ADVERTISEMENT

ಕಬಿನಿಯಿಂದ ನದಿಗೆ 20 ಸಾವಿರ ಕ್ಯುಸೆಕ್ ನೀರು

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 15:15 IST
Last Updated 13 ಜುಲೈ 2024, 15:15 IST
<div class="paragraphs"><p>ಕಬಿನಿ ಜಲಾಶಯ</p></div>

ಕಬಿನಿ ಜಲಾಶಯ

   

ಎಚ್.ಡಿ.ಕೋಟೆ (ಮೈಸೂರು): ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಶನಿವಾರ ಸಂಜೆಯಿಂದ 20ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಜಲಾಶಯದ 4 ಕ್ರೆಸ್ಟ್‌ ಗೇಟ್ ಮೂಲಕ 17ಸಾವಿರ ಮತ್ತು ವಿದ್ಯುತ್ ಉತ್ಪಾದನಾ ಘಟಕದ ಮೂಲಕ 3ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ.

ADVERTISEMENT

ಜಲಾಶಯದ ಗರಿಷ್ಠ ಮಟ್ಟ 2,284 ಅಡಿಗಳಾಗಿದ್ದು, ಶನಿವಾರದ ನೀರಿನ ಮಟ್ಟ 2,283.30 ಅಡಿ ಇತ್ತು. ಸಂಗ್ರಹಣಾ ಸಾಮರ್ಥ್ಯ 19.55 ಟಿಎಂಸಿ ಆಗಿದ್ದು, ಸದ್ಯ 18.75 ಟಿಎಂಸಿ ನೀರಿದೆ. ಎಡದಂಡೆ ಹಾಗೂ ಬಲದಂಡೆ ನಾಲೆಗೆ ನೀರು ಹರಿಸಲಾಗುತ್ತಿಲ್ಲ. ಈಗ ಬಿಡುತ್ತಿರುವ ನೀರು ತಮಿಳುನಾಡಿಗೆ ಹರಿಯಲಿದೆ.

20ಸಾವಿರ ಕ್ಯುಸೆಕ್‌ ನೀರು ಹರಿಸುತ್ತಿರುವುದರಿಂದಾಗಿ, ಜಲಾಶಯದ ಮುಂದಿನ ಸೇತುವೆ ಮೇಲೆ ನೀರು ಹರಿಯುತ್ತಿದೆ. ನೀರಿನ ಪ್ರಮಾಣ ಹೆಚ್ಚಾದರೆ ಸೇತುವೆ ಮತ್ತಷ್ಟು ಮುಳುಗಡೆ ಆಗಲಿದೆ. ಬಿದರಹಳ್ಳಿ, ಎನ್. ಬೇಗೂರು ಸುತ್ತಮುತ್ತಲ ಗ್ರಾಮಗಳಿಗೆ ತೆರಳುವವರು ಸರಗೂರು ಮತ್ತು ಸಾಗರೆ ಮೂಲಕ ಸಂಚರಿಸಬೇಕಾಗುತ್ತದೆ.

ಕೇರಳದ ವಯನಾಡು ಜಿಲ್ಲೆಯಲ್ಲಿ ಎರಡು ದಿನಗಳಿಂದ ಸತತವಾಗಿ ಮಳೆ ಬೀಳುತ್ತಿದ್ದು, ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಕಪಿಲ ನದಿಯ ಪಾತ್ರದಲ್ಲಿರುವ ಮತ್ತು ಎರಡೂ ದಂಡೆಯಲ್ಲಿ ವಾಸಿಸುತ್ತಿರುವ ಜನರು ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ ಎಂದು ತಹಶೀಲ್ದಾರ್ ಶ್ರೀನಿವಾಸ ತಿಳಿಸಿದರು.

ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 2,269.22 ಅಡಿ ನೀರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.