
ಮೈಸೂರು: ‘ಹಿಂಸೆಗೆ ಪ್ರತಿ ಹಿಂಸೆ ಕನ್ನಡಿಗರ ಮನಸ್ಥಿತಿಯಲ್ಲ. ಅಖಂಡ ಕರ್ನಾಟಕದ ಕನಸು ಮತ್ತು ಸಾಂಸ್ಕೃತಿಕ ಅಸ್ಮಿತೆಯ ಹೃದಯ ವೈಶಾಲ್ಯತೆ ನಮ್ಮೆಲ್ಲರ ರಕ್ತಗತವಾದ ಗುಣವಾಗಿದೆ’ ಎಂದು ನಿವೃತ್ತ ಪ್ರಾಧ್ಯಾಪಕಿ ಎಚ್.ಎಂ. ಕಲಾಶ್ರೀ ಹೇಳಿದರು.
ನಗರದ ಕೃಷ್ಣಮೂರ್ತಿಪುರಂನ ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ಕಾಲೇಜಿನ ಕನ್ನಡ ವಿಭಾಗ ‘ನುಡಿಯತ್ನ’ ಕನ್ನಡ ಸಂಘವು ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ ಮತ್ತು ನಾಡಗೀತೆಗೆ ನೂರರ ಸಂಭ್ರಮದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
‘ರಾಷ್ಟ್ರೀಯತೆ ಪರಿಕಲ್ಪನೆಯಲ್ಲಿ ಕನ್ನಡ ನಾಡು–ನುಡಿ ನಡೆದು ಬಂದಿದೆ. ಭಾರತವನ್ನು ತಾಯಿಯೆಂದು, ಕರ್ನಾಟಕವನ್ನು ಮಗಳೆಂದು ಕರೆದುಕೊಂಡಂತಹ ರಾಜ್ಯ ನಮ್ಮದು’ ಎಂದರು.
‘ಹೊರ ರಾಜ್ಯದವರೊಂದಿಗೆ ಕನ್ನಡದಲ್ಲಿ ಮಾತನಾಡಿ ಅವರಿಗೆ ನಮ್ಮ ಭಾಷೆ ಕಲಿಸಬೇಕು. ತಂತ್ರಜ್ಞಾನ ಮತ್ತು ಇಂಗ್ಲಿಷನ್ನು ಕಲಿಕೆಗೆ ಹಾಗೂ ಸಂವಹನಕ್ಕಾಗಿ ಬಳಸಬೇಕೆ ಹೊರತು ನಮ್ಮ ಮಾತೃಭಾಷೆಯನ್ನು ಬಿಡಬಾರದು’ ಎಂದು ಹೇಳಿದರು.
‘ಯುವಜನತೆ ಕನ್ನಡವನ್ನು ಬಳಸುವ ಮೂಲಕ ಉಳಿಸಬೇಕು’ ಎಂದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಯನಕುಮಾರಿ, ಐಕ್ಯೂಎಸಿ ಸಂಚಾಲಕಿ ಕೆ.ಎಸ್. ಸುಕೃತಾ, ಕನ್ನಡ ವಿಭಾಗದ ಮುಖ್ಯಸ್ಥೆ ವಿನೋದಾ, ಅಧ್ಯಾಪಕರಾದ ಬಿ.ಎನ್. ಮಾರುತಿ ಪ್ರಸನ್ನ, ಅರುಣ್ ಕುಮಾರ್ ಪಾಲ್ಗೊಂಡಿದ್ದರು.
ವರ್ಷಾ ನಿರೂಪಿಸಿದರು. ರಕ್ಷಿತಾ ಸ್ವಾಗತಿಸಿದರು. ವಿನೋದಾ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.