ಮೈಸೂರು: ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪುರಸ್ಕಾರಕ್ಕೆ ಸಾಧಕರ ಆಯ್ಕೆಯಲ್ಲಿ ಎಡವಟ್ಟು ಮಾಡಿರುವ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು, ಈಗಾಗಲೇ ಪ್ರಶಸ್ತಿ ನೀಡಿದ್ದವರಿಗೆ ಮತ್ತೆ ಪ್ರಕಟಿಸಿದೆ.
ಕವಯತ್ರಿ ಎ.ಪುಷ್ಪಾ ಅಯ್ಯಂಗಾರ್ ಅವರಿಗೆ 2021ರಲ್ಲಿ ಪ್ರಶಸ್ತಿ ಕೊಡಲಾಗಿತ್ತು. ಈ ಬಾರಿ ಮತ್ತೆ ಸಾಹಿತ್ಯ ಹಾಗೂ ಸಮಾಜಸೇವ ಕ್ಷೇತ್ರದಲ್ಲಿ ಅವರನ್ನು ಪರಿಗಣಿಸಲಾಗಿದೆ. ಇದು ಅಚ್ಚರಿಗೆ ಕಾರಣವಾಗಿದೆ. ಅಧಿಕಾರಿಗಳು ಹಿಂದಿನ ವರ್ಷಗಳ ಪಟ್ಟಿಯನ್ನೇ ಗಮನಿಸದೇ ಈ ಬಾರಿಯ ಪುರಸ್ಕೃತರನ್ನು ಆಯ್ಕೆ ಮಾಡಿದರೇ ಎಂಬ ಪ್ರಶ್ನೆಯೂ ಎದ್ದಿದೆ.
ಜಿಲ್ಲಾಡಳಿತವು ತಮ್ಮ ಹೆಸರು ಪ್ರಕಟಿಸಿರುವುದಕ್ಕೆ ಪುಷ್ಪಾ ಅಯ್ಯಂಗಾರ್ ಅವರಿಗೇ ಅಚ್ಚರಿಯಾಗಿದೆ.
‘ನನಗೆ ಅದೇ ಪ್ರಶಸ್ತಿಯನ್ನು ಮತ್ತೆ ಕೊಟ್ಟಿರುವುದಕ್ಕೆ ಅಚ್ಚರಿಯಾಯಿತು. ಯಾರು ಹಾಗೂ ಹೇಗೆ ಆಯ್ಕೆ ಮಾಡಿದರೋ ಗೊತ್ತಿಲ್ಲ. ನಾನೇನೂ ಕೇಳಿರಲಿಲ್ಲ. ಹೀಗಾಗಿ, ನಾನು ಶುಕ್ರವಾರ (ನ.1ರಂದು) ನಡೆಯುವ ಆ ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ; ಪ್ರಶಸ್ತಿ ಸ್ವೀಕರಿಸುತ್ತಿಲ್ಲ. ಬೇರೆ ಯಾರಿಗಾದರೂ ಕೊಟ್ಟುಕೊಳ್ಳಲಿ’ ಎಂದು ಪುಷ್ಪಾ ಅಯ್ಯಂಗಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಈಗಾಗಲೇ ಪ್ರಶಸ್ತಿ ಸಿಕ್ಕವರನ್ನೇ ಮತ್ತೆ ಆಯ್ಕೆ ಮಾಡಿರುವುದು ನನಗೆ ಗೊತ್ತಿಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಈ ಬಾರಿ ಎಲ್ಲರಿಂದಲೂ ಎನ್‌ಒಸಿ (ನಿರಾಕ್ಷೇಪಣಾ ಪತ್ರ) ಪಡೆಯುವಂತೆಯೂ ತಿಳಿಸಲಾಗಿತ್ತು. ಎಲ್ಲರೂ ಕೊಟ್ಟಿದ್ದಾರೆಯೇ, ಯಾರಿಗೂ ಕ್ರಿಮಿನಲ್ ಪ್ರಕರಣದ ಹಿನ್ನೆಲೆ ಇಲ್ಲವೇ ಎಂಬುದನ್ನೂ ಖಾತ್ರಿಪಡಿಸಿಕೊಳ್ಳವಂತೆ ಸೂಚಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.
‘ಪುಷ್ಪಾ ಅವರಿಗೆ ಈಗಾಗಲೇ ಪ್ರಶಸ್ತಿ ಸಿಕ್ಕಿರುವುದು ‘ಪ್ರಜಾವಾಣಿ’ಯ ಪ್ರತಿನಿಧಿ ಕರೆ ಮಾಡಿದ ನಂತರವಷ್ಟೇ ತಿಳಿಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಯು ಇದನ್ನೆಲ್ಲಾ ಪರಿಶೀಲಿಸಬೇಕಿತ್ತು. ಅವರಿಗೆ ಎಚ್ಚರಿಕೆ ಕೊಡಲಾಗಿದೆ. ಪುಷ್ಪಾ ಅವರ ಹೆಸರನ್ನು ಪಟ್ಟಿಯಿಂದ ತೆಗೆಯಲಾಗುವುದು’ ಎಂದು ಎಡಿಸಿ ಪಿ.ಶಿವರಾಜು ಹೇಳಿದರು.
ಪುಷ್ಪಾ ಅಯ್ಯಂಗಾರ್ ಕೈಬಿಟ್ಟು ಸುಶೀಲಾ ಕೊರಗ ಪರಿಗಣನೆ:
‘ಪುಷ್ಪಾ ಅಯ್ಯಂಗಾರ್ ಅವರಿಗೆ 2021ರಲ್ಲೇ ರಾಜ್ಯೋತ್ಸವ ಪುರಸ್ಕಾರ ನೀಡಲಾಗಿರುವುದರಿಂದ ಆಯ್ಕೆ ಪಟ್ಟಿಯಿಂದ ಅವರ ಹೆಸರನ್ನು ಕೈಬಿಟ್ಟು ಸುಶೀಲಾ ಕೊರಗ ಅವರನ್ನು ಶಿಕ್ಷಣ ಕ್ಷೇತ್ರದಲ್ಲಿ ಪುರಸ್ಕಾರಕ್ಕೆ ಪರಿಗಣಿಸಲಾಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್ ಪ್ರಕಟಣೆಯಲ್ಲಿ ರಾತ್ರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.