ADVERTISEMENT

ಹಂಪಾಪುರ: ಕನ್ನಡಕ್ಕೊಂದು ಭಾಷಾ ಪ್ರಯೋಗಾಲಯ!

ಮಕ್ಕಳಿಗೆ ಸುಲಭವಾಗಿ ಅರ್ಥೈಸಲು ಶಾಲೆಯಲ್ಲಿ ವಿಭಿನ್ನ ಪ್ರಯತ್ನ

ರವಿಕುಮಾರ್
Published 28 ಡಿಸೆಂಬರ್ 2025, 4:05 IST
Last Updated 28 ಡಿಸೆಂಬರ್ 2025, 4:05 IST
ದೇವಲಾಪುರ ಕಾಲೊನಿ ಶಾಲೆಯಲ್ಲಿ ಕನ್ನಡಾಂಬೆಯನ್ನು ಚಿತ್ರಿಸಿರುವುದು
ದೇವಲಾಪುರ ಕಾಲೊನಿ ಶಾಲೆಯಲ್ಲಿ ಕನ್ನಡಾಂಬೆಯನ್ನು ಚಿತ್ರಿಸಿರುವುದು   

ಹಂಪಾಪುರ: ಕನ್ನಡ ವರ್ಣಮಾಲೆಯಿಂದ ಹಿಡಿದು ವ್ಯಾಕರಣ, ಸಮಾಸ, ಸಂಧಿಗಳವರೆಗೆ ಮಕ್ಕಳಿಗೆ ಸುಲಭವಾಗಿ ಅರ್ಥೈಸಲು ಆಗುವಂತಹ ವಿನ್ಯಾಸಗಳ ರಚನೆ ಗಮನ ಸೆಳೆದಿದೆ...

–ಹೌದು ಕನ್ನಡವನ್ನು ಸುಲಭವಾಗಿ ಹೇಳಿಕೊಡಬಲ್ಲ ‘ಕನ್ನಡ ಭಾಷಾ ಪ‍್ರಯೋಗಾಲಯ’ಗಳು ಹೋಬಳಿಯಲ್ಲಿ 20ಕ್ಕೂ ಹೆಚ್ಚು ಸೇರಿದಂತೆ ಎಚ್.ಡಿ.ಕೋಟೆ ತಾಲ್ಲೂಕಿನಾದ್ಯಂತ 80 ಶಾಲೆಗಳಲ್ಲಿ ತೆರೆದುಕೊಂಡಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ಅವರು ತಾಲ್ಲೂಕಿನ ಎಲ್ಲಾ ಶಾಲೆಗಳ ಬಗ್ಗೆ ಮಾಹಿತಿ ಪಡೆದು, ಕನ್ನಡ ಭಾಷೆಯ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸುವ ಸಲುವಾಗಿ ಕ್ರಮ ಕೈಗೊಂಡಿದ್ದಾರೆ. ಕನ್ನಡ ಭಾಷಾ ಪ್ರಯೋಗಾಲಯದ ಸ್ಥಾಪನೆಯ ಚಿಂತನೆ ನಡೆಸಿ ಮೊದಲ ಪ್ರಯತ್ನದಲ್ಲಿ 80 ಶಾಲೆಗಳಲ್ಲಿ ಒಂದೊಂದು ಕೊಠಡಿಯನ್ನು ಕನ್ನಡಮಯವಾಗಿಸಲು ಯತ್ನಿಸಿ ಯಶಸ್ವಿಯಾಗಿದ್ದಾರೆ.

