪ್ರಶ್ನಿಸುವ ಮನೋಭವ ಮಾಧ್ಯಮಕ್ಕೆ ಬೇಕಿದೆ’ ಎಂದರು. ಮೈಸೂರು ಉಮೇಶ್‌ ಮಾತನಾಡಿ ‘ಸಮಾನತೆಯ ಪ್ರತಿಪಾದಕ ಸತ್ಯದ ಪ್ರತೀಕರಾದ ಕನಕರು ಎಂದಿಗೂ ಪ್ರಸ್ತುತ’ ಎಂದರು.  ಸಂವಾದದಲ್ಲಿ ಗೋಪಾಲಕೃಷ್ಣ ನಂಜುಂಡಸ್ವಾಮಿ ಹರದನಹಳ್ಳಿ ನೇತ್ರಾ ಮತ್ತು ಆನಂದ ಪ್ರಶ್ನೆಗಳನ್ನು ಕೇಳಿದರು.   

‘ವ್ಯವಸ್ಥೆಯ ವಿರುದ್ಧದ ಪ್ರತಿಭಟನೆಗಳೇ ಗತವೈಭವ’ ‘ಧರ್ಮ ಭಕ್ತಿ ಅನುಭಾವ’ ಕುರಿತು ಚಿಂತಕ ಎ.ನಾರಾಯಣ ಮಾತನಾಡಿ ‘ಕರ್ನಾಟಕದ ಗತವೈಭವ ಎಂದರೆ ಹಂಪಿಯ ಕಲ್ಲಿನ ರಥ ನೆನಪಿಗೆ ಬರುವ ಬದಲು ಬಸವಾದಿ ವಚನಕಾರರು ಕನಕದಾಸರು ವ್ಯವಸ್ಥೆಯ ವಿರುದ್ಧ ನಡೆಸಿದ ಪ್ರತಿಭಟನೆಗಳು ನೆನಪಾಗಬೇಕು. ಈ ಮಾದರಿಯಲ್ಲಿ ಚರಿತ್ರೆಯನ್ನು ನೋಡಬೇಕು’ ಎಂದು ವಿಶ್ಲೇಷಿಸಿದರು. ಪ್ರತಿಕ್ರಿಯಿಸಿದ ‘ಪ್ರಜಾವಾಣಿ’ ಹಿರಿಯ ಉಪಸಂಪಾದಕಿ ಮಂಜುಶ್ರೀ ಎಂ.ಕಡಕೋಳ ‘ಚಿಂತನೆಗಳಾಚೆಗೂ ವೈಜ್ಞಾನಿಕ ಚಿಂತನೆಯನ್ನು ಕನಕದಾಸರು ಪ್ರತಿಪಾದಿಸಿದರು. ವಾಸ್ತವವಾದಿ ನೆಲೆಯಲ್ಲಿಯೇ ಸಮಾಜವನ್ನು ವಿಶ್ಲೇಷಿಸುವ ವ್ಯಕ್ತಿತ್ವ ಅವರದ್ದು. ಆರ್ಥಿಕವಾಗಿ ಪ್ರಬಲರಾಗಿದ್ದರೂ ಸಾಮಾಜಿಕವಾಗಿ ಕೆಳಸ್ಥರದಲ್ಲಿದ್ದರು. ಹೀಗಾಗಿ ಜನರ ನೋವುಗಳನ್ನು ಕೀರ್ತನೆಗಳಲ್ಲಿ ಕಟ್ಟಿದರು’ ಎಂದರು.  ಪತ್ರಕರ್ತ ಕೆ.ವೆಂಕಟೇಶ ‘ಸ್ವವಿಮರ್ಶೆ ಎಂಬುದು ಮಾಧ್ಯಮದ ಪ್ರತಿಯೊಬ್ಬರಿಗೂ ಇರಬೇಕು’ ಎಂದರೆ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ‘ಮಾಧ್ಯಮಗಳಲ್ಲಿ ಧನ–ಕನಕವಿದೆ. ಎಲ್ಲರಿಗೂ ಜಾತಿ ಪ್ರಜ್ಞೆ ಜಾಸ್ತಿಯಾಗಿದೆ. ಎಲ್ಲವನ್ನು ಮಾಧ್ಯಮವೇ ಮಾಡಲಾಗದು. ಓದುಗರು ವೀಕ್ಷಕರು ತಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಬೇಕು’ ಎಂದರು.  

