ADVERTISEMENT

ಮೈಸೂರು: ಕಾರ್ಗಿಲ್‌ ವಿಜಯ ದಿವಸ; ಬೈಕ್‌ ರ‍್ಯಾಲಿ 26ಕ್ಕೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2022, 7:44 IST
Last Updated 23 ಜುಲೈ 2022, 7:44 IST
ಮೈಸೂರಿನ ಪತ್ರಕರ್ತರ ಭವನದಲ್ಲಿ ಶನಿವಾರ ಕೆ.ಪಿ.ದಿವಾಕರ ಮಾತನಾಡಿದರು. ಎಂ.ಪಿ.ಪ್ರಭಾಕರ್‌, ಜಿ.ಎಂ.ಸುರೇಶ್‌, ಕೆ.ಮಂಜುನಾಥ್‌, ಎಚ್‌.ಆರ್‌.ಕೇಶವ್‌, ಎಚ್‌.ಎಸ್‌.ನಂಜುಂಡಸ್ವಾಮಿ ಇದ್ದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಶನಿವಾರ ಕೆ.ಪಿ.ದಿವಾಕರ ಮಾತನಾಡಿದರು. ಎಂ.ಪಿ.ಪ್ರಭಾಕರ್‌, ಜಿ.ಎಂ.ಸುರೇಶ್‌, ಕೆ.ಮಂಜುನಾಥ್‌, ಎಚ್‌.ಆರ್‌.ಕೇಶವ್‌, ಎಚ್‌.ಎಸ್‌.ನಂಜುಂಡಸ್ವಾಮಿ ಇದ್ದರು.   

ಮೈಸೂರು: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾ ಘಟಕ ಹಾಗೂ ರೋಟರಿ ಹೆರಿಟೇಜ್‌ ಕ್ಲಬ್‌ನಿಂದ ಕಾರ್ಗಿಲ್‌ ವಿಜಯ ದಿವಸ ಆಚರಣೆ ಅಂಗವಾಗಿ 2ನೇ ವರ್ಷದ ಬೈಕ್‌ ರ‍್ಯಾಲಿಯನ್ನು ಜುಲೈ 26ರಂದು ಬೆಳಿಗ್ಗೆ 8.30ಕ್ಕೆ ನಗರದ ಮೆಟ್ರೊ ಪೋಲ್‌ ವೃತ್ತದಲ್ಲಿ ಆಯೋಜಿಸಲಾಗಿದೆ.

‘ಶಾಸಕರಾದ ಎಸ್‌.ಎ.ರಾಮದಾಸ್‌, ಎಲ್‌.ನಾಗೇಂದ್ರ, ವಿಧಾನ ಪರಿಷತ್‌ ಸದಸ್ಯ ಸಿ.ಎನ್‌.ಮಂಜೇಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರ‍್ಯಾಲಿಯು ರೈಲು ನಿಲ್ದಾಣ, ಕೆ.ಆರ್‌.ಆಸ್ಪತ್ರೆ ವೃತ್ತ, ಗಾಂಧಿ ಚೌಕ, ಹಾರ್ಡಿಂಗ್‌ ವೃತ್ತ, ಬಸವೇಶ್ವರ ವೃತ್ತ, ರಾಮಸ್ವಾಮಿ ವೃತ್ತ, ಅಗ್ನಿಶಾಮಕ ದಳದ ಜಂಕ್ಷನ್‌, ಸರಸ್ವತಿಪುರಂನ 1ನೇ ಮುಖ್ಯರಸ್ತೆಯಿಂದ ವಿಶ್ವ ಮಾನವ ಜೋಡಿ ರಸ್ತೆ ಮೂಲಕ ರೋಟರಿ ಪಶ್ಚಿಮದವರೆಗೆ ನಡೆಯಲಿದೆ. ಇದರಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಎಲ್ಲರೂ ಸಂಚಾರ ನಿಯಮಗಳನ್ನು ಪಾಲಿಸಬೇಕು’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪಿ.ದಿವಾಕರ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರೋಟರಿ ಪಶ್ಚಿಮ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಶಾಲಾ ಮಕ್ಕಳು, ಮಾಜಿ ಸೈನಿಕರು, ಹುತಾತ್ಮ ಯೋಧರ ಕುಟುಂಬಸ್ಥರು ಪಾಲ್ಗೊಳ್ಳಲಿದ್ದಾರೆ. ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮವೂ ಇದೆ’ ಎಂದರು.

ADVERTISEMENT

ರೋಟರಿ ಹೆರಿಟೇಜ್‌ ಮೈಸೂರು ಗವರ್ನರ್‌ ಎಚ್‌.ಆರ್‌.ಕೇಶವ್‌ ಮಾತನಾಡಿ, ‘ಕಾರ್ಗಿಲ್‌ ಯುದ್ಧದಲ್ಲಿ ಜಯ ಗಳಿಸಿ 23 ವರ್ಷಗಳು ಕಳೆದಿವೆ. ಈ ವಿಜಯೋತ್ಸವವನ್ನು ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತಿದೆ. ಯುವ ಪೀಳಿಗೆಗೆ ದೇಶ ಪ್ರೇಮದ ಅರಿವು ಮೂಡಿಸಲು ಈ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸೈನಿಕರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಎಚ್‌.ಎಸ್‌.ನಂಜುಂಡಸ್ವಾಮಿ, ರೋಟರಿ ಹೆರಿಟೇಜ್‌ ಸಹಾಯಕ ಗವರ್ನರ್‌ ಕೆ.ಮಂಜುನಾಥ್‌, ಅಧ್ಯಕ್ಷ ಜಿ.ಎಂ.ಸುರೇಶ್‌, ಕಾರ್ಯದರ್ಶಿ ಎಂ.ಪಿ.ಪ್ರಭಾಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.