ಏನಿರಲಿದೆ?: ಶಾಲೆಯಲ್ಲಿ ಒಂದು ಕೊಠಡಿಯನ್ನು ಕನ್ನಡ‌ ಬಾವುಟದಲ್ಲಿನ ಕೆಂಪು ಹಾಗೂ ಹಳದಿ ಬಣ್ಣಗಳನ್ನು ಗೋಡೆಗಳಿಗೆ ಬಳಿದು, ಆ ಗೋಡೆಗಳ ಮೇಲೆ ಕನ್ನಡ ಭಾಷೆಗೆ ಸಂಬಂಧಿಸಿದ ಸಾಹಿತಿಗಳ, ರಾಜರ ಹಾಗೂ ಕನ್ನಡಕ್ಕಾಗಿ ಹೋರಾಡಿದವರ ಹಾಗೂ ಕನ್ನಡಾಂಬೆಯ ಭಾವಚಿತ್ರ ಬಿಡಿಸಲಾಗಿದೆ. ಕನ್ನಡದ ಪ್ರಪ್ರಥಮ, ಗಾದೆಗಳು, ನುಡಿಗಟ್ಟು, ತಿಂಗಳು, ಕವಿಗಳ ಬಗ್ಗೆ ಪರಿಚಯದ ಸಾಲು ಬರೆಯಲಾಗಿದೆ.

ADVERTISEMENT

‘ವಿಜ್ಞಾನ ವಿಷಯಗಳಿಗೆ ಪ್ರಯೋಗಾಲಯ ಇರುವುದು ಸಹಜ. ಆದರೆ ಕನ್ನಡಕ್ಕೆಂದೇ ಭಾಷಾ ಪ್ರಯೋಗಾಲಯ ಹೊಸತು. 1ರಿಂದ 7ನೇ ತರಗತಿವರೆಗಿನ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಪ್ರಯೋಗಾಲಯ ತೆರೆದಿಡಲಾಗಿದೆ. ಡ್ರಾಯಿಂಗ್ ಶೀಟ್‌ಗಳಲ್ಲಿ ಕನ್ನಡ ಭಾಷೆ ವೈವಿಧ್ಯತೆ, ವ್ಯಾಕರಣ ಕುರಿತು ಚಿತ್ರಿಸಲಾಗಿದೆ. ಚಿತ್ರಗಳನ್ನು ವಿದ್ಯಾರ್ಥಿಗಳು ನೋಡಿ ಕಲಿಯಲು ಸಹಕಾರವಾಗುವ ರೀತಿ ಚಿತ್ರಿಸಲಾಗಿದೆ’ ಎಂದು ದೇವಲಾಪುರ ಕಾಲೊನಿ ಶಿಕ್ಷಕ ರಾಘವೇಂದ್ರ ತಿಳಿಸಿದರು.

ಶಿಕ್ಷಕರಿಂದಲೇ ವೆಚ್ಚ: ‘ಶಿಕ್ಷಕರು ತಮ್ಮ ಶಾಲೆಗಳಲ್ಲಿ‌ ಕನ್ನಡ ಭಾಷಾ ಪ್ರಯೋಗಾಲಯ ನಿರ್ಮಿಸಲು ₹30ರಿಂದ ₹40 ಸಾವಿರ ವೆಚ್ಚವಾಗುತ್ತಿದೆ. ಕೆಲವು ಶಾಲೆಗಳಲ್ಲಿ ಗ್ರಾಮಸ್ಥರು ನೆರವನ್ನು ನೀಡುತ್ತಿದ್ದು, ಇನ್ನೂ ಕೆಲವು ಶಾಲೆಗಳಲ್ಲಿ ಶಿಕ್ಷಕರೇ ಸ್ವತಃ ಖರ್ಚಿನಲ್ಲಿ ನಿರ್ಮಿಸಿ ಮಾದರಿಯಾಗಿದ್ದಾರೆ.

‘ತಾಲ್ಲೂಕಿನ ಬೆಳಗನಹಳ್ಳಿ, ಕೋಳಗಾಲ ಸೇರಿದಂತೆ ಇತರೆ ಶಾಲೆಗಳಲ್ಲಿ ಶಾಲಾಭಿವೃದ್ಧಿ ಸಮಿತಿಯ ಜೊತೆ ಜೊತೆಗೆ ಶಿಕ್ಷಕರು ಸಹ ಹಣ ಭರಿಸಿದ್ದು, ಪ್ರಯೋಗಾಲಯ ನಿರ್ಮಾಣ ಮಾಡಲಾಗಿದೆ’ ಎಂದು ಬೆಳಗನಹಳ್ಳಿ ಶಾಲಾ ಶಿಕ್ಷಕಿ ಸೌಮ್ಯ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ತಾಲ್ಲೂಕು ಕೇರಳ ಗಡಿಯಲ್ಲಿರುವುದರಿಂದ ಬೇರೆ ಭಾಷಿಗರ ಪ್ರಭಾವ ತಟ್ಟುತ್ತಿದೆ. ಕನ್ನಡ ಭಾಷಾ ಪ್ರಯೋಗಾಲಯಗಳು, ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ಪರಿಣಾಮ ಬೀರಲಿದೆ’ ಎಂದು ಸವ್ವೆ ಕ್ಲಸ್ಟರ್ ಸಿಆರ್‌ಪಿ ಎ.ಎಸ್.ಮಹದೇವು ಹೇಳಿದರು.

