ADVERTISEMENT

ನನ್ನ ಸೋಲಿನ ಸೇಡು ತೀರಿಸಿ: ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಹೇಳಿಕೆ

ಉದ್ಬೂರಿನಲ್ಲಿ ಬೃಹತ್ ರೋಡ್ ಶೋ ನಡೆಸಿದ ಸಿದ್ದರಾಮಯ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಮೇ 2023, 2:30 IST
Last Updated 9 ಮೇ 2023, 2:30 IST
ಚಾಮುಂಡೇಶ್ವರಿ ಕ್ಷೇತ್ರದ ಉದ್ಬೂರಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ರೋಡ್ ಶೋ ನಡೆಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಉದ್ಬೂರಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ರೋಡ್ ಶೋ ನಡೆಸಿದರು.   ಪ್ರಜಾವಾಣಿ

ಜಯಪುರ: ‘ಜೆಡಿಎಸ್ ಅಧಿಕಾರಕ್ಕೆ ಬರುವ ಪಕ್ಷವಲ್ಲ. ಪಂಚರತ್ನ ಯಾತ್ರೆಯಿಂದ ಯಾವ ಪ್ರಯೋಜನವು ಆಗುವುದಿಲ್ಲ. ಜೆಡಿಎಸ್ ಅತಂತ್ರ ಸರ್ಕಾರ ಬರುತ್ತೆ ಎಂದು ಕನಸು ಕಾಣುತ್ತಿದ್ದಾರೆ. ಇದು ಸಾದ್ಯವಿಲ್ಲ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಜಯಪುರ ಹೋಬಳಿಯ ಉದ್ಬೂರು ಗ್ರಾಮದಲ್ಲಿ ಬೃಹತ್ ರೋಡ್ ಶೋ ನಡೆಸಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಮತಯಾಚಿಸಿ ಅವರು ಮಾತನಾಡಿದರು.

ಈ ಭಾರಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ಹಾಗಾಗಿ ಜೆಡಿಎಸ್‌ಗೆ ಮತ ಹಾಕಬೇಡಿ. ಜಿ.ಟಿ.ದೇವೇಗೌಡನನ್ನು ಸೋಲಿಸಿ ಮಾವಿನಹಳ್ಳಿ ಸಿದ್ದೇಗೌಡನನ್ನು ಗೆಲ್ಲಿಸಬೇಕು ಎಂದರ.

ADVERTISEMENT

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎಂಟು ಭಾರಿ ಸ್ಪರ್ದಿಸಿ ಐದು ಭಾರಿ ಗೆದ್ದಿದ್ದೇನೆ. 2006ರಲ್ಲಿ ನಡೆದ ಚಾಮುಂಡೇಶ್ವರಿ ಉಪಚುನಾವಣೆ ನನಗೆ ರಾಜಕೀಯ ಮರುಜನ್ಮ ನೀಡಿದ ಕ್ಷೇತ್ರ ಇದು. ಈ ಕ್ಷೇತ್ರದ ಮತದಾರರ ಋಣ ನನ್ನ ಮೇಲಿದೆ. ನಾನು ಹಿಂದೆ ಮಾಡಿದ್ದನ್ನು ಹೊರತು, ಜಿ.ಟಿ ದೇವೇಗೌಡ ಬೇರೇನು ಅಭಿವೃದ್ಧಿ ಮಾಡಿಲ್ಲ ಎಂದು ಟೀಕಿಸಿದರು.

‘ನಾನು ಮುಖ್ಯಮಂತ್ರಿಯಾಗಿದ್ದಾಗ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗೆ ಕಾನೂನು ರೂಪಿಸಿ, ಜನಸಂಖ್ಯೆಗೆ ಅನುಗುಣವಾಗಿ ಸಾವಿರಾರು ಕೋಟಿ ದಲಿತರ ಕಲ್ಯಾಣಕ್ಕೆ ಮೀಸಲಿಟ್ಟಿದ್ದೆ. ಚಾಮುಂಡೇಶ್ವರಿಗೆ ₹ 1500 ಕೋಟಿ ಹಣ ನೀಡಿದ್ದೇನೆ. ಅದರ ಸದುಪಯೋಗ ಪಡೆದು ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ಮಾಡಲಾಗಿದೆ. ಎಲ್ಲವನ್ನು ನಾನೇ ಮಾಡಿದೆ ಎಂದು ಸುಳ್ಳು ಹೇಳುವ ಜಿ.ಟಿ ದೇವೇಗೌಡನನ್ನು ಚಾಮುಂಡೇಶ್ವರಿಯ ಮತದಾರರು ಈ ಭಾರಿ ನೀವು ಸೋಲಿಸಲೇಬೇಕು’ ಎಂದು ಕರೆ ನೀಡಿದರು.