‘ಸುದ್ದಿಮನೆ: ಎಲ್ಲರನ್ನೂ ಒಳಗೊಳ್ಳಲಿ’   ‘ವರ್ತಮಾನ ತವಕ ತಲ್ಲಣಗಳು: ಕನಕದಾಸರು ಮತ್ತು ಮಾಧ್ಯಮ’ ವಿಷಯ ಮಂಡಿಸಿದ ಡಿ.ಉಮಾಪತಿ ‘ಮಾಧ್ಯಮದವರು ಹೆಚ್ಚು ಸಾಹಿತ್ಯ ಓದುಗರಾಗಬೇಕು’ ಎಂದರು.  ‘ಸುದ್ದಿಮನೆಗಳು ದಲಿತರು ಮಹಿಳೆಯರು ಆದಿವಾಸಿಗಳು ಸೇರಿದಂತೆ ಎಲ್ಲ ಸಮುದಾಯದವರನ್ನು ಒಳಗೊಳ್ಳಬೇಕು. ಆಗ ಮಾತ್ರವೇ ಸಮಾಜದಲ್ಲಿ ಕಾಣುವ ಹಸಿವು ಅವಮಾನ ನೋವಿನ ಗ್ರಹಿಕೆ ಬೇರೆಯಾಗಿ ಕಾಣುತ್ತದೆ’ ಎಂದು ಹೇಳಿದರು.  ‘ವೇಯ್ಟಿಂಗ್ ಫಾರ್ ವೀಸಾ ಕೃತಿಯು ಅಂಬೇಡ್ಕರ್‌ ಅವರು ಬ್ರಾಹ್ಮಣೀಕೃತ ಭಾರತದಲ್ಲಿ ವೀಸಾಗೆ ಕಾಯುತ್ತಿರುವ ದಲಿತರ ಕುರಿತು ಬರೆದದ್ದಾಗಿದೆ. ಈಗಲೂ ಬ್ರಾಹ್ಮಣೀಕೃತ ಪತ್ರಿಕೋದ್ಯಮದ ವೀಸಾಕ್ಕಾಗಿ ದಲಿತರು ಕಾಯುತ್ತಿದ್ದಾರೆ’ ಎಂದರು.   ಕವಯತ್ರಿ ಎನ್.ಸಂಧ್ಯಾರಾಣಿ ಪ್ರತಿಕ್ರಿಯೆ ನೀಡಿ ‘ಸಾಹಿತ್ಯ ಓದು ಮಾನವೀಯಗೊಳಿಸುತ್ತದೆ. ಒಂದೇ ಕುಲಕ್ಕೆ ಸೇರಿದ ಕೃಷ್ಣ– ಕನಕರನ್ನು ಯಾಜಮಾನ್ಯ ಸಂಸ್ಕೃತಿ ಬೇರೆ ಬೇರೆ ಮಾಡಿದೆ’ ಎಂದು ಹೇಳಿ ಕವಯತ್ರಿ ಸವಿತಾ ನಾಗಭೂಷಣ ಅವರ ಕವಿತೆಯನ್ನು ಉದಾಹರಿಸಿದರು.  ‘ಯಾಜಮಾನ್ಯ ಸಂಸ್ಕೃತಿಯು ಕಾಳಿದಾಸ– ಕನಕದಾಸರ ಸಹಜವಾದ ಪ್ರತಿಭೆಯನ್ನು ದೇವರಿಂದ ಆದುದೆಂದು ಹೇಳುತ್ತದೆ. ರಾಜಕುಮಾರ್ ಅವರ ಕುರಿತ ವಿಶ್ಲೇಷಣೆಯೂ ಹೀಗೆಯೇ ನಡೆಯುತ್ತದೆ. ಸಮಾಜದ ಪಕ್ಕದಲ್ಲಿ ಮಾಧ್ಯಮದಲ್ಲಿ ನಿಂತು ನೋಡಿದಾಗ ಅಂಬೇಡ್ಕರ್‌ ಬಸವ ಕನಕ ಕುವೆಂಪು ನೋಟ ಸಿಗುತ್ತದೆ. ಪ್ರತಿರೋಧದ ಪ್ರಜ್ಞೆಯೇ ಈ ಎಲ್ಲ ಮಹನೀಯರ ಪ್ರಜ್ಞೆಯದ್ದಾಗಿದೆ’ ಎಂದರು.  ಪತ್ರಕರ್ತ ಆರ್.ವೀರೇಂದ್ರ ಪ್ರಸಾದ್ ‘ಸುದ್ದಿಮನೆಯೆಂಬುದು ಸಮೂಹವಾಗಿ ಕೆಲಸ ಮಾಡುತ್ತದೆ. ಅಲ್ಲಿ ಒಬ್ಬರೇ ಇರುವುದಿಲ್ಲ. ವರದಿಗಾರ ಕನಕಪ್ರಜ್ಞೆ ಇಟ್ಟುಕೊಂಡೇ ಸುದ್ದಿ ಬರೆದರೂ ಪ್ರಕಟಣೆಯಾಗುವ ಹೊತ್ತಿಗೆ ಅದರ ಸ್ವರೂಪ ಬದಲಾಗಿರುತ್ತದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.