‘ಮಕ್ಕಳ ಕಲಿಕಾ ಪ್ರಗತಿಯ‌ ದೃಷ್ಟಿಯಿಂದ ಎಚ್.ಡಿ.ಕೋಟೆ ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಈ ರೀತಿಯ ಕನ್ನಡ ಭಾಷಾ ಪ್ರಯೋಗಾಲಯ ಮಾಡುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಕನ್ನಡ ಪ್ರಮೋದ್ ತಿಳಿಸಿದರು.

ಬೆಳಗನಹಳ್ಳಿಯಲ್ಲಿ ಕನ್ನಡ ಭಾಷಾ ಪ್ರಯೋಗಾಲಯದಲ್ಲಿ ಕವಿಗಳನ್ನು ವರ್ಣಿಸಿರುವುದು

‘ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶ’

‘ಮಕ್ಕಳಿಗೆ ಕನ್ನಡದ ಬಗೆಗಿನ ಪ್ರೀತಿಯನ್ನು ಬಾಲ್ಯದಿಂದಲೇ ತಿಳಿಸುವ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆ ಎಂದರೆ ಹೀಯಾಳಿಸುವ ಪ್ರವೃತ್ತಿ ಎದುರಾಗಿದೆ. ಮಕ್ಕಳನ್ನು ಮತ್ತು ಪೋಷಕರನ್ನು ಸೆಳೆಯಲು ಮತ್ತು ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಕನ್ನಡ ಭಾಷಾ ಪ್ರಯೋಗಾಲಯ ನಿರ್ಮಿಸಲಾಗುತ್ತಿದೆ. ಕೆಲವೆಡೆ ಶಾಸಕ ಅನಿಲ್ ಚಿಕ್ಕಮಾದು ಅವರು ಉದ್ಘಾಟಿಸಿದ್ದು ಇನ್ನೂ ಹಲವು ಶಾಲೆಗಳಲ್ಲಿ ನಾನೇ ತೆರಳಿ ಉದ್ಘಾಟಿಸಿದ್ದೇನೆ’ ಬಿಇಒ ಸಿ.ಎನ್‌.ರಾಜು ಹೇಳಿದರು.

ಶಾಲೆಯಲ್ಲಿ ಕನ್ನಡ ಭಾಷಾ ಪ್ರಯೋಗಾಲಯ ತೆರೆದಿರುವುದು ಸಂತೋಷವಾಗಿದೆ. ಇದರಿಂದ ಭಾಷೆಯ ಮೇಲಿನ ಗೌರವ ಮತ್ತಷ್ಟು ಹೆಚ್ಚಾಗಿದೆ.
–ವಿನಯ್ ಕುಮಾರ್, 7ನೇ ತರಗತಿ ದೇವಲಾಪುರ ಕಾಲೊನಿ ಶಾಲೆ
ಕಾಗುಣಿತದಿಂದ ಹಿಡಿದು ವ್ಯಾಕರಣದ ಹಲವು ವಿಧಗಳನ್ನು ಚಿತ್ರಗಳ ಮೂಲಕ ಬಿತ್ತರಿಸಿರುವುದರಿಂದ ನೋಡಿ‌ ಸರಳವಾಗಿ ಕಲಿಯಲು ಸಹಕಾರಿಯಾಗಿದೆ
–ಅಕುಲ್ ಗೌಡ, 7ನೇ ತರಗತಿ ಬೆಳಗನಹಳ್ಳಿ ಶಾಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.