ADVERTISEMENT

ಮೈಸೂರು: ಅರಮನೆಯಲ್ಲಿ ಕನ್ನಡದ ಕುಲದೇವಿ!

ಕೆ.ಎಸ್.ಗಿರೀಶ್
Published 1 ನವೆಂಬರ್ 2021, 4:36 IST
Last Updated 1 ನವೆಂಬರ್ 2021, 4:36 IST
ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇವಸ್ಥಾನ
ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇವಸ್ಥಾನ   

ಮೈಸೂರು: ನಗರದಲ್ಲಿರುವ ಕನ್ನಡದ ಕುಲದೇವಿ ‘ಭುವನೇಶ್ವರಿ’ ದೇಗುಲ ಮೈಸೂರಿಗರ ಹೆಮ್ಮೆ. ರಾಜ್ಯದಲ್ಲೇ ವಿರಳಾತಿ ವಿರಳ ಸಂಖ್ಯೆಯಲ್ಲಿ ದೇಗುಲ ಇದ್ದು, ಅದರಲ್ಲಿ ಪ್ರಮುಖ ದೇಗುಲ ಅರಮನೆಯ ಉತ್ತರದ್ವಾರದ ಬಳಿ ಇದೆ.

ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಭುವನಗಿರಿಯಲ್ಲೂ ಹಳೆಯ ಭುವನೇಶ್ವರಿ ದೇಗುಲವಿದೆ. ಹಂಪೆಯ ವಿರೂಪಾಕ್ಷ ದೇಗುಲದ ಸಮೀಪ ಹಾಗೂ ಶೃಂಗೇರಿಯಲ್ಲಿ ಅದರ ಮೂರ್ತಿ ಇದೆ. ಮಹಾರಾಷ್ಟ್ರದ ಔದುಂಬರ ಕ್ಷೇತ್ರದಲ್ಲೂ ಭುವನೇಶ್ವರಿ ದೇಗುಲವಿದ್ದು, ಹಿಂದೆ ಅದೂ ಕನ್ನಡದ ಪ್ರದೇಶವಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿದೆ.

ಶ್ರೀಲಂಕಾದಲ್ಲೂ ಭುವನೇಶ್ವರಿಯ ಶಕ್ತಿಪೀಠವೊಂದಿದೆ. ಕದಂಬರ ಆರಾಧ್ಯದೈವವಾಗಿದ್ದ ಭುವನೇಶ್ವರಿ ನಂತರ ಬಹುತೇಕ ಕನ್ನಡ ಅರಸರಿಂದ ಪೂಜಿತಳಾಗಿದ್ದಾಳೆ. ವಿಜಯನಗರದ ಅರಸರು, ಬೀಳಗಿ ಅರಸರು, ಮೈಸೂರು ಒಡೆಯರು ಸಹ ಭುವನೇಶ್ವರಿಯನ್ನು ಪ್ರಮುಖವಾಗಿ ಆರಾಧಿಸುತ್ತಿದ್ದರು.

ADVERTISEMENT

ಯದು ವಂಶದ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್ 1951ರಲ್ಲಿ ಅರಮನೆ ಆವರಣದಲ್ಲಿ ದೇಗುಲವನ್ನು ನಿರ್ಮಿಸಿದರು. ವಾಸ್ತುಶಿಲ್ಪಿ ಸಿದ್ದಲಿಂಗಸ್ವಾಮಿ ದ್ರಾವಿಡ ಶೈಲಿಯಲ್ಲಿ ದೇಗುಲ ನಿರ್ಮಿಸಿದ್ದಾರೆ.

ಇಲ್ಲಿ ರಾಜರಾಜೇಶ್ವರಿ, ಚಾಮುಂಡೇಶ್ವರಿ, ಮಹೇಶ್ವರ, ಮೊದಲಾದ ದೇವತಾಮೂರ್ತಿಗಳ ಜತೆಗೆ ಜಯಚಾಮರಾಜ ಒಡೆಯರ್ ನೀಡಿದ ತಾಮ್ರದ ದೊಡ್ಡ ಸೂರ್ಯಮಂಡಲವೂ ಆಕರ್ಷಣೆಯ ಕೇಂದ್ರವಾಗಿದೆ.

ರಾಜ್ಯೋತ್ಸವದ ದಿನ ಭುವನೇಶ್ವರಿ ವಿಗ್ರಹಕ್ಕೆ ಬೆಳ್ಳಿ ಕವಚ ತೊಡಿಸಲಾಗುತ್ತದೆ. ಅಂದು ಜಿಲ್ಲಾಡಳಿತ, ಪಾಲಿಕೆ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಇಲ್ಲಿ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ.

ಜಯಚಾಮರಾಜ ಒಡೆಯರ್ ಅಂಬಾರಿಯಲ್ಲಿ ಕುಳಿತುಕೊಳ್ಳುವುದನ್ನು 1969ರಲ್ಲಿ ನಿಲ್ಲಿಸಿದ ನಂತರ 1970ರಲ್ಲಿ ಜನಸಾಮಾನ್ಯರ ದಸರಾದಲ್ಲಿ ಅಂಬಾರಿಯಲ್ಲಿ ಇದೇ ಭುವನೇಶ್ವರಿಯ ಉತ್ಸವಮೂರ್ತಿಯನ್ನಿಟ್ಟು ಮೆರವಣಿಗೆ ಮಾಡಲಾಯಿತು. ನಂತರದ ವರ್ಷಗಳಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನಿರಿಸಲಾಯಿತು ಎಂದು ಪ್ರವಾಸಿ ಮಾರ್ಗದರ್ಶಿ ರಮೇಶ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.