‘ಬಿಜೆಪಿ ಸರ್ಕಾರ ಒಂದು ಮನೆಯನ್ನು ಕಟ್ಟುವುದಕ್ಕೆ ದುಡ್ಡು ನೀಡಿಲ್ಲ. ಕಟ್ಟಿರುವ ಮನೆಗಳಿಗೆ ಬಿಲ್ ಕೂಡ ಮಾಡಿಕೊಟ್ಟಿಲ್ಲ. ಅವರಿಂದ ಮತ್ತೇನು ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ ಎಂದರು.

ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ.ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನತೆ ಬೇಸತ್ತಿದ್ದು ಕಾಂಗ್ರೆಸ್ ಗೆ ಬೆಂಬಲ ಸೂಚಿಸುತ್ತಿದ್ದಾರೆ.ರಾಜ್ಯಾದ್ಯಾಂತ ಬದಲಾವಣೆಯ ಪರ್ವ ಆರಂಭವಾಗಿದೆ.ಬಡವರು,ದಿನದಲಿತರು,ನಿರ್ಗತಿಕರು,ಶೋಷಿತರಿಗೆ ದನಿಯಾಗಲು ಕಾಂಗ್ರೆಸ್ ಪಕ್ಷವು ಐದು ಗ್ಯಾರಂಟಿಯನ್ನು ಪ್ರಣಾಳಿಕೆಯಲ್ಲಿ ಘೋಷಿಸಿದೆ.ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಗೌರವಧನವನ್ನು ಹೆಚ್ಚಿಸುತ್ತೇವೆ.ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೆ ಗ್ಯಾರಂಟಿ ಯೋಜನೆಯನ್ನು ಕಾರ್ಯಗತಗೊಳಿಸಿ ನುಡಿದಂತೆ ನಡೆಯುತ್ತೇವೆ ಎಂದರು.

2018ರ ಚುನಾವಣೆಯಲ್ಲಿ ನನಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನಗೆ ಹೀನಾಯ ಸೋಲಾಯಿತು. ಜಿ.ಟಿ ದೇವೇಗೌಡ ಗೆದ್ದ. ಆ ನೋವನ್ನು ಮರೆಯಲು ಈ ಭಾರಿ ಕಾಂಗ್ರೆಸ್ ಗೆಲ್ಲಿಸಬೇಕು. ನೀವು ಹಾಕುವ ಒಂದೊಂದು ಮತ ನನಗೆ ನೀಡಿದ ಹಾಗೆ. 40ವರ್ಷ ಮೌಲ್ಯಯುತ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ನನ್ನ ಸೋಲಿನ ಸೇಡನ್ನು ಈ ಭಾರಿ ಮತದಾರರು ನೀವು ತೀರಿಸಿಕೊಳ್ಳಬೇಕು ಎಂದರು.

‘ಈ ಭಾರಿಯ ಚುನಾವಣೆ ಹಣಬಲ ಮತ್ತು ಜನಬಲದ ಮೇಲೆ ನಡೆಯುತ್ತಿರುವ ಚುನಾವಣೆ. ಜಿ.ಟಿ ದೇವೇಗೌಡ ಮತ್ತು ಅವನ ಮಗ ಗೆಲ್ಲಲು ನೂರಾರು ಕೋಟಿ ಖರ್ಚು ಮಾಡುತ್ತಿದ್ದಾರೆ. ಎಷ್ಟೆ ಖರ್ಚು ಮಾಡಿದರು ಅವರು ಗೆಲ್ಲುವುದಿಲ್ಲ. ಮತದಾರರು ಇವೆಲ್ಲವನ್ನು ಅರ್ಥಮಾಡಿಕೊಂಡು ಬಹುಮತ ಬರುವ ನಮ್ಮ ಸರ್ಕಾರಕ್ಕೆ ಚಾಮುಂಡೇಶ್ವರಿಯಲ್ಲಿ ಶಾಸಕನನ್ನು ಆರಿಸಿ ಕಳಿಸಬೇಕು’ ಎಂದರು.

ಕಾಂಗ್ರೆಸ್ ಮುಖಂಡರಾದ ಕೆ.ಮರೀಗೌಡ, ಕೂರ್ಗಳ್ಳಿ ಮಹದೇವು, ರಾಕೇಶ್ ಪಾಪಣ್ಣ, ಲೇಖಾ ವೆಂಕಟೇಶ್, ಕೃಷ್ಣಕುಮಾರ್ ಸಾಗರ್, ಉದ್ಬೂರು ಕೃಷ್ಣ, ಚೌಡನಾಯಕ, ಕುಮಾರ್, ಜೆ.ಜೆ ಆನಂದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಗುರುಸ್ವಾಮಿ, ಜೆ.ಸತೀಶ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.